ಬಿಪಿಎಲ್ ಕಾರ್ಡ್ದಾರರಿಗೆ ಹೊಸ ನಿಯಮ!
– ಸರಕಾರದಿಂದ ಮಹತ್ವದ ಘೋಷಣೆ
– ಮುದ್ರಿತ ರಶೀದಿಯನ್ನು ಪಡೆಯೋದು ಕಡ್ಡಾಯ
NAMMUR EXPRESS NEWS
ಬಿಪಿಎಲ್ ಕಾರ್ಡುದಾರರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಿವೆ.
ಈ ನಡುವಲ್ಲೇ ಬಿಪಿಎಲ್ ಕಾರ್ಡುದಾರರಿಗೆ ಸರಕಾರ ಹೊಸ ರೂಲ್ಸ್ ಜಾರಿ ಮಾಡಿದೆ. ಬಿಪಿಎಲ್ ಕಾರ್ಡುದಾರರಿಗೆ ಪ್ರತೀ ತಿಂಗಳು ಅಕ್ಕಿ ಸೇರಿದಂತೆ ಇತರ ಪಡಿತರ ಸಾಮಗ್ರಿಗಳನ್ನು ನ್ಯಾಯಬೆಲೆ ಅಂಗಡಿಯ ಮೂಲಕ ವಿತರಣೆ ಮಾಡುತ್ತಿದೆ. ಆದ್ರೆ ಪಡಿತರ ಸಾಮಗ್ರಿಗಳನ್ನು ಪಡೆದಿರುವುದಕ್ಕೆ ನ್ಯಾಯ ಬೆಲೆ ಅಂಗಡಿಗಳಲ್ಲಿ ಯಾವುದೇ ರಶೀದಿಯನ್ನು ನೀಡಲಾಗುತ್ತಿಲ್ಲ. ಇದೇ ಕಾರಣಕ್ಕೆ ಕೇಂದ್ರ ಸರಕಾರ ಹೊಸ ರೂಲ್ಸ್ ಜಾರಿ ಮಾಡಿದೆ. ಇನ್ಮುಂದೆ ಪಡಿತರ ಅಂಗಡಿಯಲ್ಲಿ ಪಡಿತರ ಸಾಮಗ್ರಿಗಳನ್ನು ಪಡೆದ ನಂತರದಲ್ಲಿ ಕಡ್ಡಾಯವಾಗಿ ಮುದ್ರಿತ ರಶೀದಿಯನ್ನು ಪಡೆದುಕೊಳ್ಳಲೇಬೇಕು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಸರಕಾರ ಉಚಿತವಾಗಿ ಕೇಂದ್ರ ಸರಕಾರ ನೀಡುತ್ತಿದೆ. ಆದರೆ ರಾಜ್ಯ ಸರಕಾರ ಇದನ್ನು ತನ್ನದು ಎಂಬಂತೆ ಬಿಂಬಿಸುತ್ತಿದೆ. ಹೀಗಾಗಿ ರಶೀದಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಹಾಗೂ ಕೇಂದ್ರ ಸರಕಾರದ ಯೋಜನೆಯನ್ನು ರಶೀದಿಯಲ್ಲಿ ಮುದ್ರಿಸಿ ಬಿಪಿಎಲ್ ಕಾರ್ಡುದಾರರಿಗೆ ನೀಡುವಂತೆ ಕೇಂದ್ರ ಸರಕಾರ ಮಹತ್ವದ ಆದೇಶ ಹೊರಡಿಸಿದೆ.
ಮುಂಬರುವ 2024ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರಕಾರ ಈ ಆದೇಶವನ್ನು ಜಾರಿಗೆ ತಂದಿದೆ ಎನ್ನಲಾಗುತ್ತಿದೆ. ನ್ಯಾಯಬೆಲೆ ಅಂಗಡಿಗಳು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಅಕ್ಕಿ ಒದಗಿಸುವ ಕೇಂದ್ರವಾಗಿದೆ. ಈ ಯೋಜನೆಯನ್ನೂ ಜನರಿಗೆ ತಲುಪಿಸುವುದು ಯೋಜನೆಯ ಉದ್ದೇಶ ಎಂದು ಸರಕಾರ ಹೇಳಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕೊರೊನಾ ಸಂದರ್ಭದಲ್ಲಿ ಬಡವರಿಗೆ ಆಹಾರ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯನ್ನು ಸದ್ಯ 2024ರ ಜೂನ್ ವರೆಗೆ ವಿಸ್ತರಣೆಯನ್ನು ಮಾಡಿದ್ದು, ಈ ಮೂಲಕ ಬಡವರಿಗೆ ಅಕ್ಕಿಯನ್ನು ವಿತರಣೆ ಮಾಡುತ್ತಿದೆ.
ಇನ್ನು ಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿಗಳನ್ನು ಈ ಯೋಜನೆ ಅಡಿಯಲ್ಲಿ ತರಲಾಗಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಮೂಲಕ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ ಐದು ಕೆಜಿ ಅಕ್ಕಿ (ಕೆಲವು ಸ್ಥಳಗಳಲ್ಲಿ ಮೂರು ಕೆಜಿ ಅಕ್ಕಿ ಮತ್ತು ಎರಡು ಕೆಜಿ ಧಾನ್ಯ) ನೀಡುತ್ತದೆ. ಆದರೆ ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯಡಿ ಹಣವನ್ನು ವಿತರಣೆ ಮಾಡುತ್ತಿದೆ.
ಇನ್ನು ನ್ಯಾಯ ಬೆಲೆ ಅಂಗಡಿಯಲ್ಲಿ ನೀಡಲಾಗುವ ರಶೀದಿಯಲ್ಲಿ ಕಾರ್ಡುದಾರರ ಹೆಸರು, ಜಿಲ್ಲೆ, ಫಲಾನುಭವಿಗಳ ಹೆಸರು, ಒಟ್ಟು ಸಂಖ್ಯೆ, ಆಹಾರ ಸಾಮಗ್ರಿ ಹಂಚಿಕೆ ಮಾಡಿದ ದಿನಾಂಕ, ವಿತರಣೆ ಮಾಡಿರುವ ಆಹಾರ ಸಾಮಗ್ರಿಗಳ ವಿವರ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡಿದ ಸಹಾಯಧನದ ಮೊತ್ತ. ಇತ್ಯಾದಿ ವಿವರಗಳನ್ನು ನೀಡಬೇಕು.
ಅದ್ರಲ್ಲೂ ರಶೀದಿಯಲ್ಲಿ ಕೇಂದ್ರ ಸರಕಾರದ ಗರೀಬ್ ಕಲ್ಯಾಣ ಯೋಜನೆ ಮಾಹಿತಿ ಜೊತೆಗೆ ಎಷ್ಟು ಕೆಜಿ ಅಕ್ಕಿ ವಿತರಣೆ ಮಾಡಲಾಗಿದೆ. ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಎಷ್ಟು ಅಕ್ಕಿ ಅಥವಾ ಹಣ ವಿತರಣೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಕಡ್ಡಾಯವಾಗಿ ರಶೀದಿಯಲ್ಲಿ ನಮೂದಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ನ್ಯಾಯ ಬೆಲೆ ಅಂಗಡಿಗಳಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸಿ ರಶೀದಿ ನೀಡುವುದು ಸಾಧ್ಯವಿಲ್ಲ. ಸರಕಾರ ಪ್ರಿಂಟರ್ ನೀಡದಿದ್ದರೆ ಸರಕಾರದ ಆದೇಶವನ್ನು ಪಾಲನೆ ಮಾಡುವುದಿಲ್ಲ. ಸರಕಾರದಿಂದ ಕಮಿಷನ್ ಹಣ ಸಿಕ್ಕಿಲ್ಲ, ಇದೀಗ ರಶೀದಿ ನೀಡಿದ್ರೆ ಹೆಚ್ಚುವರಿ ಹೊರೆಯಾಗಲಿದೆ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದ್ದಾರೆ.