ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಭೇಟಿ ಮಾಡಿದ ಡಾ.ಆರತಿ ಕೃಷ್ಣ
– ಸರ್ವ ಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗಿ
– ಪ್ರಪಂಚದಾದ್ಯಂತ ವಿವಿಧ ಧರ್ಮದ ಸಂತರು, ಧಾರ್ಮಿಕ ಮುಖಂಡರುಗಳ ಉಪಸ್ಥಿತಿ
NAMMUR EXPRESS NEWS
ಇಟಲಿ: ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ಸರ್ಕಾರದ ಉಪಾಧ್ಯಕ್ಷರಾದ ಡಾ ಆರತಿ ಕೃಷ್ಣ ಅವರು ನ. 30ರಂದು ವ್ಯಾಟಿಕನ್ ಸಿಟಿಯ ಪಾಪಲ್ ಹೌಸ್ ನಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನ ‘ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದರು.
ಶ್ರೀ ನಾರಾಯಣ ಧರ್ಮ ಸಂಗೋಂ ಟ್ರಸ್ಟ್ ವತಿಯಿಂದ ಈ ಸರ್ವ ಧರ್ಮ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈ ಸಮ್ಮೇಳನವು 1924ರಲ್ಲಿ ದೈವಂಗತರಾದ ಶ್ರೀ ನಾರಾಯಣ ಗುರು ರವರ ಪ್ರಥಮ ಸರ್ವ ಧರ್ಮ ಸಮ್ಮೇಳನದ ಸ್ಮರಣಾರ್ಥವಾಗಿದೆ. ಇಟಲಿ ದೇಶದ ವ್ಯಾಟಿಕನ್ ಸಿಟಿಯಲ್ಲಿ ಜರುಗಿದ ಸರ್ವ ಧರ್ಮ ಸಮ್ಮೇಳನಕ್ಕೆ ಪ್ರಪಂಚದಾದ್ಯಂತ ವಿವಿಧ ಧರ್ಮದ ಸಂತರು, ಧಾರ್ಮಿಕ ಮುಖಂಡರುಗಳು ಭಾಗಿಯಾಗಿದ್ದರು. ಪೋಪ್ ಫ್ರಾನ್ಸಿಸ್ ಅವರು ಶಾಂತಿ ಸಂದೇಶ ನೀಡುತ್ತಾ “ಗೌರವ, ಘನತೆ, ಸಹಾನುಭೂತಿ, ಸಮನ್ವಯ ಮತ್ತು ಭಾತೃತ್ವದ ಒಗ್ಗಟ್ಟಿನ’ ಸಂಸ್ಕೃತಿಯನ್ನು ಬೆಳೆಸಲು ಎಲ್ಲಾ “ಸದ್ಭಾವನೆಯ ಜನರ” ನಡುವೆ ಸಹಕಾರಕ್ಕಾಗಿ ಪ್ರಾರ್ಥಿಸಿದರು. ಪ್ರತಿ ಧರ್ಮವು ತನ್ನದೇ ಧಾರ್ಮಿಕ ನಂಬಿಕೆಗಳಲ್ಲಿ ದೃಢವಾಗಿರುತ್ತವೆಯಾದರೂ, ವಿಭಿನ್ನ ಧರ್ಮಗಳ ಪ್ರತಿನಿಧಿಗಳು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ “ಉತ್ತಮ ಮಾನವೀಯತೆಯ ಸಮಾಜವನ್ನು ನಿರ್ಮಿಸಬಹುದು” ಎಂದು ಸಂದೇಶವನ್ನು ಸಾರಿದರು. ಪ್ರಪಂಚದ ನಾನಾ ದೇಶಗಳಲ್ಲಿ ವಿವಿಧ ಕಾರಣಗಳಿಗೆ ತಮ್ಮ ಬದುಕು ಕಟ್ಟಿಕೊಂಡಿರುವ ಭಾರತೀಯರು ಒಂದಲ್ಲಾ ಒಂದು ರೀತಿ ಆಯಾ ರಾಷ್ಟ್ರ, ಆ ಭಾಗದಲ್ಲಿನ ಧರ್ಮಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಎಂದು ಬಣ್ಣಿಸಿದರು.
ಭವಿಷ್ಯದ ಜಗತ್ತು ನಿರ್ಮಾಣಕ್ಕೆ ಡಾ.ಆರತಿ ಕೃಷ್ಣ ಕರೆ
ಸಮ್ಮೇಳನದಲ್ಲಿ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣ ಭಾಗವಹಿಸಿ ಮಾತನಾಡಿ, “ಶ್ರೀ ನಾರಾಯಣ ಗುರುಗಳು ಮತ್ತು ಎಲ್ಲಾ ಧರ್ಮಗಳ ಧಾರ್ಮಿಕ ಗುರುಗಳು ಮತ್ತು ಪ್ರವಾದಿಗಳು ತೋರಿಸಿದ ಸಾಮರಸ್ಯ, ಸಹಾನುಭೂತಿ, ಗೌರವ ಮತ್ತು ಶಾಂತಿಯ ದೃಷ್ಟಿಯನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.ಹವಾಗುಣ ಬದಲಾವಣೆ, ಸಾಂಕ್ರಾಮಿಕ ರೋಗಗಳು, ಬಡತನ, ಸುಸ್ಥಿರ ಅಭಿವೃದ್ಧಿ, ಶಿಕ್ಷಣ ಇತ್ಯಾದಿಗಳಂತಹ ಮನುಕುಲ ಎದುರಿಸುತ್ತಿರುವ ಜಾಗತಿಕ ಸವಾಲುಗಳನ್ನು ನಾವು ಸಾಮೂಹಿಕವಾಗಿ ನಿಭಾಯಿಸಬೇಕು. ಆಗ ಮಾತ್ರ ನಾವು ನಮ್ಮ ಮಕ್ಕಳಿಗೆ ಉತ್ತಮವಾದ ಜಗತ್ತನ್ನು ಮಾಡಿಕೊಡಬಹುದು ಎಂದರು.