ಶಿವಮೊಗ್ಗದಲ್ಲಿ ಗುಂಡಿಗೆ ಬಾಲಕಿ ಬಲಿ: ಮುರುಘಾಶ್ರೀಗೆ ಜಾಮೀನು!
– ರೈಲ್ವೆ ಕಾಮಗಾರಿಗೆ ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕಿ ಸಾವು
– ಮುರುಘಾಶ್ರೀಗೆ ಜಾಮೀನು: ಆದ್ರೆ 7 ಕಂಡೀಷನ್
NAMMUR EXPRESS NEWS
ಶಿವಮೊಗ್ಗ : ರೈಲ್ವೆ ಕಾಮಗಾರಿಗೆ ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕಿ ಮೃತಪಟ್ಟ ಘಟನೆ ಶಿವಮೊಗ್ಗದ ಕೋಟೆಗಂಗೂರಿನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು 5 ನೇ ತರಗತಿ ಓದುತ್ತಿದ್ದ ಚೈತ್ರಾ ಎಂದು ಗುರುತಿಸಲಾಗಿದೆ. ಬಾಲಕಿ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕಾಗಿ ತೆಗೆದಿದ್ದ ಗುಂಡಿಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಶಾಲೆ ಬಿಟ್ಟು ಬಂದ ಬಾಲಕಿ ಹೊಲಕ್ಕೆ ಹೋಗಿ ಅಪ್ಪ ಅಮ್ಮನನ್ನು ನೋಡಿ ವಾಪಸ್ ಮನೆಗೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ರಸ್ತೆ ನಡುವೆ ಗುಂಡಿ ತೆಗೆದು ಮುಚ್ಚದೇ ಇರುವುದರಿಂದ, ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದ ಹಿನ್ನೆಲೆ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುರುಘಾಶ್ರೀಗೆ ಜಾಮೀನು ಮಂಜೂರು
ಕಳೆದ 14 ತಿಂಗಳಿಂದ ಜೈಲಿನಲ್ಲಿದ್ದ ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಶರಣ ಸ್ವಾಮೀಜಿಗೆ ಹೈಕೋರ್ಟ್ನಿಂದ ಜಾಮೀನು ಮಂಜೂರು ಮಾಡಲಾಗಿದೆ. ಆದರೆ, ಚಿತ್ರದುರ್ಗಕ್ಕೆ ಹೋಗದಂತೆ ಷರತ್ತು ಹಾಕಲಾಗಿದೆ. ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಪೀಠಾಧ್ಯಕ್ಷ ಶ್ರೀ ಶಿವಮೂರ್ತಿ ಮುರುಘ ಶರಣರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ಮಾಡಿದ ನ್ಯಾಯಾಲಯ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ, ಈವರೆಗೆ ಒಟ್ಟು 14 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಮುರುಘಾ ಸ್ವಾಮೀಜಿ ಈಗಾಗಲೇ ಎರಡು ಬಾರಿ ಜಾಮೀನು ಮಂಜೂರಾತಿಗೆ ಹೈಕೋರ್ಟ್ಗೆ ಮನವಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ವಿಚಾರಣೆಯನ್ನು ಮುಂದೂಡಿಕೆ ಮಾಡುತ್ತಾ ಬಂದಿದ್ದ ನ್ಯಾಯಾಲಯ ಒಂದು ಪ್ರಕರಣದಲ್ಲಿ ಮಾತ್ರ ಜಾಮೀನು ಮಂಜೂರು ಮಾಡಿದೆ.
ಒಂದು ಮಠದ ವಸತಿ ನಿಲಯದ ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರದ ಪೋಕ್ಸೋ ಪ್ರಕರಣ ಮತ್ತು ಅಟ್ರಾಸಿಟಿ ಕೇಸ್ಗೆ ಈಗ ಜಾಮೀನು ಮಂಜೂರು ಮಾಡಿದೆ. ಆದರೆ, ಮತ್ತೊಂದು ಪ್ರಕರಣದಲ್ಲಿ ಜಾಮೀನು ಮಂಜೂರು ಆಗಿಲ್ಲ. ಆದ್ದರಿಂದ ಮುರುಘಾ ಸ್ವಾಮೀಜಿಗೆ ಜಾಮೀನು ಮಂಜೂರು ಆದರೂ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯವಿಲ್ಲ. ಮತ್ತೊಂದೆಡೆ ಇನ್ನೊಂದು ಪ್ರಕರಣದಲ್ಲಿ ಜಾಮೀನು ಮಂಜೂರು ಆದರೂ ಇವರು ಚಿತ್ರದುರ್ಗದ ಮಠಕ್ಕೆ ಹೋಗುವಂತಿಲ್ಲ ಎಂದು ಹೈಕೋರ್ಟ್ ಮೊದಲ ಪ್ರಕರಣದಲ್ಲಿಯೇ ಷರತ್ತನ್ನು ವಿಧಿಸಿದೆ. ಒಟ್ಟು 7 ಷರತ್ತುಗಳನ್ನು ವಿಧಿಸಿದ ನ್ಯಾಯಾಲಯ ಜೈಲು ಬದಲು ಹೊರಗಿರಲು ಮಾತ್ರ ಅವಕಾಶ ನೀಡಿದ್ದು ಎಲ್ಲ ಕಾರ್ಯವೈಖರಿಗಳಿಗೆ ತಡೆಯನ್ನು ಒಡ್ಡಿದೆ.
ಏಳು ಷರತ್ತುಗಳನ್ನ ವಿಧಿಸಿ ಜಾಮೀನು ನೀಡಿದ ಹೈಕೋರ್ಟ್
ನ್ಯಾಯಾಲಯ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕು..ಯಾವುದೇ ಕಾರಣಕ್ಕೂ ಸಾಕ್ಷ್ಯ ನಾಶ ಮಾಡುವಂತಿಲ್ಲ.ಜಾಮೀನು ಪಡೆಯುವ ಮೊದಲು ಇಬ್ಬರ ಶ್ಯೂರಿಟಿ ನೀಡಬೇಕು.ವಿದೇಶಕ್ಕೆ ಹೋಗದಂತೆ ಪಾಸ್ ಪೋರ್ಟ್ ಸರೆಂಡರ್ ಮಾಡಬೇಕು. 2 ಲಕ್ಷ ರೂ. ಬೆಲೆಬಾಳುವ ಬೇಲ್ ಬಾಂಡ್ ನೀಡಬೇಕು. ವಿಚಾರಣಾ ನ್ಯಾಯಾಲಯ ಹೈಕೋರ್ಟ್ ನ ಜಾಮೀನು ಅರ್ಜಿ ಆದೇಶ ಮೇಲೆ ಪ್ರಭಾವಗೊಳ್ಳಬಾರದು.
ಇದೇ ರೀತಿ ಅಪರಾಧವಾದ ಎಸಗುವಂತಿಲ್ಲ.