ಊರಿಗೆ ಬರಲು ಜನರ ಪರದಾಟ!
– ಗಣೇಶ ಹಬ್ಬದ ಸಂಭ್ರಮ: 3 ದಿನ ರಜೆ ಹಿನ್ನಲೆಯಲ್ಲಿ ಊರಿಗೆ ಹೊರಟ ಜನ
– ಬಸ್, ರೈಲು ನಿಲ್ದಾಣ ರಶ್: ಎಲ್ಲೆಡೆ ಟ್ರಾಫಿಕ್ ಜಾಮ್
– ಖಾಸಗಿ ಬಸ್ ಟಿಕೆಟ್ ದರ ದುಬಾರಿ: ರಸ್ತೆಯಲ್ಲಿ ವಾಹನ ಹೆಚ್ಚು
NAMMUR EXPRESS NEWS
ಬೆಂಗಳೂರು: ಗೌರಿ-ಗಣೇಶ ಹಬ್ಬ ಸೇರದಂತೆ ಸಾಲು ಸಾಲು ಮೂರು ದಿನ ರಜೆ ಇರುವ ಹಿನ್ನಲೆಯಲ್ಲಿ ಜನ ತಮ್ಮ ತಮ್ಮ ತವರಿಗೆ ಹೊರಟ ಹಿನ್ನೆಲೆ ಶುಕ್ರವಾರದಿಂದ ಬೆಂಗಳೂರಿನ ಬಸ್ ನಿಲ್ದಾಣಗಳಲ್ಲಿ ಜನ ದಟ್ಟಣೆ ಹೆಚ್ಚಾಗಿದೆ.
ಸಾವಿರಾರು ಮಂದಿ ಶುಕ್ರವಾರ ರಾತ್ರಿಯೇ ಹೊರಟಿದ್ದರಿಂದ ಮೆಜೆಸ್ಟಿಕ್ ಪ್ರದೇಶದಲ್ಲಿ ಪ್ರಯಾಣಿಕರ ಜನದಟ್ಟಣೆಯಿಂದ ಗಿಜಿಗುಡುವಂತೆ ಆಗಿತ್ತು. ಅಲ್ಲದೆ ಇಡೀ ನಗರದಲ್ಲಿ ಟ್ರಾಫಿಕ್ ಕಂಡು ಬಂತು. ಗೌರಿ-ಗಣೇಶ ಹಬ್ಬದ ಜೊತೆಗೆ ವಾರಾಂತ್ಯ ರಜೆ ಸೇರಿ 3-4 ದಿನ ಸರಣಿ ರಜೆ ಸಿಗುವುದರಿಂದ ಹಲವರು ಹಬ್ಬಕ್ಕಾಗಿ ಊರಿಗೆ ಹೊರಟಿದ್ದಾರೆ. ಇನ್ನು ರೈಲು ನಿಲ್ದಾಣದಲ್ಲಿ ಕೂಡ ಎಲ್ಲಾ ರೈಲು ರಶ್ ಆಗಿದ್ದವು.
ಖಾಸಗಿ ಬಸ್ ದರ ಸುಲಿಗೆ?!
ಹಬ್ಬಕ್ಕೆ ಊರಿಗೆ ಪ್ರಯಾಣಿಕರು ಹೊರಟ ಬೆನ್ನಲ್ಲೇ, ಖಾಸಗಿ ಬಸ್ ಗಳಿಂದ ಪ್ರಯಾಣಿಕರ ಸುಲಿಗೆ ಕೂಡ ನಡೆಯುತ್ತಿದೆ. ಹಬ್ಬದ ಹೊತ್ತಲ್ಲೇ ಪ್ರಯಾಣ ದರ ಹೆಚ್ಚಳ ಮಾಡಬಾರದು ಅಂತ ಸಾರಿಗೆ ಇಲಾಖೆ ಸೂಚಿಸಿದ್ದರೂ, ದುಪ್ಪಟ್ಟು ಟಿಕೆಟ್ ದರವನ್ನು ವಸೂಲಿಗೆ ಇಳಿದಿದ್ದಾರೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಖಾಸಗಿ ಬಸ್ ಮಾಲೀಕರು ಟಿಕೆಟ್ ದರಗಳಲ್ಲಿ ಭಾರೀ ಹೆಚ್ಚಳ ಮಾಡಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿ, ಶಿವಮೊಗ್ಗ, ಬೆಳಗಾವಿ, ವಿಜಯಪುರ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ತೆರಳುವ ಬಸ್ಗಳ ದರ ಹೆಚ್ಚಿಸಲಾಗಿದೆ. ಪ್ರತಿ ಬಾರಿ ಹಬ್ಬ ಹರಿದಿನಗಳಲ್ಲಿ ಖಾಸಗಿ ಬಸ್ಗಳು ಪ್ರಯಾಣಿಕರಿಗೆ ದುಪಟ್ಟು ಹಣ ವಸೂಲಿ ಮಾಡುತ್ತವೆ. ಹೀಗಾಗಿ ದುಪ್ಪಟ್ಟು ಹಣ ಪಡೆಯದಂತೆ ಟಿಕೆಟ್ ಬುಕ್ಕಿಂಗ್ ಕಂಪನಿಗಳಿಗೆ ಸಾರಿಗೆ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದರು. ಆದರೂ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಸಾಮಾನ್ಯ ದಿನಗಳಲ್ಲಿ 500-700 ರೂಪಾಯಿ ಇದ್ದ ಟಿಕೆಟ್ ದರವನ್ನು 1500- 2500 ರೂಪಾಯಿಗೆ ಹೆಚ್ಚಳ ಮಾಡಿದೆ.
ಗಣೇಶ ಹಬ್ಬದ ಹಿಂದಿನ ದಿನ ಊರಿಗೆ ಹೊಗ್ಬೇಕಂದರೆ ಎರಡು-ಮೂರು ಪಟ್ಟು ಹೆಚ್ಚು ಹಣ ಕೊಟ್ಟು ತೆರಳಬೇಕು.ಸೆಪ್ಟೆಂಬರ್ 18-19 ಗಣೇಶ ಹಬ್ಬ, ಸೆಪ್ಟೆಂಬರ್ 17 ಭಾನುವಾರ, ಸೆಪ್ಟೆಂಬರ್ 16 ರಂದು ಕೆಲಸ ಮಾಡಿ ಊರಿಗೆ ಹೋಗಲಿರುವ ಸರಕಾರಿ, ಖಾಸಗಿ ಕಂಪನಿ ನೌಕರರು ಈ ಕಾರಣಕ್ಕೆ ಶನಿವಾರದಿಂದಲ್ಲೇ ಜನ ತಮ್ಮ ತಮ್ಮ ಊರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ಖಾಸಗಿ ಬಸ್ ಟಿಕೆಟ್ ದರಗಳನ್ನು ದುಪ್ಪಟ್ಟು ಹೆಚ್ಚಳ ಮಾಡಿದ್ದಾರೆ.
ರಸ್ತೆ ಮೇಲೆ ವಾಹನ ಸಂಖ್ಯೆ ಹೆಚ್ಚಳ
ಹಬ್ಬದ ಹಿನ್ನೆಲೆ ಜನ ಊರಿಗೆ ಹೊರಟ ಕಾರಣ ಮತ್ತು ಗಣೇಶ ಹಬ್ಬದ ಅಂಗವಾಗಿ ರಾಜ್ಯದ ಎಲ್ಲಾ ಕಡೆ ರಸ್ತೆ ಮೇಲೆ ವಾಹನಗಳ ಸಂಖ್ಯೆ ಹೆಚ್ಚಿದೆ. ಜನ ಈ ವಾರ ವಾಹನಗಳನ್ನು ಎಚ್ಚರಿಕೆಯಿಂದ ಚಾಲನೆ ಮಾಡಬೇಕಿದೆ.