ಟಾಪ್ 5 ನ್ಯೂಸ್ ಕರ್ನಾಟಕ
– ಬೆಳಗಾವಿ: ಮರಕ್ಕೆ ಡಿಕ್ಕಿ ಹೊಡೆದ ಲಕ್ಷ್ಮಿ ಹೆಬ್ಬಾಳ್ಕರ್ ಕಾರು
– ಕಾರವಾರ : ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸಕ್ಕೆ ನುಗ್ಗಿದ ಚಿರತೆ
– ಬೆಂಗಳೂರು : 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಮಾಡಿರುವ ಆರೋಪಿಯ ಬಂಧನ
– ಬೆಳಗಾವಿ : ಸಂಕ್ರಾಂತಿ ಹಬ್ಬಕ್ಕೆ ಮಗಳ ಮನೆಗೆ ಬಂದ ಅತ್ತೆಯನ್ನೇ ಹತ್ಯೆಗೈದ ಅಳಿಯ!
– ಧಾರವಾಡ: ಹೆಂಡ್ತಿ ಕಿರುಕುಳಕ್ಕೆ ಬೇಸತ್ತು ಗಂಡ ಆತ್ಮಹತ್ಯೆ!
NAMMUR EXPRESS NEWS
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಯಾಣಿಸುತ್ತಿದ್ದ ವಾಹನ ಭೀಕರ ಅಪಘಾತಕ್ಕೀಡಾದ ಘಟನೆ ಬೆಳಗಾವಿಯ ಕಿತ್ತೂರು ಬಳಿ ನಡೆದಿದೆ. ಇನ್ನು ಘಟನೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆನ್ನಿಗೆ ಗಂಭೀರವಾದ ಗಾಯವಾಗಿದ್ದು, ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರ ಮುಖ, ತಲೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ, ಸಚಿವರ ಬೆನ್ನಿನ ಎರಡು ಮೂಳೆಯಲ್ಲಿ (ಎಲ್1 ಎಲ್4) ಸೀಳು ಕಂಡುಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರು ನಾಯಕರು ಬೆಂಗಳೂರಿನಲ್ಲಿ ಸಿಎಲ್ಪಿ ಸಭೆ ಮುಗಿಸಿ ರಸ್ತೆ ಮಾರ್ಗವಾಗಿ ಬೆಳಗಾವಿಯತ್ತ ಬರುತ್ತಿದ್ದರು. ಒಂದೇ ವಾಹನದಲ್ಲಿ ಸಚಿವೆ ಹೆಬ್ಬಾಳ್ಕರ್, ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರು ಬರುತ್ತಿದ್ದರು. ನಾಯಿಯೊಂದು ಕಾರಿಗೆ ದಿಢೀರ್ ಅಡ್ಡಲಾಗಿ ಬಂದಿದೆ. ಅದನ್ನು ತಪ್ಪಿಸಲು ಹೋಗಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಚಾಲಕನಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
– ಕಾರವಾರ : ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸಕ್ಕೆ ನುಗ್ಗಿದ ಚಿರತೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸಕ್ಕೆ ಚಿರತೆ ನುಗ್ಗಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಚಿರತೆ ದಾಳಿಯಿಂದ ಮನೆಯ ನಾಯಿ ತಪ್ಪಿಸಿಕೊಂಡಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಚಿರತೆ ನುಗ್ಗಿದ ದೃಶ್ಯ ಸೆರೆಯಾಗಿದೆ.
ಕಾಗೇರಿ ಅವರು ಮನೆಯಲ್ಲಿರುವಾಗಲೇ ಘಟನೆ ನಡೆದಿದೆ. ನಿನ್ನೆ ರಾತ್ರಿ 11 ಗಂಟೆಗೆ ಚಿರತೆ ಆಹಾರ ಅರಸಿಕೊಂಡು ಬಂದಿದೆ. ತೋಟದ ಭಾಗದಿಂದ ನಾಯಿಯನ್ನು ಚಿರತೆ ಅಟ್ಟಿಸಿಕೊಂಡು ಬಂದಿದೆ. ಆದರೆ ನಾಯಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಏನೂ ಸಿಗದ ಹಿನ್ನಲೆಯಲ್ಲಿ ಚಿರತೆ ಮತ್ತೆ ಕಾಡಿನತ್ತ ತೆರಳಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
– ಬೆಂಗಳೂರು : 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಮಾಡಿರುವ ಆರೋಪಿಯ ಬಂಧನ
ಬೆಂಗಳೂರು: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ನಡೆಸಿರುವ ಅಮಾನವೀಯ ಘಟನೆಯೊಂದು ಬೆಂಗಳೂರಿನ ರಾಮಮೂರ್ತಿ ನಗರದ ಹೊಯ್ಸಳ ನಗರದಲ್ಲಿ ನಡೆದಿದೆ. ಬಿಹಾರ ಮೂಲದ ಅಭಿಷೇಕ್ ಕುಮಾರ್(25) ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಘಟನೆಯ ಬೆನ್ನಲ್ಲೇ ಆರೋಪಿಯನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ರಾತ್ರಿ 7:30ರ ಸುಮಾರಿಗೆ ಈ ಘಟನೆ ನಡೆದಿದೆ. ಬಾಲಕಿಯ ಪೋಷಕರು ಗಾರೆ ಕೆಲಸಕ್ಕೆ ಹೋಗಿದ್ದರು. ಹೀಗಾಗಿ ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ವೇಳೆ ಮನೆಗೆ ಬಂದ ಅಭಿಷೇಕ್ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ಎಸಗುವ ವೇಳೆಯೇ ಬಾಲಕಿ ನರಳಾಡಿ ಸಾವನ್ನಪ್ಪಿದ್ದಾಳೆ. ಆರೋಪಿ ಅಭಿಷೇಕ್ ಕುಮಾರ್ ಕೂಡ ಗಾರೆ ಕೆಲಸ ಮಾಡಿಕೊಂಡಿದ್ದನು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
– ಬೆಳಗಾವಿ : ಸಂಕ್ರಾಂತಿ ಹಬ್ಬಕ್ಕೆ ಮಗಳ ಮನೆಗೆ ಬಂದ ಅತ್ತೆಯನ್ನೇ ಹತ್ಯೆಗೈದ ಅಳಿಯ!
ಬೆಳಗಾವಿ : ದೇಶದಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಸಂಕ್ರಾಂತಿ ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಬೆಳಗಾವಿಗೆ ಬೆಳಗ್ಗೆ ತರಹೇವಾರಿ ಅಡುಗೆ ಮಾಡಿಕೊಂಡು ಬುತ್ತಿ ಕಟ್ಟಿಕೊಂಡು ಮಗಳಿಗೆ ಕೊಡಲು ಬಂದಿದ್ದ ಅತ್ತೆಯನ್ನು ಅಳಿಯನೇ (ಮಗಳ ಗಂಡ) ಕೊಲೆ ಮಾಡಿದ್ದಾನೆ. ಸುಗ್ಗಿ ಕಾಲದ ಹಬ್ಬದಲ್ಲಿ ಮನೆಯಲ್ಲಿ ಸಂಭ್ರಮದ ಬದಲು ಸೂತಕ ಆವರಿಸಿದೆ. ಬೆಳಗಾವಿ ನಗರದ ಮಲಪ್ರಭಾ ನಗರದಲ್ಲಿ ಮಕರ ಸಂಕ್ರಾಂತಿಯ ಹಬ್ಬದ ದಿನ ಮಂಗಳವಾರ ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ಬೆಳಗಾವಿಯ ಕಲ್ಯಾಣ ನಗರದ ನಿವಾಸಿ ರೇಣುಕಾ ಶ್ರೀಧರ ಪಡುಮುಖೆ (44) ಸಾವನ್ನಪ್ಪಿದ ಮಹಿಳೆ ಆಗಿದ್ದಾರೆ. ಮಲ್ಲಪ್ರಭಾ ನಗರದ ಶುಭಂ ದತ್ತಾ ಬಿರ್ಜೆ(24) ಎಂಬಾತ ಅತ್ತೆಯನ್ನು ಕೊಂದ ಅಳಿಯ ಆಗಿದ್ದಾನೆ. ಇಲ್ಲಿ ಕೊಲೆಯ ಆರೋಪಿ ಶುಭಂ ಬಿರ್ಜೆ ಮತ್ತು ಛಾಯಾ ಮಲಪ್ರಭಾ ನಗರದ ರೈತ ಗಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮಗಳಿಗೆ ಸಂಕ್ರಾಂತಿ ಹಬ್ಬದೂಟ ಕೊಡುವುದಕ್ಕೆ ಅವರ ತಾಯಿ ಮನೆಗೆ ಬಂದಿದ್ದರು. ಇದೇ ವೇಳೆ ಮಗಳ ಗಂಡನೇ ಅತ್ತೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗೆ ತರಹೇವಾರಿ ಅಡುಗೆ ಮಾಡಿಕೊಂಡು ಮಗಳಿಗೆ ಹಬ್ಬದ ಊಟವನ್ನು ಕೊಡುವುದಕ್ಕೆಂದು ರೇಣುಕಾ ಪಡಮುಖೆ ಅವರು ದೊಡ್ಡ ಊಟದ ಬುತ್ತಿಯನ್ನು ಸಿದ್ಧಪಡಿಸಿಕೊಂಡು 11ಗಂಟೆಯ ಸುಮಾರಿಗೆ ಮಗಳ ಮನೆಗೆ ಬಂದಿದ್ದಾರೆ. ಕಳೆದ 3 ವರ್ಷಗಳ ಹಿಂದೆಷ್ಟೇ ಛಾಯಾ ಜತೆಗೆ ಶುಭಂ ಮದುವೆ ಮಾಡಿಕೊಂಡಿದ್ದನು. ಆದರೆ, ಅತ್ತೆಗೆ ನೀವೇಕೆ ನಮ್ಮ ಮನೆಗೆ ಬರುತ್ತೀರಿ ಎಂದು ತಗಾದೆ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿ ಅತ್ತೆಯ ತೊಡೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಈ ಗಲಾಟೆಯಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ರೇಣುಕಾ ಅವರನ್ನು ಕೂಡಲೇ ಸ್ಥಳೀಯರು ಸೇರಿಕೊಂದು ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ತೀವ್ರ ರಕ್ತಸ್ತಾವ ಉಂಟಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ರೇಣುಕಾ ಅವರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್, ಸಿಪಿಐ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ, ರೇಣುಕಾ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಬೀಮ್ಸ್ ಶವಗಾರಕ್ಕೆ ರವಾನಿಸಲಾಗಿದೆ. ಬೆಳಗಾವಿ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
– ಧಾರವಾಡ: ಹೆಂಡ್ತಿ ಕಿರುಕುಳಕ್ಕೆ ಬೇಸತ್ತು ಗಂಡ ಆತ್ಮಹತ್ಯೆ!
ಧಾರವಾಡ : ಪತ್ನಿಯ ಕಿರುಕುಳಕ್ಕೆ ಬೇಸತ್ತು ಗಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೇಲೂರು ಗ್ರಾಮದ ನಡೆದಿದೆ. ಶಿವರಾಜ್ ಎತ್ತಿನಗುಡ್ಡ (35) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಶಿವರಾಜ್ ಎತ್ತಿನಗುಡ್ಡ ಕಳೆದ ವರ್ಷದ ನವೆಂಬರ್ 16 ರಂದು ನೇಣಿಗೆ ಶರಣಾಗಿದ್ದರು. ಸಾಯುವ ಮುನ್ನ ಶಿವರಾಜ್ ಡೆತ್ನೋಟ್ ಬರೆದಿದ್ದರು. ಆಗ ಗರಗ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಡೆತ್ನೋಟ್ ಶಿವರಾಜನೇ ಬರೆದಿದ್ದು ಎಂದು ಎಫ್ಎಸ್ಎಲ್ ವರದಿ ಬಂದ ಹಿನ್ನೆಲೆಯಲ್ಲಿ ಪತ್ನಿಯೇ ಸಾವಿಗೆ ಕಾರಣ ಎಂದು ಗರಗ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ಶಿವರಾಜ್ ಎತ್ತಿನಗುಡ್ಡ ಕಳೆದ 2024 ರ ಜುಲೈನಲ್ಲಿ ಮದುವೆಯಾಗಿದ್ದರು. ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಹೈಸ್ಕೂಲ್ ಶಿಕ್ಷಕಿ ಯಲ್ಲವ್ವ ಬೆಂಗೇರಿ ಎಂಬುವವಳ ಜೊತೆ ಮದುವೆಯಾಗಿದ್ದರು. ಮದುವೆಯ ನಂತರ ಯಲ್ಲವ್ವ ಸರಿಯಾಗಿ ಜೀವನ ನಡೆಸದೇ ಶಿವರಾಜ್ನನ್ನ ಬಿಟ್ಟು ಪೋಷಕರ ಮನೆಗೆ ಹೋಗಿದ್ದರು. ಯಲ್ಲವ್ವ ಬೆಂಗೇರಿ ಬ್ಯಾಹಟ್ಟಿಯಲ್ಲಿ ಶಿಕ್ಷಿಕಿಯಾಗಿದ್ದಾರೆ. ಮಾನಸಿಕ ಹಿಂಸೆಯಿಂದ ಶಿವರಾಜ್ ಸಾವಾಗಿದೆ ಎಂದು ಶಿವರಾಜ್ ಸಹೋದರಿಯರು ಆರೋಪಿಸಿದ್ದರು. ಮದುವೆಯಾದ 15 ದಿನದಲ್ಲೇ ಯಲ್ಲವ್ವ ಪೋಷಕರ ಮನೆಗೆ ಹೋಗಿದ್ದರು. ಶಿವರಾಜ್ ಆಗ ಪತ್ನಿಗೆ ಮನೆಗೆ ಕರೆ ತರಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಧಾರವಾಡದಲ್ಲಿ ಬೇರೆ ಮನೆ ಮಾಡಿದರೆ ಮಾತ್ರ ನಾನು ವಾಪಸ್ ಬರುತ್ತೇನೆ ಎಂದು ಯಲ್ಲವ್ವ ಹೇಳಿದ್ದರು. ಮನೆ ಬೇರೆ ಮಾಡಿದರೂ ಪತ್ನಿ ಬರಲೇ ಇಲ್ಲ. ಹೀಗಾಗಿ ನನ್ನ ಸಾವಿಗೆ ಪತ್ನಿ ಕಾರಣ, ನನ್ನ ಸಾವಿನ ನಂತರ ಆಕೆಗೆ ಶಿಕ್ಷೆಯಾಗಲಿ ಎಂದು ಶಿವರಾಜ್ ಡೆತ್ ನೋಟ್ ಬರೆದಿಟ್ಟಿದ್ದರು. ಯಲ್ಲವ್ವಳಿಗೆ ಶಿಕ್ಷೆ ಆಗಲಿ ಎಂದು ಮೃತ ಶಿವರಾಜ್ ಸಹೋದರಿಯರು ಒತ್ತಾಯಿಸಿದ್ದಾರೆ. ಶಿಕ್ಷಕಿಯಾಗಿರುವ ಯಲ್ಲವ್ವಳಿಗೆ ಅಮಾನತ್ತು ಮಾಡುವಂತೆ ಶಿಕ್ಷಣ ಇಲಾಖೆಗೆ ಶಿವರಾಜ್ ಸಹೋದರಿಯರು ಒತ್ತಾಯಿಸಿದ್ದಾರೆ. ಆಸ್ತಿಗಾಗಿ ನನ್ನ ಸಹೋದರನಿಗೆ ಕಿರುಕುಳ ಕೊಟ್ಟಿದ್ದಕ್ಕೆ ಆತ ನೇಣು ಹಾಕಿಕೊಂಡಿದ್ದಾನೆ ಎಂದು ಮೃತ ಶಿವರಾಜ್ ಸಜೋದರಿಯರು ಆರೋಪಿಸಿದ್ದಾರೆ.