ನಾಡಿನಾದ್ಯಂತ ಕಳೆಗಟ್ಟಿದ್ದ ಸಂಕ್ರಾಂತಿ ಸಂಭ್ರಮ
– ಸುಗ್ಗಿ ಹಬ್ಬ ಸಂಕ್ರಾಂತಿಗೆ ಬೆಲೆ ಏರಿಕೆಯ ಬಿಸಿ
– ಬೆಲೆ ಏರಿಕೆ ನಡುವೆಯೂ ಅದ್ದೂರಿಯಾಗಿ ಖರೀದಿ ಮಾಡುತ್ತಿರುವ ಜನರು
NAMMUR EXPRESS NEWS
ಸುಗ್ಗಿ ಹಬ್ಬ ಸಂಕ್ರಾಂತಿ, ವರ್ಷದ ಮೊದಲನೇ ಹಬ್ಬವೂ ಹೌದು. ಸುಗ್ಗಿ ಹಬ್ಬ ಎಂದೇ ಕರೆಯುವ ಸಂಕ್ರಾಂತಿ ಆಚರಣೆಗೆ ಸಜ್ಜಾಗಿರುವ ಜನರಿಗೆ ಬೆಲೆ ಏರಿಕೆ ಬಿಸಿ ಸರಿಯಾಗಿಯೇ ತಟ್ಟಿದೆ. ‘ಎಳ್ಳು, ಬೆಲ್ಲ ಹಂಚಿ ಒಳ್ಳೆಯ ಮಾತನಾಡು..’ ಎಂಬ ಉತ್ತಮ ಸಂದೇಶ ಸಾರುವ ಹಬ್ಬಕ್ಕೆ, ಈ ಶೇಂಗಾ, ಎಳ್ಳು-ಬೆಲ್ಲ, ಹೂವು-ಹಣ್ಣು, ತರಕಾರಿ ಹೀಗೆ ಎಲ್ಲ ಅಗತ್ಯ ವಸ್ತುಗಳ ಏರಿಕೆಯಾಗಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಿದೆ. ಸೂರ್ಯನು ಧನುಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಮಕರ ಸಂಕ್ರಾಂತಿ ಪ್ರಧಾನವಾಗಿ ಸೂರ್ಯನು ತನ್ನ ಪಥ ಬದಲಾಯಿಸುವುದನ್ನು ಸೂಚಿಸುವುದು ಮಾತ್ರವಲ್ಲದೆ, ಉತ್ತರಾಯಣ ಪುಣ್ಯ ಕಾಲದ ಆರಂಭವೂ ಇದಾಗಿದೆ. ಹೆಸರೇ ಸೂಚಿಸುವಂತೆ ಒಳಿತನ್ನುಂಟು ಮಾಡುವಂತಹ ಹೊಸ ಬದಲಾವಣೆ, ಧನಾತ್ಮಕ ಪರಿವರ್ತನೆಗೆ ನಾಂದಿ ಹಾಡುವ ಈ ಹಬ್ಬದಲ್ಲಿ ಸೂರ್ಯನನ್ನು ಪ್ರಮುಖವಾಗಿ ಆರಾಧಿಸಲಾಗುತ್ತದೆ.
– ವರ್ಷದ ಮೊದಲ ಹಬ್ಬ
ಮಾರುಕಟ್ಟೆಯಲ್ಲಿ ಸಂಕ್ರಾಂತಿ ಹಬ್ಬದ ಖರೀದಿ ಸಂಭ್ರಮ ಜೋರಾಗಿದೆ. ಬೆಲೆ ಏರಿಕೆ ನಡುವೆಯೂ ನಗರದ ಮಾರುಕಟ್ಟೆಯಲ್ಲಿ ಕಬ್ಬು, ಗೆಣಸು, ಕಡಲೆಕಾಯಿ, ಅವರೇಕಾಯಿ ಮಾರಾಟ ಭರದಿಂದ ಸಾಗಿದೆ. ಜನರು ಅಳೆದು ತೂಗಿ ಹಬ್ಬದ ಖರೀದಿ ಮಾಡುತ್ತಿದ್ದಾರೆ. ಹೊಸ ವರ್ಷದ ಮೊದಲ ಹಬ್ಬ ಎಂಬ ಕಾರಣಕ್ಕೆ ಅದ್ಧೂರಿ ವ್ಯಾಪಾರ ನಡೆಯುತ್ತಿದೆ.
ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಸರಕುಗಳೆಲ್ಲ ದುಬಾರಿಯಾಗಿವೆ. ಅದರಲ್ಲಿ ಮುಖ್ಯವಾಗಿ ಕಡಲೆಕಾಯಿ ಕೆಜಿಗೆ 80-100 ರೂ., ಅವರೆಕಾಯಿ 60-100 ರೂ.ಗೆ ಮಾರಾಟವಾಗುತ್ತಿದೆ. ಬೆಲ್ಲ ಕೆಜಿಗೆ 80-120 ರೂ., ಗೆಣಸು 50-60 ರೂ., ಕಬ್ಬು ಒಂದು ಜೊಲ್ಲೆಗೆ 50 ರೂ.ವರೆಗೂ ಮಾರಾಟವಾಗುತ್ತಿದೆ. ಸಂಕ್ರಾಂತಿ ಹಬ್ಬಕ್ಕೆ ಅಗತ್ಯವೆನಿಸಿದ ಅಕ್ಕಿ, ಬೇಳೆ, ಧಾನ್ಯಗಳ ಬೆಲೆಯೊಂದಿಗೆ ಹೂವು-ಹಣ್ಣಿನ ಬೆಲೆಗಳು ಗಗನಕ್ಕೇರಿವೆ. ಕಾಕಡ ಕೆ.ಜಿಗೆ 800 ರೂ., ಕನಕಾಂಬರ ಕೆಜಿಗೆ 1200 ರೂ. ಇದ್ದರೆ ಸೇವಂತಿ, ಗುಲಾಬಿ ಇತರೆ ಹೂವಿನ ಬೆಲೆಗಳು 300-450 ರೂ.ವರೆಗೆ ಏರಿಕೆ ಕಂಡಿವೆ. ಹೂವು-ಹಣ್ಣಿಗೆ ಹೋಲಿಸಿದರೆ ತರಕಾರಿ ಬೆಲೆಯಲ್ಲಿ ಹೇಳಿಕೊಳ್ಳುವಂತಹ ಏರಿಕೆಯಾಗಿಲ್ಲ.
ಈ ಬಾರಿ ಎಲ್ಲಾ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಹೀಗಾಗಿ ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಭರ್ಜರಿಯಾಗಿ ಆಚರಿಸಲು ಜನರು ಸಿದ್ಧತೆಗಳನ್ನು ನಡೆಸಿದ್ದಾರೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದು, ಈಗಲೂ ಕೆಲವು ಹಳ್ಳಿಗಳಲ್ಲಿ ಹಳೇ ಸೊಗಡಿನಲ್ಲೇ ಹಬ್ಬಗಳು ನಡೆಯುತ್ತಿರುವುದು ತುಂಬಾ ವಿಶೇಷ.