ಬಸ್ಸು, ರೈಲು, ಟ್ರಾಫಿಕ್ ಪುಲ್ ರಶ್..!
– ದೀಪಾವಳಿ ಹಬ್ಬಕ್ಕೆ ಊರುಗಳಿಗೆ ತೆರಳುತ್ತಿರುವ ಜನ
– ಖಾಸಗಿ ಬಸ್ಗಳ ಟಿಕೆಟ್ ದರ ದುಪ್ಪಟ್ಟು ಏರಿಕೆ
– ಹೈವೇಗಳಲ್ಲಿ ವಾಹನ ಹೆಚ್ಚಳ: ಓಡಿಸುವಾಗ ಹುಷಾರ್!
NAMMUR EXPRESS NEWS
ಬೆಂಗಳೂರು: ನಾಡಿನ ಪ್ರಸಿದ್ಧ ಹಬ್ಬ ದೀಪಾವಳಿಯ ಪ್ರಯುಕ್ತ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಜನರು ಊರುಗಳತ್ತ ತೆರಳುತ್ತಿದ್ದು, ಬಸ್ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.
ಶುಕ್ರವಾರ ಕೆಲಸ ಮುಗಿಸಿಕೊಂಡು ಬಹುತೇಕ ಜನರು ರಾತ್ರಿಯೇ ಪ್ರಯಾಣಿ ಬೆಳೆಸಿದ್ದು, ನಗರದ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಶಾಂತಿನಗರ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ಬಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ಜಮಾಯಿಸಿದ್ದು, ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಜೊತೆಗೆ ಬಿಎಂಟಿಸಿ ಬಸ್ಗಳನ್ನು ಸಹ ವಿವಿಧ ಜಿಲ್ಲೆಗಳಿಗೆ ಸಂಚರಿಸುತ್ತಿದ್ದು, ಎಲ್ಲಾ ಬಸ್ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರು. ಶಕ್ತಿಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವ ಹಿನ್ನೆಲೆಯಲ್ಲಿ ಸಾಮಾನ್ಯ ಬಸ್ಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿ ಕಂಡು ಬಂತು.
ರೈಲುಗಳು ಫುಲ್ ರಶ್!
ದೇಶದಾದ್ಯಂತ ಸಡಗರದಿಂದ ದೀಪಾವಳಿ ಹಬ್ಬವನ್ನು ಆಚರಿಸಲಿದ್ದು, ಉದ್ಯೋಗಕ್ಕಾಗಿ ರಾಜಧಾನಿಯಲ್ಲಿ ನೆಲೆಸಿರುವ ವಿವಿಧ ರಾಜ್ಯಗಳ ಜನರು ಸಹ ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದು, ರೈಲುಗಳಲ್ಲೂ ಸಹ ಜಾಗವಿಲ್ಲದಂತೆ ಪ್ರಯಾಣಿಸುತ್ತಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯೇ ಮುಂಗಡ ಟಿಕೇಟ್ ಕೂಡ ಕಾಯ್ದಿರಿಸಿಕೊಂಡು ಪ್ರಯಾಣ ಬೆಳೆಸುತ್ತಿದ್ದಾರೆ.
ಖಾಸಗಿ ಬಸ್ಗಳ ಟಿಕೆಟ್ ದರ ದುಪ್ಪಟ್ಟಾದರೂ ಬಸ್ ಗಳಿಗೆ ಡಿಮಾಂಡ್: ಹೆಚ್ಚಿನ ಸಂಖ್ಯೆಯಲ್ಲಿ ಜನರು ಊರುಗಳತ್ತ ತೆರಳುತ್ತಿದ್ದು ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ಬಸ್ ಮಾಲೀಕರು ಟಿಕೇಟ್ ದರವನ್ನು ದುಪ್ಪಟ್ಟು ಮಾಡಿದ್ದು, ದುಪ್ಪಟ್ಟು ದರವನ್ನು ಕೂಡ ಲೆಕ್ಕಿಸದೆ ಜನರು ತಮ್ಮ ಊರುಗಳತ್ತ ಪಯಣ ಬೆಳೆಸಿದ್ದಾರೆ.
ಎಲ್ಲಾ ಕಡೆ ಜಾಮ್!
ಶುಕ್ರವಾರ ರಾತ್ರಿಯಿಂದಲೇ ಮೆಜೆಸ್ಟಿಕ್ ಹಾಗೂ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಮೆಜೆಸ್ಟಿಕ್ ಸುತ್ತಮುತ್ತ ತಡರಾತ್ರಿಯವರೆಗೂ ಸಂಚಾರಿ ದಟ್ಟಣೆ ಉಂಟಾಗಿತ್ತು.
ಶನಿವಾರವೂ ಜನವೋ ಜನ!
ಶನಿವಾರವೂ ರಾಜ್ಯದ ಎಲ್ಲಾ ಕಡೆ ಜನ ತಮ್ಮ ಊರಿಗೆ ಹೋಗುತ್ತಿರುವುದು ಕಂಡು ಬಂತು. ಇನ್ನು ಎಲ್ಲಾ ರಸ್ತೆ ಮೇಲೆ ಹೆಚ್ಚು ವಾಹನಗಳು ಕಂಡು ಬಂದವು.