ಸ್ವಾಮಿಯೇ ಶರಣಂ ಅಯ್ಯಪ್ಪ..!
– ಅಯ್ಯಪ್ಪ ಮಾಲೆ ಧಾರಣೆ ಶುರು: ಪ್ರತೀ ದಿನ 70 ಸಾವಿರ ಭಕ್ತರಿಗೆ ಅವಕಾಶ
– ಜ.14ಕ್ಕೆ ಮಕರ ಸಂಕ್ರಾಂತಿ: ಏನಿದು ಅಯ್ಯಪ್ಪ ಮಾಲೆ?
NAMMUR EXPRESS NEWS
ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತರು ತುದಿಗಾಲಿನಲ್ಲಿ ನಿಂತಿದ್ದಾರೆ. ಶುಭ ಕಾರ್ತಿಕ ಮಾಸ ಆರಂಭವಾಗಿದ್ದು, ಈಗಾಗಲೇ ಕೆಲವು ಅಯ್ಯಪ್ಪ ಸ್ವಾಮಿಗಳು ದೀಕ್ಷೆಯನ್ನು ಆರಂಭಿಸಿದ್ದಾರೆ. ಆದರೆ ಕೆಲವರು ಶಬರಿಮಲೆಗೆ ತೆರಳಿ ದೀಕ್ಷೆ ತೆಗೆದುಕೊಂಡರೆ, ಇನ್ನು ಕೆಲವರು ಸಮೀಪದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗುರು ಸ್ವಾಮಿಗಳ ಸನ್ನಿಧಿಯಲ್ಲಿ ಮಾಲೆ ಧರಿಸುತ್ತಾರೆ.
ಕಾರ್ತಿಕ ಮಾಸದಲ್ಲಿ ಅಯ್ಯಪ್ಪ ದೀಕ್ಷೆಯನ್ನು ಕೈಗೊಳ್ಳುವವರಲ್ಲಿ ಹೆಚ್ಚಿನವರು ಮಂಡಲ ಕಲಾ ದೀಕ್ಷೆಯನ್ನು ಮಾಡುತ್ತಾರೆ. ಈ ಮಂಡಲ ಪೂಜೆಗಳು ನವೆಂಬರ್ 15 ರಂದು ಇಂದು ಪ್ರಾರಂಭಗೊಂಡಿದ್ದು,ಡಿ.26ರ ತನಕ ದರ್ಶನಕ್ಕೆ ಅವಕಾಶವಿದೆ. ನಿತ್ಯ 70,000 ಜನರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದ್ದು, ಒಂದು ವೇಳೆ ಜನಸಂದಣಿ ತೀರಾ ಹೆಚ್ಚಾದಲ್ಲಿ ಅರ್ಧಗಂಟೆ ಕಾಲ ದರ್ಶನದ ಸಮಯ ವಿಸ್ತರಿಸಲು ಚಿಂತಿಸಲಾಗಿದೆ. ಮಂಡಲ ಕಲಾ ದೀಕ್ಷೆಯನ್ನು ಕೈಗೊಳ್ಳುವವರು ನವೆಂಬರ್ 16 ರಿಂದ ಜನವರಿ 14 ರವರೆಗೆ ಅತ್ಯಂತ ಕಠಿಣ ನಿಯಮಗಳನ್ನು ಅನುಸರಿಸುತ್ತಾರೆ. ಜನವರಿ 14 ರಂದು ಮಕರ ಜ್ಯೋತಿ ದರ್ಶನ ಪಡೆಯುತ್ತಾರೆ. ಅಯ್ಯಪ್ಪ ದೀಕ್ಷೆ ತೆಗೆದುಕೊಳ್ಳಲು ಶಬರಿಮಲೆಗೆ ಹೋಗುತ್ತಾರೆ. ಮೋಕ್ಷದ ಮಾರ್ಗವೆಂದು ಪರಿಗಣಿಸಲಾದ 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪನನ್ನು ಭೇಟಿ ಮಾಡುತ್ತಾರೆ.
ಅಯ್ಯಪ್ಪ ಸ್ವಾಮಿ ಸನ್ನಿದಾನದಲ್ಲಿ ಈ 18 ಮೆಟ್ಟಿಲುಗಳನ್ನು ಹತ್ತುವುದು ಬಹಳ ಪುಣ್ಯವೆಂದು ಪರಿಗಣಿಸಲಾಗಿದೆ. ನಾಲ್ಕು ವೇದಗಳು, ಎರಡು ಶಾಸ್ತ್ರಗಳು, ಅಷ್ಟ ದಿಕ್ಪಾಲಕರು, ವಿದ್ಯಾ, ಜ್ಞಾನ ಎಲ್ಲವನ್ನೂ ಈ ಮೆಟ್ಟಿಲು ಒಳಗೊಂಡಿದೆ. ಈ ಹದಿನೆಂಟು ಮೆಟ್ಟಿಲುಗಳಿಗೆ ಹದಿನೆಂಟು ಹೆಸರುಗಳಿವೆ. ಈ ಹದಿನೆಂಟು ಮೆಟ್ಟಿಲುಗಳನ್ನು ಏರಲು ಮಂಡಲ ಕಲಾ ದೀಕ್ಷೆಯನ್ನು ತೆಗೆದುಕೊಂಡ ಮತ್ತು ಕಠಿಣ ಉಪವಾಸವನ್ನು ಮಾಡಿದ ವ್ಯಕ್ತಿ ಮಾತ್ರ ಅರ್ಹನಾಗಿರುತ್ತಾನೆ. ತಲೆಯ ಮೇಲೆ ಇರುಮುಡಿ ಹೊತ್ತು ಈ ಹದಿನೆಂಟು ಮೆಟ್ಟಲು ಹತ್ತುತ್ತಾರೆ.
ಈಗಾಗಲೇ ವರ್ಚುವಲ್ ಕ್ಯೂ ಮೂಲಕ ಲಕ್ಷಾಂತರ ಭಕ್ತರು ನ.15- ಡಿ.29ರವರೆಗಿನ ಸಮಯವನ್ನು ಮುಂಗಡವಾಗಿ ಭೇಟಿಗಾಗಿ ಕಾದಿರಿಸಿದ್ದಾರೆ. ಇದರ ಜೊತೆಗೆ , ಪಂಪಾ, ಎರುಮೆಲಿ, ವಂದಿಪೆರಿಯಾರ್ಗಳಲ್ಲಿಯೂ ನಿತ್ಯ 10,000 ಭಕ್ತರಿಗೆ ಬುಕಿಂಗ್ ಮಾಡಿಸಲು ಅವಕಾಶವಿದ್ದು, ಇದಕ್ಕೆ ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್ಪೂರ್ಟ್ ಪ್ರತಿ ತೋರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಮಂಡಲ ಸಮಯ ದೀಕ್ಷೆ ತೆಗೆದುಕೊಂಡವರು ಇರುಮುಡಿ ಕಟ್ಟುತ್ತಾರೆ. ಇದು ಎರಡು ಭಾಗಗಳನ್ನು ಒಳಗೊಂಡಿದೆ. ಒಂದು ಭಾಗವು ಅಕ್ಕಿ ಮತ್ತು ತುಪ್ಪದಿಂದ ತುಂಬಿದ ತೆಂಗಿನಕಾಯಿಯನ್ನು ಒಳಗೊಂಡಿರುತ್ತದೆ. ಇವುಗಳನ್ನು ಅಯ್ಯಪ್ಪ ದೇವರಿಗೆ ಅರ್ಪಿಸಲಾಗುತ್ತದೆ. ಇನ್ನೊಂದು ಭಾಗದಲ್ಲಿ ಮಾಲಾಧಾರಿಗಳ ಆಹಾರ ಇರುತ್ತದೆ.
ಕಠಿಣ ವೃತ ಆಚರಣೆ
ಅಯ್ಯಪ್ಪ ದೀಕ್ಷಾ ಮಾಲೆಯನ್ನು ಧರಿಸಿದ ವ್ಯಕ್ತಿಯನ್ನು ಸ್ವಾಮಿ ಅಂದರೆ ದೇವರಂತೆ ಕಾಣುತ್ತಾರೆ. ಈ 41 ದಿನಗಳಲ್ಲಿ ಇವರು ಎಲ್ಲಾ ಲೌಕಿಕ ಸುಖಗಳಿಂದ ದೂರುವಿದ್ದು, ಬೆಳಿಗ್ಗೆ ಮತ್ತು ಸಂಜೆ ತಣ್ಣೀರಿನ ಸ್ನಾನ, ಒಂದೊತ್ತು ಊಟ ಮಾಡಲಾಗುತ್ತದೆ. ಕೂದಲು ಮತ್ತು ಉಗುರುಗಳನ್ನು ಕತ್ತರಿಸದೆ ಇರುತ್ತಾರೆ. ಚಪ್ಪಲಿಯನ್ನು ಸಹ ಧರಿಸುವುದಿಲ್ಲ. ಧೂಮಪಾನ ಮತ್ತು ಮದ್ಯಪಾನದಲ್ಲಿ ತೊಡಗಿಸಿಕೊಳ್ಳುವುದು ದೊಡ್ಡ ಪಾಪ ಎಂದು ಪರಿಗಣಿಸಲಾಗಿದೆ. ಇತರರಿಗೆ ಬಯ್ಯುವುದು, ಜಗಳ, ಅವಮಾನಿಸುವುದು ನಿಷಿದ್ಧ. ಈ ಮೂಲಕ ಇವರು ದೇವರಂತೆ ಇರುತ್ತಾರೆ.
ಶಬರಿಮಲೆ ಮಂಡಲ ಪೂಜೆ ವ್ರತದ ಮಹತ್ವ
ಐತಿಹ್ಯಗಳ ಪ್ರಕಾರ ಅಯ್ಯಪ್ಪನು ತನ್ನ ಭಕ್ತರನ್ನು ಶನಿಯ ದುಷ್ಪರಿಣಾಮಗಳಿಂದ ರಕ್ಷಿಸಲು 41 ದಿನಗಳ ಕಾಲ ಉಪವಾಸ ಮಾಡುವಂತೆ ಹೇಳಿದನು. ಏಕೆಂದರೆ ಶನಿಯ ದುಷ್ಪರಿಣಾಮಗಳು ಒಂದೂವರೆ ವರ್ಷಗಳ ಕಾಲ ಮುಂದುವರಿಯುತ್ತದೆ. ಆದ್ದರಿಂದ ಅನೇಕ ಕಷ್ಟಗಳನ್ನು ಮತ್ತು ಕಠಿಣ ಜೀವನವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದಲೇ ಜನರು ಇಂತಹ ತೊಂದರೆಗಳಿಂದ ಪಾರಾಗಲು ಅಯ್ಯಪ್ಪ ಸ್ವಾಮಿ ಈ ಮಾರ್ಗ ಸೂಚಿಸುತ್ತಾನೆ. ಸ್ವಾಮಿಯ ಆಶೀರ್ವಾದದಿಂದ ಭಕ್ತರ ಶನಿಯ ಬಾಧೆಗಳು ಹೋಗುತ್ತವೆ.
2025 ಮಕರ ಜ್ಯೋತಿ ಕಾಣಿಸುವ ದಿನಾಂಕ
ಜನವರಿ 14, 2025ರಂದು ಸಂಜೆ 6-7ರ ನಡುವೆ ಭಕ್ತರಿಗೆ ಮಕರ ಜ್ಯೋತಿ ದರ್ಶನವಾಗಲಿದೆ.