ಕರ್ನಾಟಕ ಕ್ರೈಂ ಟಾಪ್ ನ್ಯೂಸ್
– ಮಕ್ಕಳೊಂದಿಗೆ ಕಾಲುವೆಗೆ ಜಿಗಿದ ತಾಯಿ: ನಾಲ್ವರು ಮಕ್ಕಳು ಸಾವು!
– ಸಕಲೇಶಪುರ: ಪ್ರೇಯಸಿಯಿಂದ ಮನನೊಂದು ವಿಡಿಯೋ ಮಾಡಿ ಯುವಕ ಆತ್ಮಹತ್ಯೆ
– ಬೆಳಗಾವಿ: ಅಂಗನವಾಡಿಗೆ ನುಗ್ಗಿ ಶಿಕ್ಷಕಿ ಮೇಲೆ ಅತ್ಯಾಚಾರ ಯತ್ನ
– ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಓರ್ವನ ಬಂಧನ
– ಕೊಪ್ಪಳ: ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯನ್ನೇ ಹತ್ಯೆ ಮಾಡಿದ ಪತಿ
– ಬೆಂಗಳೂರು: ಪ್ರಿಯತಮ ಆತ್ಮಹತ್ಯೆ: ನೊಂದು ವಿವಾಹಿತ ಮಹಿಳೆ ಸಾವಿಗೆ ಶರಣು
– ಯಲ್ಲಾಪುರ: ಅಪಹರಣಕಾರರ ಬಂಧಿಸುವ ವೇಳೆ ಪೊಲೀಸರ ಮೇಲೆ ದಾಳಿ
– ಕಾರವಾರ : ರಾಸಾಯನಿಕ ಸೋರಿಕೆಯಿಂದ 12ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ
NAMMUR EXPRESS NEWS
ವಿಜಯಪುರ: ವಿಜಯಪುರ ಜಿಲ್ಲೆಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ (ಬೇನಾಳ ಬ್ರಿಜ್ , ಪಾರ್ವತಿಕಟ್ಟಾ ಸೇತುವೆ ಸಮೀಪ) ಮಹಿಳೆಯೊಬ್ಬಳು ಸೋಮವಾರ ತನ್ನ ನಾಲ್ವರು ಮಕ್ಕಳೊಂದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ನಾಲ್ವರು ಮಕ್ಕಳು ಸಾವಿಗೀಡಾಗಿದ್ದಾರೆ. ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸಾವಿಗೀಡಾದವರನ್ನು ಕೊಲ್ಹಾರ ತಾಲ್ಲೂಕಿನ ತೆಲಗಿ ಗ್ರಾಮದ ತನು ನಿಂಗರಾಜ ಭಜಂತ್ರಿ (5), ರಕ್ಷಾ ನಿಂಗರಾಜ ಭಜಂತ್ರಿ (3) ಹಾಗೂ ಅವಳಿ ಮಕ್ಕಳಾದ ಹಸೇನ ನಿಂಗರಾಜ ಭಜಂತ್ರಿ, ಹುಸೇನ ನಿಂಗರಾಜ ಭಜಂತ್ರಿ (13 ತಿಂಗಳು) ಎಂದು ಗುರುತಿಸಲಾಗಿದೆ. ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮೃತ ಮಕ್ಕಳ ತಾಯಿ ಭಾಗ್ಯಳನ್ನು ಮೀನುಗಾರರು ಕಾಲುವೆಯಿಂದ ಎತ್ತಿ ಬದುಕಿಸಿದ್ದಾರೆ. ಕೌಟುಂಬಿಕ ಕಲಹದಿಂದ ನೊಂದ ಮಹಿಳೆ ತನ್ನ ನಾಲ್ವರು ಮಕ್ಕಳೊಂದಿಗೆ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಸ್ಥಳದಲ್ಲಿ ಸಂಬಂಧಿಗಳ ರೋಧನೆ ಮುಗಿಲು ಮಟ್ಟಿದೆ.
ಪ್ರೇಯಸಿಯಿಂದ ಮನನೊಂದು ವಿಡಿಯೋ ಮಾಡಿ ಯುವಕ ಆತ್ಮಹತ್ಯೆ
ಸಕಲೇಶಪುರ: ಪ್ರೀತಿಸಿದ ಯುವತಿಯಿಂದ ಮನನೊಂದು ವಿಷ ಸೇವಿಸಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯುವಕ, ಚಿಕಿತ್ಸೆ ಫಲಿಸದೇ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸಾಯುವ ಮುನ್ನ ಆತ್ಮಹತ್ಯೆಗೆ ಕಾರಣ ತಿಳಿಸಿ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾಲೂಕಿನ ಬಾಳೆಗದ್ದೆ ಗ್ರಾಮದ ಕವನ್ (30) ಆತ್ಮಹತ್ಯೆಗೆ ಶರಣಾದ ಯುವಕ. ಸಾಯುವ ಮುನ್ನ ಕವನ್ ಸಾವಿಗೆ ಕಾರಣ ತಿಳಿಸಿ ವೀಡಿಯೋ ಮಾಡಿಟ್ಟು ಒಂದು ವಾರದ ಹಿಂದೆ ವಿಷ ಸೇವಿಸಿದ್ದ. ನನ್ನ ಸಾವಿಗೆ ತಾನು ಪ್ರೀತಿಸಿದ ಹುಡುಗಿ ಹಾಗೂ ವಿನಯ್ ಎಂಬಾತ ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.
ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನ
ಬೆಳಗಾವಿ : ಜಿಲ್ಲೆಯ ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಜರುಗಿದೆ. ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿರುವ ಅಡುಗೆ ಸಿಬ್ಬಂದಿಗೆ ಶೌಚಾಲಯ ಸ್ವಚ್ಛ ಮಾಡುವಂತೆ ಅಡುಗೆ ಮಾಡುವ ಮಹಿಳೆಗೆ ಶಿಕ್ಷಕಿ ಹೇಳಿದ್ದಾರೆ. ಈ ವಿಚಾರವನ್ನ ತನ್ನ ಗಂಡನಿಗೆ ಅಡುಗೆ ಸಿಬ್ಬಂದಿ ಸಾವಿತ್ರಿ ಕರ್ಲಟ್ಟಿ ಹೋಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡು ಅಂಗನವಾಡಿಗೆ ಆಗಮಿಸಿದ್ದ ಆರೋಪಿ ಸಿದ್ರಾಯಿ ಕರ್ಲಟ್ಟಿ, ತನ್ನ ಹೆಂಡತಿಗೆ ಶೌಚಾಲಯ ಕ್ಲಿನ್ ಮಾಡಲು ಹಚ್ಚುತ್ತಿಯಾ ಅಂತಾ ಅವಾಚ್ಯವಾಗಿ ನಿಂದಿಸಿದ್ದಾರೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ ಶಿಕ್ಷಕಿ ಸೀರೆ ಎಳೆದು ಮಾನಭಂಗ ಪಡಿಸಲು ಯತ್ನಿಸಿರುವುದಾಗಿ ಆರೋಪಿಸಲಾಗಿದೆ. ಇನ್ನು ಶಿಕ್ಷಕಿ ಬ್ರೈನ್ ಟ್ಯೂಮರ್ದಿಂದ ಬಳಲುತ್ತಿದ್ದು, ಮಾನಸಿಕ ಕಿರುಕುಳ ತಾಳಲಾರದೇ ಆತ್ಮಹತ್ಯೆಗೂ ಯತ್ನಿಸಿದ್ದಾರೆ.
ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಓರ್ವನ ಬಂಧನ
ಬೆಂಗಳೂರು : ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದ ವಿನಾಯಕನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಸೈಯದ್ ನಸ್ರು (30) ಎಂದು ಗುರುತಿಸಲಾಗಿದೆ. ಬಿಹಾರದ ಚಂಪರಣ್ ಮೂಲದ ಆರೋಪಿ ಸೈಯದ್ ನಸ್ರು, ಕೃತ್ಯ ನಡೆದ ಸ್ಥಳದಿಂದ 50 ಮೀಟರ್ ಅಂತರದಲ್ಲಿರುವ ಪ್ಲ್ಯಾಸ್ಟಿಕ್, ಬಟ್ಟೆ ಹೊಲಿಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿರುವುದಾಗಿ ಆರೋಪಿ ಸೈಯದ್ ನಸ್ರು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಪೊಲೀಸರು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಜನವರಿ 24ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
– ಕೊಪ್ಪಳ: ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯನ್ನೇ ಹತ್ಯೆ ಮಾಡಿದ ಪತಿ
ಕೊಪ್ಪಳ : ಕೊಪ್ಪಳದ ಗವಿಮಠದ ಮೈದಾನದಲ್ಲಿ ಜನನಿಬಿಡ ಪ್ರದೇಶದಲ್ಲಿಯೇ ಮಹಿಳೆಯೋರ್ವಳ ಬರ್ಬರ ಕೊಲೆಯಾಗಿದೆ. ದಕ್ಷಿಣ ಭಾರತದ ಕುಂಬಮೇಳ ಅಂತಲೇ ಖ್ಯಾತಿ ಪಡೆದಿರೋ ಗವಿಮಠದ ಜಾತ್ರೆ ಇದೇ ಜನವರಿ 15 ರಿಂದ ಆರಂಭವಾಗಲಿದೆ. ಜಾತ್ರೆ ಅಂಗವಾಗಿ ಎಲ್ಲಾ ಸಿದ್ದತೆಗಳು ಜೋರಾಗಿ ನಡೆಯುತ್ತಿವೆ. ಜಾತ್ರೆಗೆ ರಾಜ್ಯದ ವಿವಿಧಡೆಯಿಂದ ವ್ಯಾಪರಸ್ಥರು ಬಂದಿದ್ದು, ಅವರಿಗಾಗಿಯೇ ಮಠದ ಮುಂದಿನ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ವ್ಯಾಪರಸ್ಥರು, ತಮಗೆ ನಿಗದಿ ಪಡಿಸಿದ ಜಾಗದಲ್ಲಿ ಸ್ಟಾಲ್ ಗಳನ್ನು ಹಾಕುತ್ತಿದ್ದಾರೆ. ಇದರ ಮಧ್ಯೆ ಕೊಲೆಯೊಂದು ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಹೆಂಡ್ತಿಯನ್ನೇ ಪತಿರಾಯ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ಭುವನಹಳ್ಳಿ ಗ್ರಾಮದ ನಿವಾಸಿಯಾಗಿರೋ ಇಪ್ಪತ್ತಾರು ವರ್ಷದ ಗೀತಾ ಮತ್ತು ಆಕೆಯ ಪತಿ ರಾಜೇಶ್ ಕೂಡಾ ವ್ಯಾಪರಕ್ಕೆಂದೆು ಗವಿಮಠದ ಜಾತ್ರೆಗೆ ಬಂದಿದ್ದಾರೆ. ಬಾಂಡೆ ಸಾಮಾನಿನ ಸ್ಟಾಲ್ ಹಾಕಲು ಜಾಗ ಪಡೆದಿದ್ದು,ಸ್ಟಾಲ್ ಹಾಕಲು ಹತ್ತು ದಿನದ ಹಿಂದೆಯೇ ಕೊಪ್ಪಳಕ್ಕೆ ಬಂದಿದ್ದಾರೆ. ಆದ್ರೆ ಗೀತಾಳ ಬರ್ಬರ ಕೊಲೆಯಾಗಿದೆ. ಇನ್ನು ಗೀತಾಳನ್ನು ಕೊಲೆ ಮಾಡಿದ್ದು ಬೇರಾರು ಅಲ್ಲಾ, ಆಕೆಯ ಪತಿ ರಾಜೇಶ್. ಮಧ್ಯಾಹ್ನ ಹನ್ನೆರಡು ಗಂಟೆ ಸಮಯದಲ್ಲಿ, ಮೈದಾನದಲ್ಲಿ ಚಾಕುವಿನಿಂದ ಕುತ್ತಿಗೆ ಸೇರಿದಂತೆ ಮೂರು ಕಡೆ ಇರದಿದ್ದಾನೆ. ಸ್ಥಳೀಯರು ಪೊಲೀಸರಿಗೊಪ್ಪಿಸಿದ್ದಾರೆ.
ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ನೊಂದು ವಿವಾಹಿತ ಮಹಿಳೆ ಸಾವಿಗೆ ಶರಣು
ಬೆಂಗಳೂರು: ಪ್ರೀತಿಸುತ್ತಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ನೊಂದ ವಿವಾಹಿತ ಮಹಿಳೆಯೊಬ್ಬಳು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ರಾಚೇನಹಳ್ಳಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ವಿಜಯಪುರ ಮೂಲದ ದಿಲ್ಶಾದ್ (23) ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾಳೆ. ಈಕೆ ಆರು ವರ್ಷಗಳ ಹಿಂದೆ ಕೃಷ್ಣ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದರು. ಬೆಂಗಳೂರಿನಲ್ಲಿ ನೆಲೆಸಿದ್ದ ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಇತ್ತೀಚಿಗೆ ಜಾನ್ಸನ್ ಎಂಬ ಯುವಕನನ್ನು ದಿಲ್ಶಾದ್ ಪ್ರೀತಿಸುತ್ತಿದ್ದರು. ಇಬ್ಬರ ನಡುವಿನ ಸಂಬಂಧ ವೈವಾಹಿಕ ಸಂಬಂಧ ಎನಿಸಿಕೊಳ್ಳುವುದಿಲ್ಲ ಎಂದು ಬೇಸತ್ತಿದ್ದ ಜಾನ್ಸನ್ ಥಣಿಸಂದ್ರದಲ್ಲಿರುವ ತನ್ನ ಮನೆಯ ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾನ್ಸನ್ ಸಾವಿನ ಸುದ್ದಿಯನ್ನು ಆತನ ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅದನ್ನು ನೋಡಿ ಆಘಾತಕ್ಕೊಳಗಾಗಿದ್ದ ದಿಲ್ಶಾದ್, ಜಾನ್ಸನ್ನ ಮನೆ ಬಳಿ ಹೋಗಿ ಮೃತದೇಹವನ್ನೂ ನೋಡಿಕೊಂಡು ವಾಪಸಾಗಿದ್ದರು.
– ಯಲ್ಲಾಪುರ: ಅಪಹರಣಕಾರರ ಬಂಧಿಸುವ ವೇಳೆ ಪೊಲೀಸರ ಮೇಲೆ ದಾಳಿ
ಯಲ್ಲಾಪುರ: ಅಪಹರಣಕಾರರನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು, ಈ ವೇಳೆ ಪೊಲೀಸರು ಅವರ ಕಾಲಿಗೆ ಗುಂಡು ಹೊಡೆದು ಬಂಧಿಸಿರುವ ಘಟನೆ ಯಲ್ಲಾಪುರ ಹಳಿಯಾಳ ರಸ್ತೆಯಲ್ಲಿ ನಡೆದಿದೆ. ಮುಂಡಗೋಡ ಮೂಲದ ಉದ್ಯಮಿಯೊಬ್ಬರ ಅಪಹರಣದಲ್ಲಿ ಭಾಗಿಯಾಗಿದ್ದ ಐದು ದುಷ್ಕರ್ಮಿಗಳ ಗುಂಪನ್ನು ಜ. 11ರಂದು ಬೆಳಗ್ಗಿನ ಜಾವ ಮುಂಡಗೋಡ ಪೊಲೀಸರು ಬೆನ್ನಟ್ಟಿದಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮುಂಡಗೋಡ ಸಿಪಿಐ ರಂಗನಾಥ್ ಮತ್ತು ಪಿಎಸ್ಐ ಪರಶುರಾಮ್ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದು, ಇಬ್ಬರು ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಲಾಗಿದೆ. ದುಷ್ಕರ್ಮಿಗಳು ಉದ್ಯಮಿಯನ್ನು ಅಪಹರಿಸಿ 30 ಲಕ್ಷ ರೂ. ಸುಲಿಗೆಗೆ ಬೇಡಿಕೆ ಇಟ್ಟಿದ್ದರು. ಆದರೆ, 18 ಲಕ್ಷ ರೂ. ಪಡೆದ ನಂತರ ಉದ್ದಮಿಯನ್ನು ಬಿಡುಗಡೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಂಡಗೋಡ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಜನ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
– ಕಾರವಾರ : ರಾಸಾಯನಿಕ ಸೋರಿಕೆಯಿಂದ 12ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ
ಕಾರವಾರ: ರಾಸಾಯನಿಕ ಸೋರಿಕೆಯಾಗಿ 12 ಕಾರ್ಮಿಕರು ಅಸ್ವಸ್ಥಗೊಂಡಿರುವ ಘಟನೆ ಕಾರವಾರದ ಬಿಣಗಾ ಬಳಿಯ ಆದಿತ್ಯ ಬಿರ್ಲಾ ಕಂಪನಿಯಲ್ಲಿ ನಡೆದಿದೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪತ್ರದೇಶ ಹಾಗೂ ಬಿಹಾರ ಮೂಲದವರಾದ ನೀಲಕಂಠ (22), ಜಹಾನೂರ (20), ಕಮಲೇಶ ವರ್ಮಾ (22), ನಂದಕಿಶೋರ (21), ದೀಪು (28), ಅಜೀಜ್ (23), ಕಲ್ಲು (37), ಸುಜನ್ (26), ನಜೀದುಲ್ಲಾ (24), ಬೇಜನಕುಮಾರ್ (27), ಕಿಶನ್ ಕುಮಾರ್ (28) ಮತ್ತು ಮೋಹಿತ ವರ್ಮಾ(21) ಅಸ್ವಸ್ಥಗೊಂಡವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ರಾಸಾಯನಿಕ ಸೋರಿಕೆಯಾಗಿ ಈ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅಸ್ವಸ್ಥಗೊಂಡ ಕಾರ್ಮಿಕರನ್ನು ಕಾರವಾರದ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕಂಪನಿ ಅಧಿಕಾರಿಗಳು ದೌಡಾಯಿಸಿದ್ದಾರೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.