ಅರಾಜಕತೆಯತ್ತ ಕರ್ನಾಟಕ: ಬೆಚ್ಚಿ ಬೀಳಿಸಿದ ದರೋಡೆ!
– ಬ್ಯಾಂಕಿಗೆ ಹಣ ತುಂಬುವಾಗ ಪೈರಿಂಗ್: ಸಿನಿಮಾ ಸ್ಟೈಲಿನಲ್ಲಿ ದರೋಡೆ
– ರಾಜ್ಯದ ಹಲವೆಡೆ ಹೆಚ್ಚಿದ ಕಳ್ಳತನ, ಸೈಬರ್ ಕ್ರೈಂ, ಕೊಲೆ
NAMMUR EXPRESS NEWS
ಬೆಂಗಳೂರು: ಇತ್ತಿಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಅಭಿವೃದ್ಧಿ ಹೆಚ್ಚಾಗುತ್ತಿದಂತೆ, ಕ್ರೈಂ, ದರೋಡೆ, ಭ್ರಷ್ಟಾಚಾರಗಳು ಅತಿಯಾಗಿ ನಡೆಯುತ್ತಿದೆ. ಹೌದು, ಬರೀ ಚಿತ್ರರಂಗದಲ್ಲಿ ಸಿನಿಮಾಸ್ಟೈಲ್ ನಲ್ಲಿ ನಡೆಯುತ್ತಿದ್ದ ದರೋಡೆ, ಪೈರಿಂಗ್ ಈ ರೀತಿ ನಡೆಯುವುದನ್ನು ಹಲವಾರು ಸಿನಿಮಾಗಳಲ್ಲಿ ಕಂಡಿದ್ದೇವೆ. ಇದೀಗ ಅದೇ ರೀತಿ ಕೃತ್ಯ ರಾಜ್ಯದಲ್ಲಿ ನಡೆಯುತ್ತಿರುವುದು ವಿಪರ್ಯಾಸವೇ ಸರಿ. ಬೀದರ್ ದರೋಡೆ ಜನರಲ್ಲಿ ಬೆಚ್ಚಿ ಬೀಳಿಸಿದ್ದು, ಬೀದರ್ ದರೋಡೆಯನ್ನು ಅರಗಿಸಿಕೊಳ್ಳುವಷ್ಟರಲ್ಲಿ ಮಂಗಳೂರಿನಲ್ಲಿ ನಡೆದ ಸಿನಿಮಾ ರೀತಿ ದರೋಡೆ ಮತ್ತಷ್ಟು ಭಯ ಹುಟ್ಟಿಸಿದೆ. ಈ ಎರಡು ಪ್ರತ್ಯೇಕ ಘಟನೆಗಳಲ್ಲಿ, ದುಷ್ಕರ್ಮಿಗಳ ತಂಡಗಳು ನಾಗರೀಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಅಷ್ಟಕ್ಕೂ ಈ ಪ್ರಕರಣ ನಡೆಯಲು ಮೂಲ ಕಾರಣ ಏನು? ಹಿಂದಿನ ಪ್ಲಾನ್ ಏನು?
ಎಟಿಎಂಗೆ ಹಣ ತುಂಬಿಸುವ ವಾಹನ ಸಿಬ್ಬಂದಿಯನ್ನು ಹಾಡಹಗಲೇ ಶೂಟ್ ಮಾಡಿ ಹಣ ಸಮೇತ ಪರಾರಿಯಾದ ಘಟನೆ ಬೀದರ್ನಲ್ಲಿ ನಡೆದ ಮಾರನೇ ದಿನವೇ ಮಂಗಳೂರು ಸಮೀಪದ ಉಳ್ಳಾಲದಲ್ಲಿ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಬ್ಯಾಂಕ್ ದರೋಡೆ ನಡೆದಿದೆ. ಉಳ್ಳಾಲ ತಾಲೂಕಿನ ಕೆ.ಸಿ. ರೋಡ್ ಕೋಟೆಕಾರ್ ಸೇವಾ ಸಹಕಾರಿ ಸಂಘದ ಬ್ಯಾಂಕ್ ಗೆ ನುಗ್ಗಿದ 5 ಮಂದಿ ಮುಸುಕುಧಾರಿ ದರೋಡೆಕೋರರ ತಂಡ, ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲು ಮತ್ತು ತಲವಾರು ತೋರಿಸಿ ಅಂದಾಜು 12 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ 5 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಕೇವಲ 5 ನಿಮಿಷಗಳ ಅವಧಿಯಲ್ಲಿ ನಡೆದ ಈ ದರೋಡೆ, ರಾಜ್ಯದಲ್ಲಿ ಈವರೆಗೆ ನಡೆದ ಅತಿದೊಡ್ಡ ಮೊತ್ತದ ಬ್ಯಾಂಕ್ ದರೋಡೆ ಎನ್ನಲಾಗಿದೆ.
ದರೋಡೆಕೋರರು ಎಸ್ಕೆಪ್ ಆಗಿದ್ದು ಹೇಗೆ?: ಸಿಎಂ ಗರಂ
ಮಂಗಳೂರು: ಉಳ್ಳಾಲ ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿಯವರು ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಖಡಕ್ ಸೂಚನೆ ನೀಡಿದರು. ಘಟನೆಯ ಕುರಿತಂತೆ ಸಮಗ್ರ ಮಾಹಿತಿ ಪಡೆದ ಅವರು, ನೀವೆಲ್ಲಾ ಇದ್ದು ಯಾಕೆ ಹೀಗಾಯ್ತು? ಆರೋಪಿಗಳು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ? ಎಷ್ಟು ಟೋಲ್ಗಳನ್ನು ದಾಟಿ ಹೋಗಿದ್ದಾರೆ. ನೀವು ಟೋಲ್ ಗಳನ್ನು ಯಾಕೆ ಬಿಗಿಗೊಳಿಸಿಲ್ಲ ಎಂದು ಗರಂ ಆಗಿ ಪ್ರಶ್ನಿಸಿದ್ದಾರೆ. ಇಂತಹ ಕೃತ್ಯಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದರೆ ತಪ್ಪಾಗದು.ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡು ರಾಜ್ಯದ ಜನರ ರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕಿದೆ. ಇಂತಹ ಕೃತ್ಯಗಳನ್ನು ತಪ್ಪಿಸಲು ಹತ್ತು ಹಲವು ಕಾರ್ಯಗಳು ನಡೆಯಬೇಕಿದೆ.