ಭಲೇ ಲೋಕಾಯುಕ್ತ..ರಾಜ್ಯವಾಗಲಿ ಭ್ರಷ್ಟಾಚಾರ ಮುಕ್ತ!
- ಸಣ್ಣ ನೌಕರರ ಹಿಂದೆ ಬೀಳುವ ಜತೆಗೆ ದೊಡ್ಡ ಕುಳಗಳ ದಾಳಿ ನಡೆಯಲಿ: ಕೆ. ಆರ್. ಎಸ್ ಪಕ್ಷದ ಆಗ್ರಹ
- ಉನ್ನತ ಅಧಿಕಾರಿಗಳು, ಶಾಸಕರು, ಸಚಿವರ ಮೇಲೂ ಇರಲಿ ಕಣ್ಣು!
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಅವಿರತ ಹೋರಾಟದ ಮೂಲಕ ಹೊಸ ಭರವಸೆ ಮೂಡಿಸಿರುವ ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ನೇತೃತ್ವದ ಕೆಆರ್ ಎಸ್ ಪಕ್ಷ ರಾಜ್ಯದಲ್ಲಿ ಅಕ್ರಮ ಅಸ್ತಿ, ಹಣ ಗಳಿಕೆಯಲ್ಲಿ ನಿರತರಾಗಿರುವ ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕೀಯ ನಾಯಕರ ವಿರುದ್ಧವೂ ಲೋಕಾಯುಕ್ತ ದಾಳಿ ನಡೆಸುವಂತೆ ಅಗ್ರಹಿಸಿದೆ.
ಕೇವಲ ಕೆಳಹಂತದ ಅಧಿಕಾರಿಗಳ ವಿರುದ್ಧದ ದಾಳಿಗೆ ಸೀಮಿತಗೊಳಿಸದೆ IAS/IPS/IFS/KAS/KSPS ಹಾಗೂ ಭ್ರಷ್ಟಶಾಸಕರು, ಮಂತ್ರಿಗಳ ವಿರುದ್ಧವು ದಾಳಿ ಮಾಡಿ ಲೋಕಾಯುಕ್ತದ ಪಾವಿತ್ರ್ಯತೆಯನ್ನು ಮತ್ತು ಘನತೆಯನ್ನು ಹೆಚ್ಚಿಸಬೇಕೆಂದು ನ್ಯಾಯಮೂರ್ತಿಗಳಾದ ಬಿ. ಎಸ್. ಪಾಟೀಲ್ ರವರನ್ನು ಪಕ್ಷದ ವತಿಯಿಂದ ಆಗ್ರಹಿಸಲಾಗುತ್ತಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ನ್ಯಾಯಮೂರ್ತಿ ಎನ್.ವೆಂಕಟಾಚಲ ಹಾಗೂ ನ್ಯಾಯಮೂರ್ತಿ ಡಾ.ಸಂತೋಷ ಹೆಗಡೆ ಅವರು ಲೋಕಾಯುಕ್ತ ಸಂಸ್ಥೆಗೆ ಗಳಿಸಿಕೊಟ್ಟ ಗೌರವ ಮತ್ತು ಘನತೆಯನ್ನು ಹೆಚ್ಚಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಗುರಿ ಎಂದು ಪಕ್ಷ ಹೇಳಿದೆ.
ಪ್ರತಿ ತಾಲೂಕಿನಲ್ಲೂ ಹೋರಾಟ ಮಾಡುತ್ತಿರುವ ಏಕೈಕ ಪಕ್ಷ
ಕರ್ನಾಟಕದ ಪ್ರತಿ ತಾಲೂಕಲ್ಲಿ ಕೆ ಆರ್ ಎಸ್ ಪಕ್ಷ ತಾಲೂಕು ಕಚೇರಿ, ರಿಜಿಸ್ಟರ್ ಕಚೇರಿ ಹೀಗೆ ಸರ್ಕಾರಿ ಕಚೇರಿಗಳಿಗೆ ನುಗ್ಗಿ ಅಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಎಳೆಯುತ್ತಿದೆ. ಇನ್ನು ಮೊಬೈಲ್ ಮೂಲಕವೇ ಸ್ಟಿಂಗ್ ಆಪರೇಷನ್ ಮಾಡಿ ಲಂಚಕ್ಕೆ ಕೈ ಒಡ್ದುವ ಸರ್ಕಾರಿ ಅಧಿಕಾರಿಗಳು, ನೌಕರರ ಮೈ ಚಳಿಯನ್ನು ಕೆ.ಆರ್. ಎಸ್ ಪಕ್ಷದ ಸದಸ್ಯರು ಬಿಡಿಸಿದ್ದಾರೆ. ಇದೇ ಭಯದಿಂದ ಸರ್ಕಾರ ಒಮ್ಮೆ ಸರ್ಕಾರಿ ಕಚೇರಿ ಒಳಗೆ ಮೊಬೈಲ್ ಚಿತ್ರೀಕರಣ ನಿಷೇಧಿಸಿ ಆಮೇಲೆ ಜನರಿಂದ ಭಾರೀ ವಿರೋಧ ವ್ಯಕ್ತವಾದ ಮೇಲೆ ಹಿಂಪಡೆದಿತ್ತು.
ಪ್ರತಿ ತಾಲೂಕಲ್ಲಿ ಲೋಕಾಯುಕ್ತ ಭಯ ಇರಬೇಕು
ತಾಲೂಕು ಕೇಂದ್ರಗಳಲ್ಲಿನ ಅಧಿಕಾರಿಗಳು, ರಾಜಕಾರಣಿಗಳು, ಕೆಲವು ಗುತ್ತಿಗೆದಾರರು ಅಕ್ರಮದ ಮೂಲಕ ಹಣ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇದರಿಂದ ಸಮಾಜ, ಜನ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಪ್ರತಿ ತಾಲೂಕಲ್ಲಿ ತಿಂಗಳಿಗೆ ಲೋಕಾಯುಕ್ತ ಅದಾಲತ್ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.