ಕರುನಾಡು ಕಾವೇರಿ ಕಿಚ್ಚು!
– ರಾಜಧಾನಿ ಸೇರಿ ರಾಜ್ಯದಲ್ಲಿ ಹೋರಾಟ
– ರಾಜ್ಯದಲ್ಲಿ ಏನೇನು ಆಯ್ತು… ಇಲ್ಲಿದೆ ಡೀಟೇಲ್ಸ್!
NAMMUR EXPRESS NEWS – ಬೆಂಗಳೂರು: ಕಾವೇರಿ ವಿವಾದ ಇದೀಗ ಹೋರಾಟದ ಕಿಚ್ಚು ಹಚ್ಚಿದೆ. ಶುಕ್ರವಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾವೇರಿ ಕಿಚ್ಚು ಕಂಡು ಬಂದಿದ್ದು ವಿವಿಧ ಹೋರಾಟಗಾರರು, ಕನ್ನಡ ಪರ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿವೆ. ಕರವೇ ಸೇರಿದಂತೆ ಅನೇಕ ರೈತ ಪರ ಸಂಘಟನೆಗಳ ಹೋರಾಟಕ್ಕೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ. ಕರಾವಳಿ, ಮಲೆನಾಡು ಭಾಗದಲ್ಲಿ ಕೊಂಚ ನೀರಸ ಪ್ರತಿಕ್ರಿಯೆ ಕಂಡಿದ್ದು, ಉತ್ತರ ಕರ್ನಾಟಕ, ಮೈಸೂರು, ಬೆಂಗಳೂರು ಭಾಗದಲ್ಲಿ ಬಂದ್ ಯಶಸ್ವಿ ಆಗಿದೆ.
ಬಂದ್ ವೇಳೆ ಬುರ್ಖಾ ಧರಿಸಿ ತಲೆಯ ಮೇಲೆ ಬಿಂದಿಗೆ ಹೊತ್ತ ವಾಟಾಳ್!
ಪ್ರತಿಭಟನೆ ವೇಳೆ ಸದಾ ಒಂದಲ್ಲ ಒಂದು ಗೆಟಪ್ನಲ್ಲಿ ಕಾಣಿಸಕೊಳ್ಳುವ ವಾಟಾಳ್ ನಾಗರಾಜ್ ಕರ್ನಾಟಕ ಬಂದ್ ವೇಳೆ ಬುರ್ಖಾ ಧರಿಸಿ ತಲೆಯ ಮೇಲೆ ಬಿಂದಿಗೆ ಹೊತ್ತುಕೊಂಡು ವಿಭಿನ್ನವಾಗಿ ಪ್ರತಿಭಟನೆ ಮಾಡಿದರು. ಇನ್ನು ಬುರ್ಖಾ ಧರಿಸಿ ತಲೆಯ ಮೇಲೆ ಬಿಂದಿಗೆ ಹೊತ್ತುಕೊಂಡಿರುವುದ್ಯಾಕೆ ಎನ್ನುವುದರ ಬಗ್ಗೆ ವಾಟಾಳ್ ನಾಗರಾಜ್ ವಿವರಿಸಿದ್ದಾರೆ.
ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ವಾಟಾಳ್ ನಾಗರಾಜ್ ಕರ್ನಾಟಕ ಬಂದ್ಗೆ ಕರೆ ಕೊಟ್ಟಿದ್ದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ಸಂಘ-ಸಂಸ್ಥೆಗಳು ರಸ್ತೆಗಳಿದು ಪ್ರತಿಭಟನೆ ಮಾಡುತ್ತಿವೆ. ನಾನು ಧರಿಸಿದ ಬಟ್ಟೆಯ ಬಗ್ಗೆ ನಿಮಗೆ ಗೊತ್ತಾ? ಬುರ್ಖಾ ಬಗ್ಗೆ ವಿವರಿಸಿದ ವಾಟಾಳ್ ನಾಗರಾಜ್, ನ್ಯಾಯದೇವತೆ ಧರಿಸುವ ಬಟ್ಟೆ ಅಥವಾ ಬುರ್ಖಾ ಎಂದಾದರೂ ಕರೆಯಲಿ. ನ್ಯಾಯದೇವತೆಯ ಸಂದೇಶ ಸಾರುವ ಬುರ್ಖಾ ಧರಿಸಿದ್ದೇನೆ. ಮಹಿಳೆಯರ ಗೌರವದ ಸಂಕೇತ ಸಹ ಹೌದು ಎಂದು ವಿವರಿಸಿದರು.
44 ವಿಮಾನಗಳ ಹಾರಾಟ ರದ್ದು
ಕರ್ನಾಟಕ ಬಂದ್ನ ಬಿಸಿ ವಿಮಾನ ಸಂಚಾರಕ್ಕೂ ತಟ್ಟಿದ್ದು, ಸುಮಾರು 44 ವಿಮಾನಗಳ ಸಂಚಾರ ರದ್ದಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದ್ದು, ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಪ್ರತಿಭಟನೆಯ ಬಿಸಿ ತಟ್ಟಿದೆ. ಶುಕ್ರವಾರ ಬೆಂಗಳೂರಿಗೆ ಆಗಮಿಸುವ ಮತ್ತು ತೆರಳಬೇಕಿದ್ದ 44 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಕಾರ್ಯಾಚರಣೆಯ ಕಾರಣದಿಂದ ವಿಮಾನಗಳ ಹಾರಾಟ ರದ್ದಾಗಿದೆ. ಈ ಬಗ್ಗೆ ಪ್ರಯಾಣಿಕರಿಗೂ ತಕ್ಷಣ ಮಾಹಿತಿ ನೀಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಕರ್ನಾಟಕ ಬಂದ್ ಹಿನ್ನೆಲೆ ಬಹಳಷ್ಟು ಪ್ರಯಾಣಿಕರು ತಮ್ಮ ಟಿಕೆಟ್ ಬುಕ್ಕಿಂಗ್ ರದ್ದು ಮಾಡಿರುವ ಕಾರಣಕ್ಕೆ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ದಿಲ್ಲಿ, ಮುಂಬೈ, ಕೊಲ್ಕತ್ತಾ, ಚೆನ್ನೈ ಸೇರಿ ಹಲವೆಡೆ ತೆರಳಬೇಕಿದ್ದ ವಿಮಾನಗಳು ರದ್ದಾಗಿವೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ 22 ವಿಮಾನಗಳು, ರಾಜಧಾನಿ ಬೆಂಗಳೂರಿನಿಂದ ವಿವಿಧೆಡೆ ತೆರಳಬೇಕಿದ್ದ 22 ವಿಮಾನಗಳು ಸೇರಿ ಒಟ್ಟು 44 ವಿಮಾನಗಳ ಹಾರಾಟ ರದ್ದಾಗಿದ್ದು, ಪ್ರಯಾಣಿಕರು ಪರದಾಡಿದರು.
ಸಹಜ ಸ್ಥಿತಿಗೆ ತಲುಪುತ್ತಿರುವ ಬೆಂಗಳೂರು
ಸಿಲಿಕಾನ್ ಸಿಟಿ ಬೆಂಗಳೂರು ಸಹಜ ಸ್ಥಿತಿಗೆ ಮರಳುತ್ತಿದೆ. ಸಂಜೆ 5 ಗಂಟೆ ಬಳಿಕ ಜನರ ಓಡಾಟ, ವಾಹನಗಳ ಸಂಚಾರದಲ್ಲಿ ಹೆಚ್ಚಳವಾಗುತ್ತಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಯತಾಸ್ಥಿತಿಗೆ ಮರಳುತ್ತಿದೆ. ಅಂಗಡಿ ಮುಂಗಟ್ಟುಗಳು ಕೂಡ ಒಂದೊಂದಾಗಿಯೇ ತೆರೆಯುತ್ತಿವೆ.
ಮಂಡ್ಯ, ಮದ್ದೂರಲ್ಲಿ ಭಾರೀ ಪ್ರತಿಭಟನೆ
ಪ್ರತಿದಿನ 3000 ಕ್ಯೂಸೆಕ್ ನೀರು ಹರಿಸುವಂತೆ CWMA ಹೊರಡಿಸಿದ ಆದೇಶದ ವಿರುದ್ಧ ಮಂಡ್ಯದಲ್ಲಿ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ಸರ್ಕಾರ ಈ ವಿಚಾರವಾಗಿ ಮಾತನಾಡಬೇಕು. ಸಂಜೆ ಆರು ಗಂಟೆ ಒಳಗೆ ನಿಮ್ಮ ಅಭಿಪ್ರಾಯವನ್ನ ಸರ್ಕಾರ ತಿಳಿಸಬೇಕು. ಇಲ್ಲವಾದರೇ ಹೋರಾಟದ ರೂಪ ಬದಲಾಗುತ್ತದೆ. ಪ್ರಾಧಿಕಾರದ ಆದೇಶವನ್ನು ಖಂಡಿಸುತ್ತೇವೆ. ಪ್ರಾಧಿಕಾರವನ್ನ ರದ್ದು ಮಾಡಬೇಕು ಎಂದು ರೈತರು ಆಕ್ರೋಶ ಹೊರಹಾಕಿದ್ದು, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದರು.
ಬಂದ್ ಮಾಡಿ ಕ್ರಿಕೆಟ್ ಆಡುತ್ತಿರುವ ವ್ಯಾಪಾರಿಗಳು!
ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ನಡೆಸಲಾಗಿದ್ದು, ಶಿವಾಜಿನಗರದಲ್ಲಿ ಮುಚ್ಚಲ್ಪಟ್ಟಿದ್ದ ಅಂಗಡಿ ಮುಂಗಟ್ಟುಗಳು ಇನ್ನೂ ತೆರೆದಿಲ್ಲ. ಅಂಗಡಿಗಳನ್ನ ಬಂದ್ ಮಾಡಿ ವ್ಯಾಪಾರಸ್ಥರು ಕ್ರಿಕೆಟ್ ಆಡುತ್ತಿದ್ದಾರೆ. ಇವತ್ತು ಇಡೀ ದಿನ ಅಂಗಡಿಗಳನ್ನ ಓಪನ್ ಮಾಡುವುದಿಲ್ಲ. ಕಾವೇರಿ ಹೋರಾಟಕ್ಕೆ ನಮ್ಮಬೆಂಬಲ ಇದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.