ಭೀಕರ ಅಪಘಾತಕ್ಕೆ 12 ಮಂದಿ ಬಲಿ!
– ಯಲ್ಲಾಪುರ, ರಾಯಚೂರಲ್ಲಿ ಅಪಘಾತ
– ಲಾರಿ ಪಲ್ಟಿಯಾಗಿ 12 ಮಂದಿ ದುರ್ಮರಣ, 13 ಜನರಿಗೆ ಗಾಯ
NAMMUR EXPRESS NEWS
ಯಲ್ಲಾಪುರ: ಲಾರಿ ಪಲ್ಟಿಯಾಗಿ 12 ಮಂದಿ ಸಾವನ್ನಪ್ಪಿರುವ ದುರ್ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಬಳಿ
ಜ. 22 ರಂದು ನಡೆದಿದೆ. ಕುಮಟಾದಲ್ಲಿ ಸಂತೆ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಹಣ್ಣು ಹಾಗೂ ತರಕಾರಿ ಹೊತ್ತು ಲಾರಿಯಲ್ಲಿ ಬರುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಲಾರಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಸವಣೂರು ತಾಲೂಕಿನ 28 ವ್ಯಾಪಾರಿಗಳು ಲಾರಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಗುಳ್ಳಾಪುರದ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಪರಿಣಾಮ 9 ಮಂದಿ ವ್ಯಾಪಾರಿಗಳು ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿದ್ದಾರೆ. ಅಲ್ಲದೆ, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮತ್ತಷ್ಟು ಜನರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಘಟನೆ ವೇಳೆ ಲಾರಿಯಲ್ಲಿ ಒಟ್ಟು 28 ಮಂದಿ ವ್ಯಾಪಾರಿಗಳು ಪ್ರಯಾಣಿಸುತ್ತಿದ್ದ. ಲಾರಿಯು ಸವಣೂರಿನಿಂದ ಕುಮಟಾಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು, ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ರಾಯಚೂರು: ಟೈರ್ ಸ್ಫೋಟಗೊಂಡು ವಾಹನ ಪಲ್ಟಿ, ನಾಲ್ವರು ಸ್ಥಳದಲ್ಲೇ ಸಾವು
ರಾಯಚೂರು: ಟೈರ್ ಸ್ಫೋಟಗೊಂಡು ವಾಹನ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ಬಳಿ ನಡೆದಿದೆ.
ಮಂತ್ರಾಲಯದಿಂದ ಹಂಪಿಯ ನರಹರಿ ಆರಾಧನೆಗೆ ತೆರಳಿದ್ದ ವಾಹನ ಅಪಘಾಕ್ಕೀಡಾಗಿದೆ. ಕ್ರೂಸರ್ ಚಾಲಕ ಶಿವ (24), ಮಂತ್ರಾಲಯದ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳಾದ ಅಯ್ಯವಂದನ್ (18), ಸುಜೇಂದ್ರ (22) ಹಾಗೂ ಅಭಿಲಾಷ್(20) ಮೃತ ದುರ್ದೈವಿಗಳು. 10 ಜನರಿಗೆ ಗಂಭೀರ ಗಾಯವಾಗಿದ್ದು, ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.