ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿಗೆ ಚೌಟ ಮಾಸ್ಟರ್ ಪ್ಲಾನ್!
– ಬಂದರು ಅಭಿವೃದ್ಧಿಗೆ ಪ್ಲಾನ್, ರೈಲ್ವೆ, ಹೆದ್ದಾರಿ ಸಚಿವರ ಭೇಟಿ
– ಕಾರ್ಖಾನೆ ಸ್ಥಾಪನೆ: ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮಾತುಕತೆ
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಸಂಸದನಾಗಿ ಪ್ರತಿಜ್ಞೆ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಮೊದಲ ಅಧಿವೇಶನದ ಸಮಯದಲ್ಲಿ ಹಲವು ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಕರಾವಳಿ ಜಿಲ್ಲೆಯ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಬಂದರು ಅಭಿವೃದ್ಧಿಗೆ ಪ್ಲಾನ್
ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿಯಾಗಿ ಎನ್ಎಮ್ಪಿಎ ಯ ಅಭಿವೃದ್ಧಿಯ ದೃಷ್ಟಿಯಿಂದ ಇರುವ ಸಾಧ್ಯತೆಗಳು, ಸಾಗರ್ಮಾಲಾ ಯೋಜನೆ ಅಡಿಯಲ್ಲಿ ಲಕ್ಷದ್ವೀಪಕ್ಕೆ ತೆರಳುವ ಹಡಗುಗಳಿಗೆ ಮೀಸಲಾದ ಜೆಟ್ಟಿ ಮತ್ತು ಕ್ರೂಸ್ ಟರ್ಮಿನಲ್ ನಿರ್ಮಾಣದ ಕುರಿತು ಚರ್ಚೆ ನಡೆಸಿದರು.
ರೈಲ್ವೆ ಸಚಿವರ ಭೇಟಿ
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ದೆಹಲಿಯ ಸಚಿವಾಲಯದಲ್ಲಿ ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ರೈಲ್ವೆ ಯೋಜನೆಗಳ ಪ್ರಗತಿ, ಸಮಸ್ಯೆ ಮತ್ತು ಸಾಧ್ಯತೆಗಳ ಕುರಿತು ಚರ್ಚಿಸಿದ್ದಾರೆ.
ಹೆದ್ದಾರಿ ಸಚಿವರ ಭೇಟಿ
ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟ ಕಾಮಗಾರಿಗಳ ಕುರಿತು ಚರ್ಚಿಸಿದ್ದು, ಶಿರಾಡಿ ಘಾಟಿಯ ಮೂಲಕ ಹಾದು ಹೋಗುವ ಮಂಗಳೂರು – ಬೆಂಗಳೂರು ನಡುವಿನ ರಸ್ತೆ ಪ್ರಯಾಣದ ಅವಧಿಯನ್ನು ಕಡಿಮೆ ಮತ್ತು ಸುಗಮಗೊಳಿಸಲು ಕೈಗೊಳ್ಳಬಹುದಾದ ಯೋಜನೆಗಳ ಕುರಿತು ಅಧ್ಯಯನ ನಡೆಸುವಂತೆ ಸಂಸದರು ಕೇಳಿಕೊಂಡಿದ್ದಾರೆ.
ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮಾತುಕತೆ
ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ದಕ್ಷಿಣ ಕನ್ನಡದಲ್ಲಿ ಪೆಟ್ರೋಲಿಯಂ ಇಲಾಖೆಗೆ ಸಂಬಂಧಿಸಿದ ಮತ್ತು ಜಿಲ್ಲೆಯ ಅಭಿವೃದ್ಧಿ ವಿಷಯಗಳಿಗೆ ಸ್ಪಂದಿಸುವಂತೆ ಕೇಳಿಕೊಂಡರು. ಜತೆಗೆ ಗ್ರೀನ್ ಹೈಡ್ರೋಜನ್ ಘಟಕಗಳನ್ನು ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಸ್ಥಾಪಿಸುವ ಸಾಧ್ಯತೆಗಳ ಬಗ್ಗೆ ಹಾಗೂ ಅದರಿಂದ ಸೃಷ್ಟಿಯಾಗುವ ಉದ್ಯೋಗಗಳನ್ನು ಸ್ಥಳೀಯರಿಗೆ ನೀಡುವಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಮಾಡಿದರು.
ಕೇಂದ್ರ ಉಕ್ಕು ಸಚಿವ ಎಚ್ಡಿ ಕುಮಾರಸ್ವಾಮಿ ಅವರನ್ನು ಕೂಡ ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಾರ್ಗದರ್ಶನ ಮತ್ತು ಸಹಕಾರವನ್ನು ನೀಡುವಂತೆ ಚೌಟ ಮನವಿ ಮಾಡಿದರು.