ಶಾಲಾ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ಭಾಗ್ಯ!
– ಮುಂದಿನ ತಿಂಗಳಿಗೆ ರಾಗಿ ಮಾಲ್ಟ್ ವಿತರಣೆಈ ಸಿದ್ಧತೆ
– ಈಗಾಗಲೇ ವಾರದಲ್ಲಿ 2 ದಿನ ಮೊಟ್ಟೆ, ಚಿಕ್ಕಿ-ಬಾಳೆಹಣ್ಣು
NAMMUR EXPRESS NEWS
ಬೆಂಗಳೂರು: ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಅಪೌಷ್ಠಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಶೀಘ್ರವೇ ಪೌಷ್ಠಿಕಾಂಶ ಯುಕ್ತ ಆಹಾರ ನೀಡೋದಾಗಿ ಸರ್ಕಾರ ಹೇಳಿತ್ತು. ಅದರ ಭಾಗವಾಗಿ ಡಿಸೆಂಬರ್ ನಿಂದ ಒಂದು ಲೋಟ ರಾಗಿ ಮಾಲ್ಟ್ ವಿತರಿಸುವುದಕ್ಕೆ ನಿರ್ಧರಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡೀದಂತ ಶಿಕ್ಷಣ ಸಚಿವ ಮಧು ಎಸ್ ಬಂಗಾರಪ್ಪ ಅವರು, ರಾಜ್ಯದ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ವಾರದಲ್ಲಿ 2 ದಿನ ಮೊಟ್ಟೆ, ಚಿಕ್ಕಿ-ಬಾಳೆಹಣ್ಣು ನೀಡಲಾಗುತ್ತಿದೆ.ಇದಲ್ಲದೇ ಡಿಸೆಂಬರ್ ನಿಂದ ಒಂದು ಲೋಟ ರಾಗಿ ಮಾಲ್ಟ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಧ್ಯಾಹ್ನದ ಬಿಸಿಯೂಟ ಯೋಜನೆ ಅನೇಕ ವರ್ಷಗಳಿಂದ ಉತ್ತಮವಾಗಿ ನಡೆಯುತ್ತಾ ಬಂದಿದೆ. ಊಟದ ಜೊತೆಗೆ ಮಕ್ಕಳಲ್ಲಿ ಅಪೌಷ್ಠಿಕತೆ ತಡೆಯುವ ದೃಷ್ಟಿಯಿಂದ ವಾರದಲ್ಲಿ ಎರಡು ದಿನ ಮೊಟ್ಟೆ, ಮೊಟ್ಟೆ ಸೇವಿಸದವರಿಗೆ ಚಿಕ್ಕಿ, ಬಾಳೆಹಣ್ಣು ನೀಡಲಾಗುತ್ತಿದೆ. ಡಿಸೆಂಬರ್ ನಲ್ಲಿ ಇದರ ಜೊತೆಗೆ ರಾಗಿ ಮಾಲ್ಟ್ ನೀಡಲು ತೀರ್ಮಾನಿಸಲಾಗಿದೆ ಎಂದರು.
ಮಳೆಗಾಲ ಮುಕ್ತಾಯವಾಗಿ ಬಿಸಿಲ ತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹಾಗೂ ಪೌಷ್ಟಿಕ ಆಹಾರ ನೀಡುವ ದೃಷ್ಟಿಯಿಂದ ರಾಗಿ ಮಾಲ್ಟ್ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಎನ್ ಜಿಓ ಒಂದರ ಮೂಲಕ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಮಕ್ಕಳಿಗೆ ರಾಗಿ ಗಂಜಿ ನೀಡಲಾಗಿತ್ತು. ಇದು ಯಶಸ್ವಿಯಾಗಿದ್ದು, ಈ ಶೈಕ್ಷಣಿಕ ವರ್ಷಾಂತ್ಯದಿಂದ ರಾಗಿ ಮಾಲ್ಟ್ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.