– ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ
– ಕಡೂರು ತಾಲೂಕು ರಂಗೇನಹಳ್ಳಿ ಗ್ರಾಮದಲ್ಲಿ ಘಟನೆ
– ಚಿಕ್ಕಮಗಳೂರು ನಗರ ಸಭೆ ಹೈಡ್ರಾಮಾ
– ರಾಜೀನಾಮೆ ನೀಡಿದ ವರಸಿದ್ದಿ ವೇಣುಗೋಪಾಲ್
NAMMUR EXPRESS NEWS
ಚಿಕ್ಕಮಗಳೂರು: ಸಾಲ ಬಾಧೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕು ರಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆ ಹನುಮಮ್ಮ(75) ಎಂದು ಗುರುತಿಸಲಾಗಿದ್ದು, ಕೆರೆಗೆ ಹಾರಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಇವರು ಕೆನರಾ ಬ್ಯಾಂಕ್ ನಲ್ಲಿ ಆರು ಲಕ್ಷ ರೂ. ಸಾಲ ಪಡೆದಿದ್ದರು.ಮಳೆ ಕೊರತೆಯಿಂದ ಬೆಳೆ ನಷ್ಟ ಉಂಟಾಗಿದ್ದು, ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜೀನಾಮೆ ನೀಡಿದ ವರಸಿದ್ದಿ ವೇಣುಗೋಪಾಲ್
ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ವರಸಿದ್ದಿ ವೇಣುಗೋಪಾಲ್ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. ಬುಧವಾರ ಸಂಜೆ 5 ಗಂಟೆ ವೇಳೆಗೆ ಜಿಲ್ಲಾಧಿಕಾರಿಗಳಿಗೆ ಅವರ ರಾಜೀನಾಮೆ ಪತ್ರ ನೀಡಿದ್ದು, ರಾಜೀನಾಮೆ ವಿಚಾರದಲ್ಲಿ ಕಳೆದ ಮೂರಾಲ್ಕು ತಿಂಗಳಿನಿಂದ ಬಿಜೆಪಿ ನಗರಸಭೆ ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ನಡೆಯುತ್ತಿದ್ದ ಜಟಾಪಟಿಗೆ ತೆರೆ ಬಿದ್ದಂತಾಗಿದೆ.ಪಕ್ಷದ ಆಂತರಿಕ ಒಪ್ಪಂದದ ಪ್ರಕಾರ ಒಂದು ವರ್ಷದ ಅವಧಿಯನ್ನು ವೇಣುಗೋಪಾಲ್ ಅವರಿಗೆ ಬಿಟ್ಟು ಕೊಡಲಾಗಿತ್ತು. ಆ ಪ್ರಕಾರ ರಾಜೀನಾಮೆಯನ್ನೂ ಸಲ್ಲಿಸಿದ್ದರಾದರೂ, ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷರ ಬದಲಾವಣೆ ಬೇಡ ಎನ್ನುವ ಕಾರಣಕ್ಕೆ ಪಕ್ಷ ಅವರ ರಾಜೀನಾಮೆಯನ್ನು ಹಿಂತೆಗೆಸಿತ್ತು.
ಆದರೆ ಚುನಾವಣೆ ಮುಗಿದ ಕೂಡಲೇ ರಾಜೀನಾಮೆ ನೀಡುವುದಾಗಿ ತಿಳಿಸಿದ್ದ ವೇಣುಗೋಪಾಲ್ ನಂತರ ಕಾರಣಗಳನ್ನು ಹೇಳುತ್ತಾ ಮುಂದೂಡುತ್ತಲೇ ಬಂದಿದ್ದರು. ಮಾಜಿ ಶಾಸಕ ಸಿ.ಟಿ.ರವಿ ಸೇರಿದಂತೆ ಬಹುತೇಕ ಬಿಜೆಪಿ ಸದಸ್ಯರು ರಾಜೀನಾಮೆ ನೀಡುವಂತೆ ಒತ್ತಡ ಹೇರಿದರೂ ಅದಕ್ಕೆ ಒಪ್ಪಿರಲಿಲ್ಲ. ಈ ಬಗ್ಗೆ ಪಕ್ಷದಲ್ಲೇ ಅಸಮಾಧನವೂ ವ್ಯಕ್ತವಾಗಿತ್ತು. ಕೆಲವರು ವೇಣು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಹ ಒತ್ತಾಯಿಸಿದ್ದರು.