ಕೋಳಿ ಸಾಕಾಣಿಕೆ ವಾಣಿಜ್ಯ ಚಟುವಟಿಕೆ ಅಲ್ಲ
– ತೆರಿಗೆ ವಿಧಿಸುವ ಅಧಿಕಾರ ಗ್ರಾಪಂಗೆ ಇಲ್ಲ
– ಹೈಕೋರ್ಟ್ ಮಹತ್ವದ ಆದೇಶ
NAMMUR EXPRESS NEWS
ಬೆಂಗಳೂರು: ಕೃಷಿ ಭೂಮಿಯಲ್ಲಿ ಕೋಳಿ ಸಾಕಾಣಿಕೆ ಮಾಡುವುದು ವಾಣಿಜ್ಯ ಚಟುವಟಿಕೆ ಅಲ್ಲ. ಅದು ಕೃಷಿ ಚಟುವಟಿಕೆಯಾಗಿದ್ದು, ಹೀಗಾಗಿ ಗ್ರಾಮ ಪಂಚಾಯತ್ ವಾಣಿಜ್ಯ ಕಟ್ಟಡವೆಂದು ತೆರಿಗೆ ವಿಧಿಸುವಂತಿಲ್ಲ ಕೋಳಿ ಸಾಕಾಣಿಕೆಗಾಗಿ ಕೃಷಿ ಭೂಮಿ ಪರಿವರ್ತನೆ ಅಗತ್ಯವಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ತನ್ನ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ತೆರಿಗೆ ವಿಧಿಸಿದ್ದ ಗ್ರಾಮ ಪಂಚಾಯತ್ ಕ್ರಮ ಪ್ರಶ್ನಿಸಿ ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಕೆ.ನರಸಿಂಹಮೂರ್ತಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠವು ಈ ಆದೇಶ ನೀಡಿದೆ. ಕೋಳಿ ಸಾಕಾಣಿಕೆ ಕೇಂದ್ರಕ್ಕಾಗಿ ನಿರ್ಮಾಣ ಮಾಡುವ ಕಟ್ಟಡವನ್ನು ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆ-4ರ(ಎ)(2) ಅಡಿಯಲ್ಲಿ ವಾಣಿಜ್ಯ ಕಟ್ಟಡವನ್ನಾಗಿ ಪರಿಗಣಿಸಿ ತೆರಿಗೆ ವಿಧಿಸಲು ಅವಕಾಶವಿಲ್ಲ. ಕೋಳಿ ಸಾಕಾಣಿಕೆ ಕೇಂದ್ರವಿರುವ ಭೂಮಿ ಕೃಷಿ ಭೂಮಿಯಾಗಿಯೇ ಮುಂದುವರೆಯಲಿದ್ದು ಅದನ್ನು ವಾಣಿಜ್ಯ ಭೂಮಿಯನ್ನಾಗಿ ಪರಿಗಣಿಸಿ ತೆರಿಗೆ ವಿಧಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಅರ್ಜಿದಾರರಿಂದ ತೆರಿಗೆ ರೂಪದಲ್ಲಿ ಈಗಾಗಲೇ ಸಂಗ್ರಹಿಸಿರುವ 59,551 ರೂ.ಗಳನ್ನು ಹಿಂದಿರುಗಿಸಬೇಕು ಎಂದೂ ನಿರ್ದೇಶನ ನೀಡಿದೆ. ಇಷ್ಟೇ ಅಲ್ಲ, ಗ್ರಾಮ ಪಂಚಾಯತ್ ಜಾರಿ ಮಾಡಿದ್ದ ನೊಟೀಸ್ನ್ನು ರದ್ದುಪಡಿಸಿ ಆದೇಶಿಸಿದೆ. ಸೊಂಡೆಕೊಪ್ಪ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಕೋಳಿ ಸಾಕಾಣಿಕೆ ಕೇಂದ್ರವು ಕೈಗಾರಿಕೆಗಳ ಅಡಿಯಲ್ಲಿ ಬರಲಿದ್ದು, ಅದನ್ನ ನಿರಾಕ್ಷೇಪಣಾ ಪತ್ರ ವಿತರಣೆ ಮಾಡುವುದಕ್ಕಾಗಿ 1.3 ಲಕ್ಷ ರೂ.ಗಳನ್ನು ಪಾವತಿ ಮಾಡಲೇಬೇಕು ಎಂದು ಸೂಚನೆ ನೀಡಿ ನೊಟೀಸ್ ನೀಡಿದ್ದರು. ಇದರಿಂದ ಅರ್ಜಿದಾರ 59,551 ಪಾವತಿ ಮಾಡಿದ್ದರು. ನಂತರ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಗೆ ಕೃಷಿ ಚಟುವಟಿಕೆಗಳಾಗಿದ್ದು, ಇದಕ್ಕಾಗಿ ನಿರಾಕ್ಷೇಪಣಾ ಪತ್ರ ಪಡೆಯುವುದು ಹಾಗೂ ತೆರಿಗೆ ಪಾವತಿ ಮಾಡುವ ಅಗತ್ಯವಿಲ್ಲ. ಈ ರೀತಿ ತೆರಿಗೆ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಅಂಶ ಮನಗಂಡು ಹೈಕೋಟ್ರ್ಗೆ ಅರ್ಜಿ ಸಲ್ಲಿಸಿದ್ದರು.