ಪ್ರೀತಿ ನಿರಾಕರಿಸಿದ್ದಕ್ಕೆ ಕಾಲೇಜು ಕ್ಯಾಂಪಸ್ನಲ್ಲೇ ವಿದ್ಯಾರ್ಥಿನಿಗೆ ಹಲ್ಲೆ
– ಠಾಣೆಗೆ ಕರೆಸಿ ಥಳಿಸಿದ್ದ ಇನ್ಸ್ಸ್ಪೆಕ್ಟರ್, ಕ್ಷಮಿಸಿಬಿಡು ಅಂತ ಹೆಂಡ್ತಿಗೆ ಸಂದೇಶ ಕಳುಹಿಸಿ ಗಂಡ ಆತ್ಮಹತ್ಯೆ
– ಜೀವಕ್ಕೆ ಕುತ್ತು ತಂದ ಎಣ್ಣೆಪೆಟ್ಟು; ಮಗಳಿಗೆ ಬೈದಿದ್ದಕ್ಕೆ ಸ್ನೇಹಿತನ ಹತ್ಯೆ!
– ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ ಪೊಲೀಸ್ ಕಾನ್ಸ್ಟೇಬಲ್ ಸಾವು
NAMMUR EXPRESS NEWS
ಕೋಲಾರ: ಪ್ರೀತಿಸಲು ನಿರಾಕರಿಸಿದ ಹಿನ್ನೆಲೆ ಪಾಗಲ್ ಪ್ರೇಮಿಯೊಬ್ಬ ಕಾಲೇಜು ವಿದ್ಯಾರ್ಥಿನಿ ಮೇಲೆ ಬೇಡ್ ನಿಂದ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕೆಜಿಎಫ್ನ ಚಾಂಪಿಯನ್ ರೀಫ್ ನಗರದಲ್ಲಿರುವ ಖಾಸಗಿ ಕಾಲೇಜು ಕ್ಯಾಂಪಸ್ನಲ್ಲಿ ನಡೆದಿದೆ.
ದ್ವಿತೀಯ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಪ್ರೀತಮ್ ಪ್ರಭು ಎಂಬ ಯುವಕ, ಪ್ರಥಮ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಅದರಂತೆ ಇಂದು ಸಹ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಪ್ರೀತಿ ಮಾಡುವಂತೆ ಒತ್ತಾಯಿಸಿದ್ದ. ಆದರೆ ವಿದ್ಯಾರ್ಥಿನಿ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಯುವಕ ವಿದ್ಯಾರ್ಥಿನಿಯ ಕುತ್ತಿಗೆಗೆ ಬ್ಲಡ್ ನಿಂದ ಇರಿದಿದ್ದಾನೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ಸದ್ಯ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಹಲ್ಲೆಗೊಳಗಾಗಿರುವ ವಿದ್ಯಾರ್ಥಿನಿ ಮೂಲತಃ ಬೆಂಗಳೂರಿನವಳಾಗಿದ್ದು, ವಿದ್ಯಾಭ್ಯಾಕ್ಕಾಗಿ ಕೆಜಿಎಫ್ನಲ್ಲಿರುವ ತನ್ನ ಚಿಕ್ಕಪ್ಪನ ಮನೆಯಲ್ಲಿ ನೆಲೆಸಿದ್ದಳು. ಘಟನಾ ಸ್ಥಳಕ್ಕೆ ಉರಿಗಾಂ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಠಾಣೆಗೆ ಕರೆಸಿ ಥಳಿಸಿದ್ದ ಇನ್ಸ್ಸ್ಪೆಕ್ಟರ್, ಕ್ಷಮಿಸಿಬಿಡು ಅಂತ ಹೆಂಡ್ತಿಗೆ ಸಂದೇಶ ಕಳುಹಿಸಿ ಗಂಡ ಆತ್ಮಹತ್ಯೆ!
ಬೆಂಗಳೂರು: ಸಾಲದ ವಿಚಾರವಾಗಿ ಠಾಣೆಗೆ ಕರೆಸಿ ವೈಯಾಲಿಕಾವಲ್ ಠಾಣೆ ಇನ್ಸ್ಪೆಕ್ಟರ್ ಥಳಿಸಿದರು ಎಂದು ಆರೋಪಿಸಿ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಲಘಟ್ಟಪುರ ಸಮೀಪ ಬುಧವಾರ ನಡೆದಿದೆ.
ರಘುವನಹಳ್ಳಿಯ ಬಿಸಿಎಂ ಲೇಔಟ್ ನಿವಾಸಿ ವಿ.ನಾಗರಾಜ್ (47) ಮೃತ ದುರ್ದೈವಿ. ಕೆಲಸಕ್ಕೆ ತೆರಳಿದ್ದ ಪತ್ನಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಮೃತನ ಪತ್ನಿ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಗಳಿಗೆ ಬೈದಿದ್ದಕ್ಕೆ ಸ್ನೇಹಿತನನ್ನೇ ಕೊಂದ!
ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತನ ಮಗಳಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿಗೆ ಹೊಡೆದು ಕೊಲೆ ಮಾಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಮಾಡಿ ಬಳಿಕ ಶವವನ್ನು ಸ್ಥಳಾಂತರ ಮಾಡಲು ಹೋಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ನೇಪಾಳ ಮೂಲದ ತೇಜೇಶ್ವರ್ ಹತ್ಯೆಯಾದವ. ಧರ್ಮೇಂದ್ರ ಸಿಂಗ್ ಕೊಲೆಗೈದ ಆರೋಪಿ. ಇಬ್ಬರೂ ದಿನ್ನೂರು ಸಿಗೇಹಳ್ಳಿಯ ನೇಪಾಳಿ ಕಾಲೋನಿ ನಿವಾಸಿಗಳಾಗಿದ್ದಾರೆ. ಹೋಟೆಲ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ತೇಜೇಶ್ವರ್ ಅತಿಯಾದ ಕುಡಿತದ ಚಟವನ್ನು ಮೈ ಗೂಡಿಸಿಕೊಂಡಿದ್ದ. ಕುಡಿತದ ಹಿನ್ನೆಲೆ 2 ತಿಂಗಳ ಹಿಂದೆ ಕೆಲಸದಿಂದ ಹೋಟೆಲ್ ಮಾಲೀಕ ಕಿತ್ತು ಹಾಕಿದ್ದ.
ಹೀಗಾಗಿ ಮೂವರು ನೇಪಾಳಿಗಳನ್ನು ಕರೆದುಕೊಂಡು ತೇಜೇಶ್ವರ್ ಬಾರ್ ಗೆ ಹೋಗಿದ್ದ. ಈ ವೇಳೆ ತೇಜೇಶ್ವರ್ ಹಾಗೂ ಧರ್ಮೇಂದ್ರ ಸಿಂಗ್ ನಡುವೆ ಗಲಾಟೆಯಾಗಿದೆ. ಈ ಗಲಾಟೆ ಧರ್ಮೇಂದ್ರ ಮನೆಯವರೆಗೂ ತಲುಪಿತ್ತು. ಕುಡಿತ ಮತ್ತಿನಲ್ಲಿ ಮನೆಗೆ ಬಂದು ಗಲಾಟೆ ಮಾಡಿ ತನ್ನ ಮಗಳನ್ನು ಬೈದ ಎಂದು ಪ್ಲಾಸ್ನಿಂದ ಬಡಿದು ಧರ್ಮೇಂದ್ರ ಸಿಂಗ್ ಕೊಂದಿದ್ದಾನೆ. ನಂತರ ಸಂಜೆಯವರೆಗೆ ಮನೆಯಲ್ಲಿ ಮೃತದೇಹವನ್ನು ಧರ್ಮೇಂದ್ರ ಇಟ್ಟುಕೊಂಡಿದ್ದ. ನಂತರ ಮತ್ತೊಬ್ಬನಿಗೆ ಹಣ ಕೊಡುತ್ತೇನೆ, ಮೃತದೇಹ ಎಸೆದು ಬರುವಂತೆ ತಿಳಿಸಿದ್ದ. ಕರೆ ಸ್ವೀಕರಿಸಿದವನು ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದ. ಹೀಗಾಗಿ ಸ್ಥಳಕ್ಕೆ ಕಾಡುಗೋಡಿ ಪೊಲೀಸರು ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.
ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲೇ ಪೊಲೀಸ್ ಕಾನ್ಸ್ಟೇಬಲ್ ಸಾವು!
ಧಾರವಾಡ: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಪೊಲೀಸ್ ಕಾನ್ಸ್ಟೇಬಲ್ ಮೃತಪಟ್ಟಿರುವ ಘಟನೆ ತಾಲೂಕಿನ ಇಟ್ಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ನಡೆದಿದೆ. ಹುಚ್ಚೇಶ ಹಿರೇಗೌಡರ (37) ಮೃತ ಕ್ಯಾನ್ಸ್ಟೇಬಲ್. ಇದೇ ವೇಳೆ ಹಿಂಬದಿ ಕುಳಿತಿದ್ದ ಲಕ್ಷ್ಮೀ ಎಂಬ ಮಹಿಳಾ ಕಾನ್ಸ್ಟೇಬಲ್ಗೆ ಗಂಭೀರ ಗಾಯಗಳಾಗಿವೆ. ಛಬ್ಬಿ ಗಣೇಶೋತ್ಸವ ಬಂದೋಬಸ್ತ್ಗೆ ತೆರಳಿದ್ದ ಸಿಬ್ಬಂದಿ ಡ್ಯೂಟಿ ಮುಗಿಸಿ ಮರಳಿ ಬರುವಾಗ ಅಪಘಾತ ನಡೆದಿದೆ. ಎದುರಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿಯಾಗಿ ಕಾನ್ಸ್ಟೇಬಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.