ಬ್ಯಾಂಕ್ ಅಧಿಕಾರಿ ನಿಗೂಢ ಸಾವು!
ಮಂಗಳೂರು: ಹೋಟೆಲ್ನ ಈಜುಕೊಳದಲ್ಲಿ ಬ್ಯಾಂಕ್ ಅಧಿಕಾರಿ ಮೃತದೇಹ ಪತ್ತೆ
– ಬಂಟ್ವಾಳ: ಯುವಕನ ಮೇಲೆ ಅಪರಿಚಿತರಿಂದ ಹಲ್ಲೆ – ದೂರು ದಾಖಲು
– ಸುಬ್ರಮಣ್ಯ: ಮೊಸರು ಕುಡಿಕೆ ಕಂಬಕ್ಕೆ ಗ್ರೀಸ್ ಹಚ್ಚುತ್ತಿದ್ದ ವೇಳೆ ಕಂಬದಿಂದ ಬಿದ್ದ ಯುವಕ
NAMMUR EXPRESS NEWS
ಮಂಗಳೂರು: ಪ್ರತಿಷ್ಠಿತ ಹೊಟೇಲಿನ ಈಜು ಕೊಳದಲ್ಲಿ ಬ್ಯಾಂಕ್ ಅಧಿಕಾರಿ ಮೃತ ದೇಹ ಪತ್ತೆಯಾಗಿದೆ. ಮೋತಿ ಮಹಲ್ ಹೊಟೇಲ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಬ್ಯಾಂಕ್ ಅಧಿಕಾರಿ ಸಾವಿಗೀಡಾಗಿದ್ದಾರೆ. ಮೃತ ವ್ಯಕ್ತಿ ಕೇರಳದ ತಿರುವನಂತಪುರ ನಿವಾಸಿ ಗೋಪು ಆರ್ ನಾಯರ್ ಎಂದು ತಿಳಿದುಬಂದಿದೆ.
ಯೂನಿಯನ್ ಬ್ಯಾಂಕ್ ಅಧಿಕಾರಿಯಾದ ಗೋಪು ಆರ್ ನಾಯರ್ ಅವರು ಭಾನುವಾರ ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್ ನಲ್ಲಿ ಉಳಿದು ಕೊಂಡಿದ್ದರು.ಬ್ಯಾಂಕ್ ಅಧಿಕಾರಿ ಸಂಜೆ 4 ಗಂಟೆ ವೇಳೆ ಹೊಟೇಲ್ ರೂಮ್ ನಿಂದ ಹೊರ ಹೋಗಿದ್ದರು. ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮದ್ಯ ಸೇವಿಸಿ ಸ್ವಿಮ್ಮಿಂಗ್?:
ಹೊಟೇಲ್ ನ ಈಜುಕೊಳದಲ್ಲಿ ಮೃತದೇಹ ಪತ್ತೆಯಾಗಿದ್ದು, 11 ಅಡಿ ಆಳದಲ್ಲಿದ್ದ ಗೋಪು ಆರ್ ನಾಯರ್ ಮೃತದೇಹವನ್ನು ಮುಳುಗು ತಜ್ಞರು ಹೊರತೆಗೆದಿದ್ದಾರೆ. ಈಜುತ್ತಿರುವಾಗ ಮೇಲೆ ಬರಲು ಸಾಧ್ಯವಾಗದೆ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಹೊಟೇಲ್ ರೂಂನಲ್ಲಿ ಮದ್ಯ ಸೇವಿಸಿ ಸ್ವಿಮ್ಮಿಂಗ್ ಫೂಲ್ ಗೆ ಇಳಿದಿರುವ ಅನುಮಾನವಿದೆ. ರೂಮ್ ನಲ್ಲಿ ಖಾಲಿಯಾದ ಮದ್ಯ ಬಾಟಲಿ, ಫುಡ್ ಪತ್ತೆಯಾಗಿದೆ.
ಯುವಕನ ಮೇಲೆ ಅಪರಿಚಿತರಿಂದ ಹಲ್ಲೆ: ಕೇಸ್!
ಬಂಟ್ವಾಳ: ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾವೂರ ಸಮೀಪದ ಮೈಂದಾಳ ನಿವಾಸಿ ನಿಸಾರ್ ಎಂಬವರ ಮೇಲೆ ಅಪರಿಚಿತ ವ್ಯಕ್ತಿಗಳು ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.
ಸೆ.9ರಂದು ರಾತ್ರಿ ಸುಮಾರು 9.45 ಗಂಟೆ ಸುಮಾರಿಗೆ ಅಜ್ಜಿಮನೆಯಿಂದ ನಿಸಾರ್ ಅವರು ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದ ವೇಳೆ ಮೈಂದಾಳ ಸೇತುವೆ ಬಳಿ ಗುರಿಮಜಲು ಎಂಬಲ್ಲಿಗೆ ತಲುಪಿದಾಗ ಅಟೋ ರಿಕ್ಷಾದ ಬಳಿ ನಿಂತಿದ್ದ 5 ಜನರ ಪೈಕಿ ಇಬ್ಬರು ವ್ಯಕ್ತಿಗಳು ನಿಸಾರ್ ಅವರನ್ನು ಅಡ್ಡ ಗಟ್ಟಿ ಕೈಯಿಂದ ಹಲ್ಲೆ ನಡೆಸಿದ್ದಾರೆ. ಅದೇ ಸಂದರ್ಭದಲ್ಲಿ ರಿಕ್ಷಾದ ಬಳಿ ತಲವಾರು ಹಿಡಿದುಕೊಂಡು ನಿಂತಿದ್ದ ಮೂವರು ವ್ಯಕ್ತಿಗಳ ಪೈಕಿ ಓರ್ವ ನಿಸಾರ್ ಗೆ ದಾಳಿ ಮಾಡುವಂತೆ ಹೇಳುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸ್ಥಳದಿಂದ ನಿಸಾರ್ ಅವರು ತಪ್ಪಿಸಿ ಓಡಿ ಹೋಗಿದ್ದು ಬಳಿಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಪೊಲೀಸರು ಅಲ್ಲಿನ ಸಿ.ಸಿ.ಕ್ಯಾಮರಾ ಪರಿಶೀಲನೆ ನಡೆಸುತ್ತಿದ್ದು, ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ಮೊಸರು ಕುಡಿಕೆ ಕಂಬಕ್ಕೆ ಗ್ರೀಸ್ ಹಚ್ಚುತ್ತಿದ್ದ ವೇಳೆ ಕಂಬದಿಂದ ಬಿದ್ದ ಯುವಕ!
ಸುಬ್ರಹ್ಮಣ್ಯ: ಮೊಸರು ಕುಡಿಕೆ ಕಂಬ ಸ್ಥಾಪನೆ ವೇಳೆ ಯುವಕನೊಬ್ಬ ಕಂಬದಿ೦ದ ಬಿದ್ದು ಗಾಯಗೊಂಡ ಪರಿಣಾಮ ಕಾರ್ಯಕ್ರಮ ಸ್ಥಗಿತಗೊಳಿಸಿದ ಘಟನೆ ಕಡಬ ತಾಲೂಕಿನ ಐನೆಕಿದುವಿನಲ್ಲಿ ನಡೆದಿದೆ. ಮೊಸರು ಕುಡಿಕೆ ಕಂಬ ನಿಲ್ಲಿಸಿ ಕಂಬಕ್ಕೆ ಹತ್ತಿ ಭರತ್ ಎನ್ನುವವರು ಗ್ರೀಸ್ ಹಚ್ಚುತಿದ್ದ ವೇಳೆ ಕಂಬದಿ೦ದ ಆಯ ತಪ್ಪಿ ಕೆಳಗೆ ಬಿದ್ದು, ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಳಿಕ ಸಂಘಟಕರು ಅಷ್ಟಮಿ ಕಾರ್ಯಕ್ರಮವನ್ನು ರದ್ದುಗೊಳಿಸಿದರು.
ರಿಕ್ಷಾದಲ್ಲಿ ದನದ ಮಾಂಸ: ಮೂವರು ಅರೆಸ್ಟ್.!
ಆಟೋ ರಿಕ್ಷಾದಲ್ಲಿ ಕ್ವಿಂಟಾಲ್ಗಟ್ಟಲೆ ದನದ ಮಾಂಸ ಸಾಗಾಟ ಮಾಡುತ್ತಿದ್ದವರನ್ನ ಬಜರಂಗದಳದ
ಕಾರ್ಯಕರ್ತರು ಭಾನುವಾರ ಮುಂಜಾನೆ ತಡೆದು ನಿಲ್ಲಿಸಿ, ವಾಹನದಲ್ಲಿದ್ದವರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆಗೆ ಸಂಬಂಧಪಟ್ಟಂತೆ ಮೂವರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಆರೋಪಿಗಳನ್ನು ಕಳವಾರು ಗ್ರಾಮದ ದಾವೂದ್, ಜೋಕಟ್ಟೆಯ ಬದ್ರುದ್ದೀನ್ ಮತ್ತು ಯಾಸೀನ್ ಎಂದು ಗುರುತಿಸಲಾಗಿದೆ. ವಾಹನದಲ್ಲಿ 2.5 ಕ್ವಿಂಟಾಲ್ಗಿಂತಲೂ ಹೆಚ್ಚಿನ ಪ್ರಮಾಣದ ದನದ ಮಾಂಸವನ್ನು ಜೋಕಟ್ಟೆಯಿಂದ ನಗರದ ಬೀಫ್ ಸ್ಟಾಲ್ಗಳಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ತಡೆದು ವಿಚಾರಿಸಿದಾಗ ಆರೋಪಿ ಎಲ್ಲಾ ವಿಚಾರಗಳನ್ನು ಬಾಯಿಬಿಟ್ಟಿದ್ದಾನೆ. ಸದ್ಯ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋ ಹತ್ಯಾ ನಿಷೇಧ ಕಾಯ್ದೆಯಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.