ಟಾಪ್ 5 ನ್ಯೂಸ್ ಕರ್ನಾಟಕ
– ತುಮಕೂರು : ಕಾಲೇಜು ಮುಗಿಸಿ ಬಸ್ ನಿಲ್ದಾಣಕ್ಕೆ ಬರುವಾಗ ವಿದ್ಯಾರ್ಥಿನಿಗೆ ಹೃದಯಘಾತ
– ಹುಬ್ಬಳ್ಳಿ : ಹುಬ್ಬಳ್ಳಿಯಲ್ಲೂ ಬ್ಯಾಂಕ್ ದರೋಡೆಗೆ ಯತ್ನಿಸಿದ ಕಳ್ಳರು
– ವಿಜಯಪುರ : ಕಾರ್ಮಿಕರ ಮೇಲೆ ಮನಬಂದಂತೆ ಹಲ್ಲೆ ಮಾಡಿದ ಮಾಲೀಕ ಸೇರಿ ಮೂವರ ಬಂಧನ
– ಕಲಬುರಗಿ : ಕಲಬುರಗಿಯಲ್ಲಿ ಭೀಕರ ಅಪಘಾತದಿಂದ ಸ್ಥಳದಲ್ಲೇ ಮೂವರು ಸಾವು
– ಕಲಬುರಗಿ: ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಕಾನ್ಸ್ಟೇಬಲ್ ಪತ್ನಿ ದುರ್ಮರಣ
NAMMUR EXPRESS NEWS
ತುಮಕೂರು : ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂಡ ಹೃದಯಾಘಾತ ಎಂಬುದು ಎಲ್ಲರಿಗೂ ಕಾಡುವಂತಹ ದೊಡ್ಡ ಸಮಸ್ಯೆ ಎಂದೇ ಹೇಳಬಹುದು. ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ಮೈಥಿಲಿ ತರಗತಿ ಮುಗಿಸಿ ಪಟ್ಟಣದ ಬಸ್ ನಿಲ್ದಾಣಕ್ಕೆ ಬರುವಾಗ ಸುಸ್ತಾಗಿ ಕೆಳಗೆ ಬಿದ್ದಿದ್ದಾಳೆ. ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತು ಅಲ್ಲಿ ವೈದ್ಯರು ಹೃದಯಘಾತದಿಂದ ಸಾವನಪ್ಪಿದ್ದಾಳೆ ಎಂಬ ಮಾಹಿತಿ ನೀಡಿದ್ದಾರೆ.
– ಹುಬ್ಬಳ್ಳಿ : ಹುಬ್ಬಳ್ಳಿಯಲ್ಲೂ ಬ್ಯಾಂಕ್ ದರೋಡೆಗೆ ಯತ್ನಿಸಿದ ಕಳ್ಳರು
ಹುಬ್ಬಳ್ಳಿ : ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಸಾಲು ಸಾಲು ರಾಬರಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಕೇವಲ ಒಂದೇ ಒಂದು ವಾರದಲ್ಲಿ 5 ದರೋಡೆ ಪ್ರಕರಣ ನಡೆದಿದ್ದು, ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿದೆ. ಹೀಗಿರುವಾಗ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಬ್ಯಾಂಕ್ ದರೋಡೆಗೆ ಕಳ್ಳರು ಯತ್ನಿಸಿರುವಂತಹ ಘಟನೆ ನಡೆದಿದೆ. ಕಳ್ಳರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ರಾತ್ರಿ ಹುಬ್ಬಳ್ಳಿಯ ಎಪಿಎಂಸಿ ಆವರಣದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ದರೋಡೆಗೆ ಖದೀಮರು ಯತ್ನಿಸಿದ್ದಾರೆ. ಬ್ಯಾಂಕ್ನ ಶೆಲ್ಟರ್ ಬೀಗ ಮುರಿದು ಕನ್ನ ಹಾಕಲು ಯತ್ನಿಸಿದ್ದು, ಆದರೆ ವಿಫಲರಾಗಿದಾರೆ. ಸದ್ಯ ಬ್ಯಾಂಕ್ ಸಿಬ್ಬಂದಿ ಶೆಲ್ಟರ್ಗೆ ವೆಲ್ಡಿಂಗ್ ಮಾಡಿಸಿದ್ದಾರೆ. ಘಟನಾ ಸ್ಥಳಕ್ಕೆ ನವನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
– ವಿಜಯಪುರ : ಕಾರ್ಮಿಕರ ಮೇಲೆ ಮನಬಂದಂತೆ ಹಲ್ಲೆ ಮಾಡಿದ ಮಾಲೀಕ ಸೇರಿ ಮೂವರ ಬಂಧನ
ವಿಜಯಪುರ : ಹಣ ಪಡೆದು ಕೆಲಸಕ್ಕೆ ಬರಲು ವಿಳಂಬ ಮಾಡಿದ್ದಕ್ಕೆ ಮೂವರು ಕಾರ್ಮಿಕರ ಮೇಲೆ ಮನಸೋ ಇಚ್ಛೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದವರ ಪೈಕಿ ಇಟ್ಟಿಗೆ ಕಾರ್ಖಾನೆ ಮಾಲೀಕ ಖೇಮು ರಾಠೋಡ್, ವಿಶಾಲ ಜುಮನಾಳ ಹಾಗೂ ಸಚಿನ್ ಅನ್ನು ಪೊಲೀಸರು ಗಾಂಧಿನಗರದ ಖೇಮು ನಿವಾಸದಲ್ಲಿ ಬಂಧಿಸಿದ್ದಾರೆ. ಪರಾರಿಯಾದ ಇಬ್ಬರಿಗಾಗಿ ಶೋಧ ನಡೆಸಿದ್ದಾರೆ. ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಜನವರಿ 18ರಂದು ಮಾಲೀಕ ಖೇಮು ರಾಥೋಡ್, ಸಹಚರರಿಂದ ವಿಜಯಪುರ ಹೊರವಲಯದ ಇಟ್ಟಿಗೆ ಕಾರ್ಖಾನೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಚಿಕ್ಕಲಕಿ ಗ್ರಾಮದ ಕಾರ್ಮಿಕರ ಮೇಲೆ ಹಲ್ಲೆ ಮಾಡಲಾಗಿದೆ. ಮುಂಗಡ ಹಣ, ಕೆಲಸ ಮಾಡುವ ವಿಚಾರವಾಗಿ ಹಲ್ಲೆ ನಡೆದಿದೆ ಎಂದರು.
– ಕಲಬುರಗಿ : ಕಲಬುರಗಿಯಲ್ಲಿ ಭೀಕರ ಅಪಘಾತದಿಂದ ಸ್ಥಳದಲ್ಲೇ ಮೂವರು ಸಾವು
ಕಲಬುರಗಿ : ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಮಗದಂಪುರ ಬಳಿ ದುರಂತ ಸಂಭವಿಸಿದೆ. ಅವಿನಾಶ್(24), ಅಭಿಷೇಕ್(26), ಸಂಜೀವ್(40) ಮೃತರು. ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನಲ್ಲಿದ್ದವರು ಬೀದರ್ನಿಂದ ತೆಲಂಗಾಣದ ಧಾರೂರಿನತ್ತ ತೆರಳುತ್ತಿದ್ದರು. ಈ ವೇಳೆ ತೆಲಂಗಾಣದಿಂದ ಚಿಂಚೋಳಿ ಕಡೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಮೂವರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
– ಕಲಬುರಗಿ: ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಕಾನ್ಸ್ಟೇಬಲ್ ಪತ್ನಿ ದುರ್ಮರಣ
ಕಲಬುರಗಿ: ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿ ತೆರಳುತ್ತಿದ್ದ ಕಾನ್ಸ್ಟೇಬಲ್ ಪತ್ನಿ ಸಾವನ್ನಪ್ಪಿರುವಂತಹ ಘಟನೆ ಕಲಬುರಗಿ ನಗರದ ಪೂಜಾರಿ ಚೌಕ್ ಬಳಿ ನಡೆದಿದೆ. ಕಾನ್ಸ್ಟೇಬಲ್ ಈರಣ್ಣ ಹೊಸಮನಿ ಪತ್ನಿ ಈರಮ್ಮ(42) ಮೃತರು. ಪುತ್ರ ಪ್ರಶಾಂತ್ ಜೊತೆ ಬೈಕ್ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನಿಂದ ಈರಮ್ಮ ಕೆಳಗೆ ಬಿದಿದ್ದಾರೆ. ಈ ವೇಳೆ ಅವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.