ರಸ್ತೆಗೆ 10 ರೂ. ಬಿಸಾಡಿ ಲಕ್ಷ ರೂ. ಎಗರಿಸಿದ ಕಳ್ಳ!
– ಸುಬ್ರಹ್ಮಣ್ಯ: ಕಾರಿನ ಗಾಜು ಒಡೆದು ಕಳವು.!
– ಜೈನ ಮಂದಿರದಲ್ಲಿ ಕಳ್ಳತನ: ಕೆಲಸಗಾರರ ಅರೆಸ್ಟ್
– ಬಳ್ಳಾರಿಯಲ್ಲಿ ರಾತ್ರಿ ಮನೆ ಕಳ್ಳರ ಸೆರೆ
– ಮಗು ಇದ್ದ ಕಾರು ದರೋಡೆಗೆ ಯತ್ನಿಸಿದ ಪುಂಡರು!
NAMMUR EXPRESS NEWS
ರಾಮನಗರ: ಚನ್ನಪಟ್ಟಣದ ಕೆನರಾ ಬ್ಯಾಂಕ್ ಬಳಿ ವ್ಯಕ್ತಿಯೊಬ್ಬರು ರಸ್ತೆಗೆ ಬಿದ್ದ 10 ರೂ. ನೋಟು ತೆಗೆದುಕೊಳ್ಳಲು ಹೋಗಿ 1 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮಂಗಳವಾರಪೇಟೆ ನಿವಾಸಿ ರಾಘವೇಂದ್ರ ಹಣ ಕಳೆದುಕೊಂಡವರು. ರಾಘವೇಂದ್ರ ಅವರು ಕೆನರಾ ಬ್ಯಾಂಕ್ನಿಂದ 1 ಲಕ್ಷ ರೂ. ಹಣ ಡ್ರಾಮಾಡಿಕೊಂಡು ಹೊರಗೆ ಬಂದಿದ್ದಾರೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ರಸ್ತೆಗೆ 10 ರೂ. ನೋಟು ಬಿಸಾಡಿ ಹಣ ಬಿದ್ದಿದೆ ಎಂದು ಹೇಳಿದ್ದಾನೆ. ರಾಘವೇಂದ್ರ ಅವರು 1 ಲಕ್ಷ ರೂ. ಹಣವಿದ್ದ ಕವರ್ ಅನ್ನು ಬೈಕ್ ಮೇಲೆ ಇಟ್ಟು 10 ರೂ. ಎತ್ತಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಕ್ಷಣಾರ್ಧದಲ್ಲೇ 1 ಲಕ್ಷ ರೂ. ಹಣವಿದ್ದ ಕವರ್ ಎಗರಿಸಿ ಪರಾರಿಯಾಗಿದ್ದಾನೆ.
ಆರೋಪಿ ಹಣ ತೆಗೆದುಕೊಂಡು ಹೋಗುತ್ತಿರುವುದನ್ನು ಮಹಿಳೆಯೊಬ್ಬರು ಕಂಡು ಕೈಸನ್ನೆ ಮಾಡಿ “ಯಾರೋ ನಿನ್ನ ಬ್ಯಾಗ್ ಎತ್ತಿಕೊಂಡು ಹೋಗುತ್ತಿದ್ದಾರೆ ನೋಡಿ ಎಂದು” ರಾಘವೇಂದ್ರ ಅವರಿಗೆ ಎಚ್ಚರಿಸಲು ಪ್ರಯತ್ನ ಪಟ್ಟರು. ಆದರೆ ರಾಘವೇಂದ್ರ ಅವರಿಗೆ ಮಹಿಳೆಯ ಕೈಸನ್ನೆ ಭಾಷೆ ಅರ್ಥವಾಗದೆ ಎಚ್ಚೆತ್ತುಕೊಳ್ಳಲಿಲ್ಲ. ಖತರ್ನಾಕ್ ಕಳ್ಳನ ಕೈಚಳಕ ಬ್ಯಾಂಕ್ ಮುಂದಿನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಚನ್ನಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸುಬ್ರಹ್ಮಣ್ಯದಲ್ಲಿ ಕಾರಿನ ಗಾಜು ಒಡೆದು ಕಳವು
ಸುಬ್ರಹ್ಮಣ್ಯ ಕ್ಷೇತ್ರ ಸಂದರ್ಶನಕ್ಕೆ ಭಾನುವಾರ ಬಂದಿದ್ದ ಕೇರಳದ ವ್ಯಕ್ತಿಯೊಬ್ಬರ ಕಾರಿನ ಗಾಜು ಒಡೆದು ಚಿನ್ನ, ದಾಖಲೆ ಪತ್ರಗಳಿದ್ದ ಬ್ಯಾಗ್ ಕಳವು ಮಾಡಲಾಗಿದೆ. ಕೇರಳದ ಕನ್ನೂರು ಜಿಲ್ಲೆಯ ಪಾಡೋಯೋಟು ಚಲ್ ನಿವಾಸಿ ಸುಯಿಶ್ ಟಿ.ಸಿ. (34) ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ.
ಜೈನ ಮಂದಿರದಲ್ಲಿ ಕಳ್ಳತನ: ಕೆಲಸಗಾರರ ಬಂಧನ
ಬೆಂಗಳೂರು: ಶಾಂತಿನಗರದಲ್ಲಿರುವ ಜೈನ ಮಂದಿರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.’ಪ್ರವೀಣ್ ಕುಮಾರ್ ಅಲಿಯಾಸ್ ಪಿಂಟು (29), ಜೋಶಿ ರಾಮ್ (24), ಗೋವಿಂದ್ಕುಮಾರ್ ಹಾಗೂ ರಾಜೇಂದ್ರಕುಮಾರ್ ಬಂಧಿತರು. ₹9.75 ಲಕ್ಷ ಮೌಲ್ಯದ 14 ಕೆ.ಜಿ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ರಾಜಸ್ಥಾನ ಮೂಲದ ಆರೋಪಿಗಳು, ಟೈಲ್ಸ್ ಜೋಡಣೆ ಕೆಲಸಕ್ಕೆಂದು ಜೈನ ಮಂದಿರಕ್ಕೆ ಬಂದಿದ್ದರು. ಮಂದಿರದಲ್ಲಿ ಹಲವು ದಿನ ಕೆಲಸ ಮಾಡಿದ್ದರು. ಇದೇ ಸಂದರ್ಭದಲ್ಲಿ, ಮಂದಿರದಲ್ಲಿದ್ದ ಬೆಳ್ಳಿ ಸಾಮಗ್ರಿಗಳನ್ನು ಗಮನಿಸಿದ್ದರು. ಸೆ. 9ರಂದು ರಾತ್ರಿ ಬೆಳ್ಳಿ ಸಾಮಗ್ರಿ ಕದ್ದುಕೊಂಡು ರಾಜಸ್ಥಾನಕ್ಕೆ ಹೋಗಿದ್ದರು’ ಎಂದು ಪೊಲೀಸರು ತಿಳಿಸಿದರು. ಕಳ್ಳತನದ ಬಗ್ಗೆ ದೂರು ದಾಖಲಾಗುತ್ತಿದ್ದಂತೆ, ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಹಾಗೂ ಇತರೆ ಸುಳಿವು ಆಧರಿಸಿ ಆರೋಪಿಗಳನ್ನು ರಾಜಸ್ಥಾನದಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಯಿತು’ ಎಂದು ಹೇಳಿದರು.
ಮಗು ಇದ್ದ ಕಾರು ದರೋಡೆಗೆ ಯತ್ನಿಸಿದ ಪುಂಡರು!
ಬೆಂಗಳೂರು: ಕೈಯಲ್ಲಿ ಕಲ್ಲು ಹಿಡಿದ ಪುಂಡರ ಗ್ಯಾಂಗ್ವೊಂದು ದರೋಡೆ ಯತ್ನಿಸಿರುವ ಪ್ರಕರಣ ಚಿಕ್ಕನಾಯಕನಹಳ್ಳಿ ದಿಣ್ಣೆ ಸಮೀಪ ನಡೆದಿದ್ದು, ಘಟನೆಯ ದೃಶ್ಯ ವೈರಲ್ ಆಗಿದೆ. ಅ.9ರ ಸಂಜೆ ಕಾರಿನಲ್ಲಿ ಕುಟುಂಬ ಸದಸ್ಯರೊಂದಿಗೆ ಚಾಲಕ ಬರುತ್ತಿದ್ದಾಗ ಚಿಕ್ಕನಾಯಕನಹಳ್ಳಿ ದಿಣ್ಣೆ ಸಮೀಪ ಕೈಯಲ್ಲಿ ಕಲ್ಲು ಹಿಡಿದ ಒಬ್ಬ ದುಷ್ಕರ್ಮಿ ಕಾರು ನಿಲ್ಲಿಸಲು ಮುಂದಾಗಿದ್ದಾನೆ.
ಕಾರಿನಲ್ಲಿ ಮಗುವಿದ್ದ ಕಾರಣಕ್ಕೆ ದುಷ್ಕರ್ಮಿಗಳು ದರೋಡೆ ಮಾಡದೆ ಹಿಂದೆ ಸರಿದಿದ್ದಾರೆ. ಆದರೆ ಮಗುವಿದ್ದ ಕಾರನ್ನ ಬಿಟ್ಟು ಬೇರೆ ಕಾರುಗಳನ್ನು ತಡೆದು ದರೋಡೆ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ. ಈ ಎಲ್ಲ ದೃಶ್ಯಗಳು ಕಾರಿನ ಡ್ಯಾಷ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಅಂಬರೀಶ್ ಎಂಬುವವರು ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಎಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದೃಶ್ಯದಲ್ಲಿ 3 ಮಂದಿ ಆರೋಪಿಗಳು ಇರುವುದು ಕಂಡು ಬಂದಿದ್ದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.