ಮೊಬೈಲ್ ಸ್ಫೋಟ: ಯುವತಿ ಸಾವು!
– ಮೊಬೈಲ್ ಚಾರ್ಜಿಗೆ ಹಾಕಿ ಮಾತನಾಡುವಾಗ ಸ್ಫೋಟ
– ತಂಜಾವೂರಿನ ಪಾಪನಾಸಂನಲ್ಲಿ ನಡೆದ ದುರಂತ
– ವ್ಯಕ್ತಿಯನ್ನು ಸೊಂಡಿಲಲ್ಲಿ ಎತ್ತಿ ಬಿಸಾಕಿದ ಆನೆ!
– ನೀರಿನ ಹರಿವು ಜಾಸ್ತಿಯಾಗಿ ತಂದೆ- ಮಗ ಸಾವು
– ಪಿಲಿಕುಳದಲ್ಲಿ ಚಿರತೆ ದಾಳಿಯಿಂದ ಎಮು ಪಕ್ಷಿ ಸಾವು
NAMMUR EXPRESS NEWS
ತಿರುಚಿ: ಮೊಬೈಲ್ ಫೋನ್ ಚಾರ್ಜ್ ಮಾಡುವಾಗ ಮೊಬೈಲ್ ಅಲ್ಲಿ ಮಾತನಾಡುವಾಗ ಸ್ಫೋಟಗೊಂಡ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ತಂಜಾವೂರಿನ ಪಾಪನಾಸಂನಲ್ಲಿ ಬುಧವಾರ ನಡೆದಿದೆ.
ತಂಜಾವೂರಿನ ಪಾಪನಾಸಂ ಬಳಿಯ ವಿಸಿತಾ ರಾಜಪುರಂ ಗ್ರಾಮದ ನಿವಾಸಿ ಪಿ ಗೋಕಿಲಾ (33) ತನ್ನ ಪತಿ ಪ್ರಭಾಕರನ್ ಅವರ ನಿಧನದ ನಂತರ ಈ ಪ್ರದೇಶದಲ್ಲಿ ಮೊಬೈಲ್ ಸೇವಾ ಕೇಂದ್ರವನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಬುಧವಾರ ಗೋಕಿಲಾ ಚಾರ್ಜಿಂಗ್ ಮಾಡುವಾಗ ಇಯರ್ ಫೋನ್ ಬಳಸಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ, ಮೊಬೈಲ್ ಫೋನ್ ಸ್ಫೋಟಗೊಂಡು ಇಡೀ ಅಂಗಡಿಯನ್ನು ಬೆಂಕಿ ಆವರಿಸಿದೆ. ಘಟನೆಯಲ್ಲಿ ಗೋಕಿಲಾ ಅವರಿಗೆ ತೀವ್ರ ಸುಟ್ಟ ಗಾಯಗಳಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕರಾವಳಿಯಲ್ಲಿ ಕಾಡಾನೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ
ಕಡಬ: ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಐತ್ತೂರು ಗ್ರಾಮದಲ್ಲಿ ನಡೆದಿದೆ. ಕೂಲಿ ಕೆಲಸ ಬಿಟ್ಟು ಮನೆಯ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಗ್ರಾಮದ ನೆಲ್ಯಡ್ಕ ಶಾಲೆಗೆ ಹೊಂದಿಕೊಂಡಿರುವ ಕಾರ್ತಿಕೇಯ ಭಜನಾ ಮಂದಿರದ ಬಳಿ ಕಾಡಾನೆ ಹಠಾತ್ತಾಗಿ ಎದುರು ಬಂದು ಚೋಮ ಅವರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದೆ. ಪರಿಣಾಮವಾಗಿ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.
ನೀರಿನ ಹರಿವು ಜಾಸ್ತಿಯಾಗಿ ತಂದೆ- ಮಗ ಸಾವು.!
ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ದೇವರಬೆಳಕೆರೆ ಪಿಕಪ್ ಜಲಾಶಯದ ಹಿನ್ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ತಂದೆ-ಮಗ ಗುರುವಾರ ಮೃತಪಟ್ಟಿದ್ದಾರೆ. ಮೃತ ದುರ್ದೈವಿಗಳನ್ನು ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆಯ ಚಂದ್ರಪ್ಪ ಹಾಗೂ ಅವರ ಪುತ್ರ ಶೌರ್ಯ ಎಂದು ತಿಳಿದು ಬಂದಿದೆ. ಮೃತ ಚಂದ್ರಪ್ಪ ಅವರ ಮಕ್ಕಳಾದ ಅಥರ್ವ ಮತ್ತು ಶೌರ್ಯ ಇಬ್ಬರು ಸ್ನಾನ ಮಾಡುತ್ತಿರುವಾಗ ಏಕಾಏಕಿ ನೀರಿನ ಹರಿವು ಜಾಸ್ತಿಯಾಗಿ ಇಬ್ಬರು ಮುಳುಗಿದ್ದಾರೆ. ಮಕ್ಕಳು ಮುಳುಗುತ್ತಿರುವುದನ್ನು ನೋಡಿದ ತಂದೆ ಚಂದ್ರಪ್ಪ ಶೌರ್ಯನನ್ನು ರಕ್ಷಿಸಲು ಹೋಗಿದ್ದಾರೆ. ದುರಾದೃಷ್ಟವಶಾತ್ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಆದರೆ 13 ವರ್ಷದ ಅಥರ್ವನನ್ನು ಅಲ್ಲಿಯೇ ಇದ್ದ ಸ್ಥಳೀಯ ಯುವಕರೊಬ್ಬರು ರಕ್ಷಿಸಿದ್ದಾರೆ. ಮೃತ ಚಂದ್ರಪ್ಪ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ವಿಹಾರಕ್ಕೆಂದು ಮಕ್ಕಳ ಜೊತೆ ಪಿಕಪ್ಗೆ ಬಂದಿದ್ದರು ಎಂದು ತಿಳಿದು ಬಂದಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಬ್ಬರ ಶವವನ್ನು ಹೊರತೆ ತೆಗೆದಿದ್ದಾರೆ.
ಪಿಲಿಕುಳದಲ್ಲಿ ಚಿರತೆ ದಾಳಿಯಿಂದ ಎಮು ಪಕ್ಷಿ ಸಾವು
ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ಅಧೀನದ ಮೃಗಾಲಯದಲ್ಲಿ ಏಕೈಕ ಎಮು ಪಕ್ಷಿ ಸಾವು ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಪಡೆದು ತನಿಖೆ ನಡೆಸಲಾಗುವುದು ಎಂದು ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ, ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.