ತೀರ್ಥಹಳ್ಳಿ ಶಿಕ್ಷಕರ ಸೌಹಾರ್ದ ಭವನ ಉದ್ಘಾಟನೆ
– 10ನೇ ಮಹಾಸಭೆ, ಪ್ರತಿಭಾ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಸನ್ಮಾನ
– ಮಳಲೀ ಮಠ ಶ್ರೀ, ಆರಗ, ಆರ್.ಎಂ, ಬೇಳೂರು ಸೇರಿ ಗಣ್ಯರು ಹಾಜರ್
– ಸಾವಿರಾರು ಜನರ ಉಪಸ್ಥಿತಿ: ಸಹಕಾರಿಯ ಸಾಧನೆಗೆ ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಕುವೆಂಪು ನಗರದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ ನಿರ್ಮಾಣ ಮಾಡಿರುವ ನೂತನ “ಶಿಕ್ಷಕರ ಸೌಹಾರ್ದ ಭವನ” ಇದರ ಉದ್ಘಾಟನಾ ಕಾರ್ಯಕ್ರಮ ಸಾವಿರಾರು ಷೇರುದಾರರ ಸಮ್ಮುಖದಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ ಇದರ ನೂತನ ಕಟ್ಟಡದ ಉದ್ಘಾಟನೆ ಮತ್ತು 10ನೇ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಸಾಗರ ಶಾಸಕರಾದ ಬೇಳೂರು ಗೋಪಾಲಕೃಷ್ಣ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಮಳಲಿಮಠದ ಶ್ರೀ ಷ| ಬ್ರ| ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಶಿಕ್ಷಕರೇ ಮಾಡಿದ ಸಂಸ್ಥೆ ಇದು. ತೀರ್ಥಹಳ್ಳಿಯಲ್ಲಿ ಜನ್ಮ ತಾಳಿದ ಈ ಸಂಸ್ಥೆ ಇಂದು ರಾಜ್ಯದಲ್ಲಿ ಮಾದರಿಯಾಗುವ ಶಕ್ತಿ ಪಡೆದುಕೊಂಡಿದ್ದೀರಿ. ಎಲ್ಲರ ಮಾರ್ಗದರ್ಶನ ಇದೆ.
ತೀರ್ಥಹಳ್ಳಿ ತಾಲೂಕು ಶಿಕ್ಷಣ, ಧಾರ್ಮಿಕ, ಸಂಸ್ಕೃತಿಯಲ್ಲಿ ರಾಜ್ಯದಲ್ಲಿ ಎಲ್ಲದರಲ್ಲೂ ಮುಂದಿದೆ ಎಂದರು. ದೇಶದ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರ. ತೀರ್ಥಹಳ್ಳಿಯಲ್ಲಿ ಶಿಕ್ಷಕರ ಸಾಧನೆ ಹೆಮ್ಮೆ ಪಡುವಂತಹದು. ತೀರ್ಥಹಳ್ಳಿ ಕ್ಷೇತ್ರ ಮೇಧಾವಿಗಳನ್ನು ಹೊಂದಿದ ಕ್ಷೇತ್ರ. ಮಹಾಬಲೇಶ್ವರ ಹೆಗಡೆ ಅವರ ಅಂತ ವ್ಯಕ್ತಿಗಳ ಸೇವೆ ಅಪಾರ. ವಿದ್ಯೆಯನ್ನು ಯಾರು ಕಸಿಯಲಾರರು. ಸಮಯಕ್ಕೆ ಬೆಲೆ ಕೊಟ್ಟಲ್ಲಿ ಯಾವ ಸಾಧನೆ ಅಸಾಧ್ಯ. ಬಹಳ ಎತ್ತರಕ್ಕೆ ಹೋದಂತೆ ಹಿತ ಶತ್ರುಗಳೇ ಹೆಚ್ಚು. ಟೀಕೆ ಟಿಪ್ಪಣಿಗಳಿಗೆ ಹೆದರದೆ ಸತ್ಯದ ಮಾರ್ಗದಲ್ಲಿ ನಡೆದವರು ಅವರು ಸಾಧನೆ ಮಾಡುತ್ತಾರೆ. ಶಿಕ್ಷಕರು ಸಾಹಿತ್ಯ, ಜ್ಞಾನದ ಭಂಡಾರ. ಏನಾದರೂ ಆಗು ಮಾನವನಾಗು ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯದ್ಭುತ ಸಾಧನೆ: ಗೋಪಾಲಕೃಷ್ಣ
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ರಾಜ್ಯದ ಸಂಸ್ಥೆಯನ್ನು ತೀರ್ಥಹಳ್ಳಿಗೆ ತಂದಿದ್ದೀರಿ. ಪಾಠ ಮಾಡೋದು ಮಾತ್ರವಲ್ಲ. ಇಂತಹ ಸಹಕಾರ ಸಂಸ್ಥೆಗಳಿಂದ ಶಿಕ್ಷಕರಿಗೆ ಸಹಾಯವಾಗುತ್ತದೆ ಎಂದರು.
ಶಿಕ್ಷಕರು ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯದ್ಭುತ ಸಾಧನೆ ಮಾಡಿದ್ದೀರಿ. ನಿವೃತ್ತ ಶಿಕ್ಷಕರ ಬಗೆಯೂ ಕಾಳಜಿ ಇರಲಿ. 7ನೇ ವೇತನವನ್ನು ರಾಜ್ಯ ಸರ್ಕಾರ 20 ಸಾವಿರ ಕೋಟಿ ವ್ಯಯ ಮಾಡಿದೆ. ಸರ್ಕಾರ ಶಿಕ್ಷಕರ ಕಷ್ಟವಾಗಿದೆ ಎಂದರು.
300 ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕೊಟ್ಟ ಸಂಸ್ಥೆ: ಆರಗ
ಮಾಜಿ ಸಚಿವ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಪ್ರೈಮರಿ ಮೇಸ್ಟ್ರು ಏನ್ ಮಾಡ್ತಾರೆ ಎಂಬ ಕುತೂಹಲ ಇತ್ತು. ಮಹಾಬಲೇಶ್ವರ ಹೆಗ್ಡೆ ನೇತೃತ್ವದಲ್ಲಿ ಈ ಸಹಕಾರಿ ರಾಜ್ಯ ವ್ಯಾಪಿ ತನ್ನ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಬಹಳ ಕಡಿಮೆ ಅವಧಿಯಲ್ಲಿ ಮಹಾಬಲೇಶ್ವರ ಹೆಗ್ಡೆ ನೇತೃತ್ವದಲ್ಲಿ ಸಂಸ್ಥೆ 800 ಕೋಟಿ ವ್ಯವಹಾರ ಮಾಡಿದೆ. ಧೈರ್ಯ ಮೆಚ್ಚುಗೆ ಇದೆ. ಶಾಲಾ ಶಿಕ್ಷಕರಿಗೆ, ಪೊಲೀಸರಿಗೆ ಗಂಡು ಕೊಡ್ತಾ ಇರಲಿಲ್ಲ. ಆದರೆ ಇಂದು ಸ್ಥಿತಿ ಬದಲಾಗಿದೆ. ಸಂಘದ ಭುಜ ಬಲ ಸಿಕ್ಕಿದೆ. ಸಂಘಟನೆ ಮೂಲಕ ಎಲ್ಲರೂ ಗಟ್ಟಿಯಾಗಿದ್ದಾರೆ ಎಂದರು.
ಸಂಸ್ಥೆ 300 ಕ್ಕೂ ಹೆಚ್ಚು ಮಂದಿಗೆ ಪ್ರತ್ಯಕ್ಷ ಪರೋಕ್ಷವಾಗಿ ಉದ್ಯೋಗ ಕೊಟ್ಟಿದೆ. ಹೊಸ ಕಲ್ಪನೆಯಿಂದ ಕಟ್ಟಿದ ಸಂಸ್ಥೆ. ಗುರು ಇಲ್ಲದೆ ಯಾವುದು ಇಲ್ಲ. ಹೊಣೆಗಾರಿಕೆ ಸ್ಥಾನದಲ್ಲಿದ್ದೀರಿ. ನಮ್ಮಂತ ರಾಜಕಾರಣಿಗಳ ಭಾಷಣದಿಂದ ದೇಶ ಬದಲಾಗಲ್ಲ. ನಿಮ್ಮಿಂದ ಸಾಧ್ಯ. ತೀರ್ಥಹಳ್ಳಿ ತಾಲೂಕು ಫಲಿತಾಂಶದಲ್ಲಿ ನಂ. 1 ಇದ್ದೇವೆ. ಎಲ್ಲಾ ಶಿಕ್ಷಕರಿಗೆ ಗೌರವಿಸುತ್ತೇನೆ ಎಂದರು.
ಸಾಧನೆ ಎಂಬುದಕ್ಕೆ ಶಿಕ್ಷಕರ ಸಂಘದ ಈ ಸಾಧನೆಯೇ ಸಾಕ್ಷಿ: ಮಂಜುನಾಥ ಗೌಡ
5 ಲಕ್ಷದಿಂದ 800 ಕೋಟಿ ವ್ಯವಹಾರ ಮಾಡಿದ್ದೀರಿ. 9 ಬ್ರಾಂಚ್ ಮೂಲಕ ಸಹಕಾರ ಚಳುವಳಿ ಮಾಡಿದ್ದೀರಿ. ತೀರ್ಥಹಳ್ಳಿ, ಸಾಗರ, ಹೊಸನಗರ ಸಹಕಾರ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆ ಪ್ರಮುಖವಾಗಿ ಸಾಧನೆ ಮಾಡಿದೆ. ಖಾಸಗಿ ಬ್ಯಾಂಕು ಈಗ ಜನರ ಕೈಗೆ ಸಿಲುಕುತ್ತಿಲ್ಲ. ಗುರಿ ಸರಿ ಇದ್ದರೆ ಸಾಧನೆ ಸಾಧ್ಯ ಎಂಬುದಕ್ಕೆ ಪ್ರಾಥಮಿಕ ಶಿಕ್ಷಕರ ಸಹಕಾರ ಸಂಘ ಸಾಕ್ಷಿ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ ಗೌಡ ಹೇಳಿದರು.
ಷೇರುದಾರರು, ಎಲ್ಲರ ಸಹಕಾರಕ್ಕೆ ಸಹಕಾರಿ ಅಧ್ಯಕ್ಷರಾದ ಮಹಾಬಲೇಶ್ವರ ಹೆಗ್ಡೆ ಅಭಿನಂದನೆ ಸಲ್ಲಿಸಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿರಿಬೈಲ್ ಧರ್ಮೇಶ್, ಮಾಜಿ ಅಧ್ಯಕ್ಷ ರಂಗಪ್ಪ ಗೌಡ, ಸಹಕಾರ ಕ್ಷೇತ್ರದ ಪ್ರಮುಖರಾದ ಪ್ರಸನ್ನ ಕುಮಾರ್, ಪಪಂ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ, ಸದಸ್ಯರಾದ ರತ್ನಾಕರ್ ಶೆಟ್ಟಿ, ಸುಶೀಲಾ ಶೆಟ್ಟಿ, ತಿಮ್ಮಪ್ಪ ಸೇರಿದಂತೆ ಎಲ್ಲಾ ನಿರ್ದೇಶಕರು, ಜಿಲ್ಲಾ ಝೆಡ್ ತಾಲೂಕು ಅಧ್ಯಕ್ಷರು, ಸದಸ್ಯರು ಇದ್ದರು.