ರಾಜ್ಯದಲ್ಲಿ ಹೆಚ್ಚಾಯ್ತು ರಸ್ತೆ ಗುಂಡಿ: ನೂರಾರು ಸಾವು!
– ಗುಂಡಿಬಿದ್ದ ರಸ್ತೆ ಸರಿ ಮಾಡಿಸಲು ಹಣದ ಸಂಕಟ
– ಮೃತ್ಯು ಕೂಪದಂತಾಗಿವೆ ಪಟ್ಟಣ, ಹಳ್ಳಿಯ ರಸ್ತೆಗಳು!
ವಿಶೇಷ ವರದಿ: ರಂಜಿತ್ ಬೆಂಗಳೂರು
NAMMUR EXPRESS NEWS
ಬೆಂಗಳೂರು: ರಸ್ತೆಗಳು ಜನರ ಸುಗಮ ಜೀವನಕ್ಕೆ ಬಹಳ ಪ್ರಮುಖ ಸೌಲಭ್ಯಗಳಲ್ಲಿ ಒಂದು. ಉತ್ತಮ ರಸ್ತೆ ಸಂಪರ್ಕವು ವ್ಯಾಪಾರ ವಾಣಿಜ್ಯ ಮತ್ತು ಪ್ರವಾಸೋದ್ಯ ಅಭಿವೃದ್ಧಿಗೆ ಕಾರಣವಾಗುತ್ತದೆ. ಜತೆಗೆ ಜನರ ಆರೋಗ್ಯಕ್ಕೂ ಪೂರಕವಾಗಿದೆ. ಆದರೆ ಇತ್ತೀಚಿಗೆ ರಸ್ತೆ ವ್ಯವಸ್ಥೆಯು ಕಳಪೆ ಗುಣಮಟ್ಟದ ಕಾಮಗಾರಿಗಳಿಂದ ವರ್ಷದೊಳಗೆ ಹಾಳಾಗುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ವಹಿಸದಿರುವುದು ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯು ಗ್ರಾಮೀಣ ಸಮುದಾಯವನ್ನು ನಗರಕ್ಕೆ ಸಂಪರ್ಕಿಸುವ ಕೊಂಡಿಯಾಗಿದ್ದು ಅಗತ್ಯ ಸೇವೆಗಗಳಿಗೆ ಕೃಷಿ ಉತ್ಪನ್ನ ಗಳನ್ನು ಮಾರುಕಟ್ಟೆಗೆ ಸಾಗಿಸಲು, ವ್ಯಾಪಾರ ವಹಿವಾಟಿಗೆ,ಸರುಕು- ಸೇವೆಗಳ ಸಾಗಾಣಿಕೆಗೆ ಸಾರ್ವಜನಿಕ ಸಾರಿಗೆ ಸಂಪರ್ಕಕ್ಕೆ ಅಗತ್ಯವಾಗಿದೆ.
ರಸ್ತೆ ಅಪಘಾತಕ್ಕೆ ಪ್ರತಿ ದಿನ ನೂರಾರು ಮಂದಿ ಸಾವು!
ರಸ್ತೆ ಅವ್ಯವಸ್ಥೆಯಿಂದ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಅತಿ ಹೆಚ್ಚಾಗಿ ಸಂಭವಿಸುತ್ತಿದ್ದು ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಉತ್ತಮ ರಸ್ತೆ ದೇಶದ ಪ್ರಗತಿಯ ಸಂಕೇತ. ಆದರೆ ರಾಜ್ಯದ ಬಹುತೇಕ ಕಡೆ ರಸ್ತೆಯು ಗುಂಡಿಗಳಿಂದಲೇ ತುಂಬಿದ್ದು ಜನಸಾಮಾನ್ಯರು ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸುತ್ತಿದ್ದು ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ.
ಶಾಲಾ ಮಕ್ಕಳಿಗೂ ತೊಂದರೆ: ಕೇಳೋರು ಯಾರು?
ಶಾಲಾ ವಾಹನಗಳು ಇದೇ ರಸ್ತೆಯಲ್ಲಿ ಚಲಿಸುತ್ತಿದ್ದು ಮಕ್ಕಳಿಗೆ, ಕೆಲಸಕ್ಕೆ ಹೋಗುವವರಿಗೆ, ವಸ್ತುಗಳನ್ನು ಸಾಗಿಸಲು ಸಮಸ್ಯೆಯಾಗುತ್ತಿದೆ ರಸ್ತೆಗಳು ಅತ್ಯಂತ ಅಪಾಯಕಾರಿಯಾಗಿದ್ದು ರಸ್ತೆ ಅಪಘಾತಕ್ಕೆ ಕಾರಣವಾಗಿದೆ. ರಾತ್ರಿ ಸಮಯದಲ್ಲಿ ಪ್ರಯಾಣಿಕರಿಗೆ ಗುಂಡಿಗಳು ಕಾಣದೆ ಅಪಾಯ ಉಂಟಾಗುತ್ತಿದೆ. ವಿಕೋಪದಿಂದ, ಕಳಪೆ ಗುಣಮಟ್ಟದ ಕಾಮಗಾರಿಗಳಿಂದ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದೆ.
ಗುಂಡಿ ಮುಚ್ಚಿ ಮರು ಡಾಂಬರೀಕರಣ ಮಾಡಲು ಜನರ ಒತ್ತಾಯ ಕೇಳಿ ಬಂದಿದೆ. ಅಚ್ಚರಿ ಎಂದರೆ ರಾಜಧಾನಿಯ ಅನೇಕ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿದ್ದು ಜನ ತೊಂದರೆ ಅನುಭವಿಸುತ್ತಿದ್ದಾರೆ.