ಕೌನ್ ಬನೇಗಾ ಕರೋಡ್ಪತಿ: 6.40 ಲ.ರೂ. ಗೆದ್ದ ಮಂಗಳೂರಿನ ಅಪೂರ್ವಾ ಶೆಟ್ಟಿ!
– ತುಳುವಿನಲ್ಲಿಯೇ ಮಾತನಾಡಿ ಗಮನ ಸೆಳೆದ ಕುಡ್ಲದ ಹುಡುಗಿ
– ತುಳುನಾಡ ಪ್ರತಿಭೆಗೆ ನಮ್ಮೂರ್ ಎಕ್ಸ್ ಪ್ರೆಸ್ ಅಭಿನಂದನೆಗಳು
NAMMUR EXPRESS NEWS
ಮಂಗಳೂರು: ಸೋನಿ ಟಿವಿಯಲ್ಲಿ ಪ್ರಸಾರವಾಗುವ “ಕೌನ್ ಬನೇಗಾ ಕರೋಡ್ಪತಿ’ (ಕೆಬಿಸಿ) ಕಾರ್ಯಕ್ರಮದಲ್ಲಿ ಮಂಗಳೂರು ಪಂಪ್ವೆಲ್ನ ಯುವತಿ ಅಪೂರ್ವಾ ಶೆಟ್ಟಿ 6.40 ಲ.ರೂ. ಬಹುಮಾನ ಗೆದ್ದುಕೊಂಡಿದ್ದಾರೆ. ಅಲ್ಲದೆ ಅವರು ಕಾರ್ಯಕ್ರಮದ ವೇದಿಕೆಯಲ್ಲಿ ತಂದೆ ಮತ್ತು ಮಾವನ ಜತೆ ತುಳುವಿನಲ್ಲೇ ಮಾತನಾಡಿರುವುದಕ್ಕೆ ತುಳುವರಿಂದ ಶ್ಲಾಘನೆ ವ್ಯಕ್ತವಾಗಿದೆ.
ಸೆ. 27ರಂದು ರಾತ್ರಿ ಅಪೂರ್ವಾ ಅವರ ಸಂಚಿಕೆ ಪ್ರಸಾರವಾಗಿದೆ. ಅಪೂರ್ವಾ 10 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದರು. 11ನೇ ಪ್ರಶ್ನೆಯಾಗಿ “ಮ್ಯಾನ್ ಗ್ರೋವ್ ಫಾರೆಸ್ಟ್(ಕಾಂಡ್ಲಾವನ) ಹೆಚ್ಚಿರುವ ದೇಶ ಯಾವುದು?’ ಪ್ರಶ್ನೆಯನ್ನು ಕೇಳಲಾಗಿತ್ತು. ಬ್ರೆಜಿಲ್, ನೈಜಿರೀಯಾ, ಬಾಂಗ್ಲಾದೇಶ ಹಾಗೂ ಇಂಡೋನೇಶ್ಯಾದ ಆಯ್ಕೆ ನೀಡಲಾಗಿತ್ತು. ಉತ್ತರಿಸಲು ಗೊಂದಲಕ್ಕೀಡಾದ ಅಪೂರ್ವಾ ಉತ್ತರಕ್ಕಾಗಿ ಮಾವನಿಗೆ ಕರೆ ಮಾಡಿದರು. ಅವರೊಂದಿಗೆ ತುಳುವಿನಲ್ಲೇ ಪ್ರಶ್ನೆ ಕೇಳಿದ್ದರು. ಅವರು ನೈಜೀರಿಯಾ ಆಗಿರಬೇಕೆಂದು ಉತ್ತರಿಸಿದ್ದರು. ಆ ಉತ್ತರದ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ, ತಪ್ಪಾಗಿ ಉತ್ತರಿಸಿದರೆ ಹಣ ಕಡಿತವಾಗುವುದರಿಂದ 10 ಪ್ರಶ್ನೆಗಳ ಉತ್ತರಕ್ಕೆ ದೊರಕಿದ್ದ 6.40 ಲಕ್ಷ ರೂ.ಗಳಿಗೇ ಖುಷಿ ಪಟ್ಟು ಸ್ಪರ್ಧೆಯಿಂದ ಹಿಂದೆ ಸರಿದರು.
ತುಳುವಿನಲ್ಲೇ ಸಂಭಾಷಣೆ ಸ್ಪರ್ಧೆಯ ವೇಳೆ ಅಪೂರ್ವಾ ಅವರು ಅಮಿತಾಬ್ ಬಚ್ಚನ್ ಅವರಲ್ಲಿ “ನನ್ನ ತಂದೆ ನಿಮ್ಮ ದೊಡ್ಡ ಅಭಿಮಾನಿ’ ಎಂದು ಹೇಳಿದಾಗ ಅಮಿತಾಭ್ ಬಚ್ಚನ್ ಆಕೆಯ ತಂದೆ ಲೋಕನಾಥ್ ಶೆಟ್ಟಿಗೆ ವೀಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಆಗ ಲೋಕನಾಥ ಶೆಟ್ಟಿ ಪುತ್ರಿ ಜತೆ ತುಳುವಿನಲ್ಲಿ ಮಾತನಾಡಿ ತುಳುವಿನ ಮಹತ್ವವನ್ನು ಮೆರೆಸಿದ್ದಾರೆ. ಲೋಕನಾಥ ಶೆಟ್ಟಿ ಅವರು ಅಮಿತಾಭ್ ಜತೆಗೆ ಮಾತನಾಡುತ್ತಾ ಆನಂದಭಾಷ್ಪ ಸುರಿಸಿದ್ದಾರೆ. ಆಗ ಅಪೂರ್ವಾ ಕಣ್ಣಲ್ಲೂ ನೀರು ಬರುವುದನ್ನು ನೋಡಿ ಅಮಿತಾಭ್ ಪೇಪರ್ ಕರ್ಚೀಫ್ ನೀಡಿದ್ದಾರೆ.
ಅಗರಿ ಪಾಲ್ತಾಜೆ ಶ್ರೀ ಲೋಕನಾಥ ಶೆಟ್ಟಿ ಹಾಗೂ ಶ್ರೀಮತಿ ಮಧುರಾ ಎಲ್ ಶೆಟ್ಟಿ ಇವರ ಸುಪುತ್ರಿಯಾದ ಅಪೂರ್ವ ಎಲ್.ಶೆಟ್ಟಿಯವರಿಗೆ ಹಾರ್ದಿಕ ಅಭಿನಂದನೆಗಳು