ತೀರ್ಥಹಳ್ಳಿ ನೌಕರರ ಸಂಘದ ಪದಗ್ರಹಣ, ಅಭಿನಂದನಾ ಕಾರ್ಯಕ್ರಮ
– ನೌಕರರ ಸಂಘದ ನೂತನಅಧ್ಯಕ್ಷರಾಗಿ ರಾಘವೇಂದ್ರ ಎಸ್ ಅಧಿಕಾರ ಸ್ವೀಕಾರ
– ಗಣ್ಯರಿಂದ ಎಲ್ಲಾ ನೂತನ ನಿರ್ದೇಶಕರಿಗೆ ಗೌರವ ಸಮರ್ಪಣೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ನೌಕರರ ಸಂಘದ ಪದಗ್ರಹಣ, ಅಭಿನಂದನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ತೀರ್ಥಹಳ್ಳಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಎಸ್ ಅಧಿಕಾರ ಸ್ವೀಕಾರ ಮಾಡಿದರು. ಗಣ್ಯರಿಂದ ಎಲ್ಲಾ ನೂತನ ನಿರ್ದೇಶಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. ತೀರ್ಥಹಳ್ಳಿ ಗ್ರಾಮೀಣಾಭಿವೃದ್ಧಿ ಭವನದಲ್ಲಿ ಡಿಸೆಂಬರ್ 2ರಂದು ಕರ್ನಾಟಕ ರಾಜ್ಯ ಸರಕಾರಿ 2024- 29ರ ಅವಧಿಯ ಆಡಳಿತ ಮಂಡಳಿಯ ಪದಗ್ರಹಣ ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ನೌಕರ ಸಂಘದ ನೂತನ ಅಧ್ಯಕ್ಷ ರಾಘವೇಂದ್ರ ಎಸ್ ಅವರು ಮಾತನಾಡಿ, ಸರಕಾರಿ ನೌಕರಿ ಎಂದರೆ ಭದ್ರತೆ ಮತ್ತು ಸೌಲಭ್ಯ ಎಂದು ಎಲ್ಲರೂ ತಿಳಿದುಕೊಳ್ಳುತ್ತಾರೆ. ಆದರೆ ಆ ಭದ್ರತೆ ಮತ್ತು ಸೌಲಭ್ಯ ತನ್ನಿಂದ ತಾನೇ ಬರಲು ಸಾಧ್ಯವಿಲ್ಲ. ಸರಕಾರಿ ನೌಕರರ ಸಂಘದ ಸಂಘಟಿತ ಹೋರಾಟದ ಮೂಲಕ ದೊರಕಿದೆ. 1920ರಲ್ಲಿ ಈ ಸಂಘ ರಚನೆಯಾಗಿದ್ದರೂ ಪೂರ್ಣ ಕಾರ್ಯಚರಣೆಗೆ ಬಂದಿದ್ದು 1962ರಲ್ಲಿ, ಎಲ್ಲರ ಅಧ್ಯಕ್ಷತೆಯಲ್ಲಿ ಸಂಘಟಿತ ಹೋರಾಟದಲ್ಲಿ ನೌಕರರ ಹಿತ ಕಾಪಾಡಲು ರಾಜ್ಯ ಸರಕಾರ ಬಹಳಷ್ಟು ಶ್ರಮಪಟ್ಟಿದ್ದು ಅದರಲ್ಲಿ ತಕ್ಕಮಟ್ಟಿನ ಯಶಸ್ಸನ್ನು ಈಗಾಗಲೇ ಪಡೆದಿದ್ದೇವೆ ಎಂದರು.ತೀರ್ಥಹಳ್ಳಿ ಸರಕಾರಿ ನೌಕರ ಸಂಘದ ಬಗ್ಗೆ 25 ಇಲಾಖೆಗಳಿಂದ 30 ನಿರ್ದೇಶಕರನ್ನು ಒಳಗೊಂಡ ನೌಕರರ ಸಂಘ 1,400 ನೌಕರರನ್ನು ಪ್ರತಿನಿಧಿಸುತ್ತದೆ. 1966 ರಲ್ಲಿ ಕುವೆಂಪುರ ರಸ್ತೆಯಲ್ಲಿ ನೌಕರರ ಭವನವನ್ನು ಪ್ರಾರಂಭಿಸಿ 1973ರಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. 1977ರಲ್ಲಿ ಈ ಕಾರ್ಯ ಪೂರ್ಣಗೊಂಡು ರಥ ಬೀದಿಯ ರಾಮಭಟ್ಟರ ಧರ್ಮಪತ್ನಿಯಾದ ಮೂಕಾಂಬಿಕಾಮ್ಮ ಅವರು ಹಿಂಬದಿಯ ಜಾಗವನ್ನು ದಾನವಾಗಿ ನೀಡಿದ್ದಾರೆ. ಇದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.ಈಗಾಗಲೇ ಅರ್ಧ ಕಾಮಗಾರಿಯನ್ನು ಮುಗಿಸಿದ್ದು, ಕಾಮಗಾರಿಗೆ ಅನುದಾನವನ್ನು ನೀಡಿದ ಪ್ರಮುಖರಿಗೆ ಧನ್ಯವಾದಗಳನ್ನು ಸಮರ್ಪಿಸಿದರು.
ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ ಬೇಕು ನೆರವು
ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘಕ್ಕೆ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಸಂಸದರಾದ ರಾಘವೇಂದ್ರ, ಸಹಕಾರ ನಾಯಕರಾದ ಮಂಜುನಾಥ್ ಗೌಡ ಸೇರಿ ಎಲ್ಲಾ ನಾಯಕರು, ಸರ್ಕಾರಗಳು ಸಹಕಾರ ನೀಡಿದ್ದಾರೆ. ಸಮಸ್ತ ಸರಕಾರಿ ನೌಕರರ ಪರವಾಗಿ ಇನ್ನು ಕಟ್ಟಡದ ಕಾರ್ಯ ಪೂರ್ಣಗೊಳ್ಳಲು 50 ರಿಂದ 60 ಲಕ್ಷ ರೂಪಾಯಿಗಳು ಅವಶ್ಯಕತೆ ಇದ್ದು ಆ ಅನುದಾನವನ್ನು ಗಣ್ಯರಿಂದ ನಿರೀಕ್ಷೆ ಮಾಡಲಾಗುತ್ತದೆ ಎಲ್ಲರೂ ಸೇರಿ ಅನುದಾನವನ್ನು ಕೊಡಿಸುವ ಪ್ರಯತ್ನ ಮಾಡಬೇಕು ಎಂಬುದಾಗಿ ವಿನಂತಿಸಲಾಗುತ್ತದೆ ಎಂದು ವಿನಂತಿಸಿಕೊಂಡರು. ಅಧ್ಯಕ್ಷರಾಗಿ ಬಹಳಷ್ಟು ಹೊಣೆಗಾರಿಕೆಯಿದ್ದು ಜವಾಬ್ದಾರಿಯು ಹೆಚ್ಚಾಗಿರುತ್ತದೆ ತಾಲೂಕಿನ ಎಲ್ಲಾ ಸರಕಾರಿ ನೌಕರರ ಹಿತ ಕಾಪಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಮುಂದಿನ ದಿನಗಳಲ್ಲಿ ಈ ಕುರಿತು ಶಕ್ತಿಮೀರಿ ಶ್ರಮಿಸುತ್ತೇನೆ ಎಂದು ಪ್ರಾಸ್ತಾವಿಕ ನುಡಿಯನ್ನು ಆಡಿದರು.
* ಸರಕಾರ ಆಳುವ ಪಕ್ಷ ಬದಲಾವಣೆಯಾಗಬಹುದು ಆದರೆ ಸರಕಾರ ಬದಲಾಗುವುದಿಲ್ಲ- ಆರಗ ಜ್ಞಾನೇಂದ್ರ
ಮಾಜಿ ಗೃಹ ಸಚಿವರು ಮತ್ತು ಶಾಸಕರು ಆರಗ ಜ್ಞಾನೇಂದ್ರ ಅವರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಅವರ ತಂಡವನ್ನು ಅಭಿನಂದಿಸಿ ಮಾತನಾಡಿ, ಸರಕಾರಿ ನೌಕರರ ಪದಾಧಿಕಾರಿಗಳು ಎಂದರೆ ಚುನಾವಣೆ ನಡೆದಂತೆ ಇದರಲ್ಲಿಯೂ ಜಾತಿ, ಸ್ವಾರ್ಥ, ಎಲ್ಲವೂ ಒಳಗೊಂಡಿರುತ್ತದೆ. ಸರಕಾರ ಆಳುವ ಪಕ್ಷ ಬದಲಾವಣೆಯಾಗಬಹುದು ಆದರೆ ಸರಕಾರ ಬದಲಾಗುವುದಿಲ್ಲ. ಅದರಲ್ಲಿ ಗೆದ್ದು ಬರುವುದು ಒಂದು ರೀತಿಯ ಪ್ರತಿಷ್ಠೆ. ಎಲ್ಲರಿಗೂ ಶುಭವಾಗಲಿ ಎಂದು ಶುಭ ಹಾರೈಸಿದರು.
* ಹುದ್ದೆಗೆ ಆಯ್ಕೆಯಾದವರಿಗೆ ಅಧ್ಯಕ್ಷರಿಂದ ಗೌರವ ಸಮರ್ಪಣೆ
ಕಾರ್ಯಕ್ರಮದಲ್ಲಿ ಎರಡು ಹುದ್ದೆಗಳನ್ನು ಮಾತ್ರ ಘೋಷಿಸಿ, ಮುಂದೆ ನಡೆಯುವ ಕಾರ್ಯಕಾರಿ ಸಮಿತಿಯಲ್ಲಿ ಆಯ್ಕೆ ಮಾಡಿಕೊಳ್ಳುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪ್ರಥಮವಾಗಿ ಗೌರವಾಧ್ಯಕ್ಷ ಹುದ್ದೆಗೆ ಆರೋಗ್ಯ ಇಲಾಖೆಯ ಗೀತಾ ಎಲ್ ಆಚಾರ್ ಅವರನ್ನು ಘೋಷಣೆ ಮಾಡಲಾಯಿತು. ಎರಡನೆಯದಾಗಿ ಕಾರ್ಯದರ್ಶಿ ಹುದ್ದೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪವಿತ್ರ ಹೆಚ್ ಸಿ ಅವರನ್ನು ಸೂಚಿಸಿ ಅಧ್ಯಕ್ಷರಿಂದ ಗೌರವ ಸಮರ್ಪಣೆ ಮಾಡಲಾಯಿತು.
* ನೂತನ ಆಡಳಿತ ಮಂಡಳಿಗೆ ಡಾ.ಮಂಜುನಾಥ ಗೌಡ, ಕಿಮ್ಮನೆ ಶುಭಾಶಯ
ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಂಜುನಾಥ ಗೌಡ ಮಾತನಾಡಿ ಸರ್ಕಾರಿ ಕೆಲಸ ದೇವರ ಕೆಲಸ ಹಾಗೇನೆ ಜನರು ನಿಮ್ಮ ಬಳಿ ಬಂದಾಗ ಅವರ ಕೆಲಸವನ್ನು ಅತ್ಯಂತ ಕಳಕಳೆಯಿಂದ ಮಾಡಿ ಅವರ ಕಷ್ಟಗಳಿಗೆ ಸ್ಪಂದಿಸಿ ಎಂದು ಹೇಳಿದರು.
ನಿಮಗೇನಾದರೂ ತೊಂದರೆಯಾದಲ್ಲಿ ನಿಮ್ಮ ಜೊತೆ ನಾನು ಸದಾ ಇರುತ್ತೇನೆ ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದರು. ನೌಕರರ ಸಂಘಕ್ಕೆ 10 ಲಕ್ಷ ಕೊಡುವುದಾಗಿ ಭರವಸೆಯನ್ನು ನೀಡಿ ನೌಕರ ಸಂಘದ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಶುಭ ಕೋರಿದರು. ಕುಟುಂಬ ನಿರ್ವಹಣೆಯ ರೀತಿ ರಾಜ್ಯದ ನಿರ್ವಹಣೆಯಾದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಸಿರಿಬೈಲ್ ಧರ್ಮೇಶ್, ಶಿಕ್ಷಣ ಅಧಿಕಾರಿ ಗಣೇಶ್ ವೈ , ನಿಕಟಪೂರ್ವ ಕಾರ್ಯದರ್ಶಿಗಳು ರಾಮ ಬಿ, ನಿಕಟಪೂರ್ವ ರಾಜ್ಯ ಪರಿಷತ್ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ, ಸರಕಾರಿ ನೌಕರಿ ಶಾಖೆಯ ಖಜಾಂಚಿ ಎಂಸಿ ಮಂಜುನಾಥ್ , ನೂತನ ರಾಜ್ಯ ಪರಿಷತ್ ಸದಸ್ಯ ಎಲ್ಲಪ್ಪ, ಜಿಲ್ಲಾ ಖಜಾಂಚಿ ಸತ್ಯನಾರಾಯಣ, ಕಾರ್ಯಕ್ರಮದ ಮುಖ್ಯ ರೂವಾರಿ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೈಲಾ, ಹಾಗೂ ತಾಲೂಕಿನ ಎಲ್ಲ ಇಲಾಖೆಯ ನೌಕರರ ಸಂಘದ ಅಧ್ಯಕ್ಷರು ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.