ಕನ್ನಡ ರಾಜ್ಯೋತ್ಸವ ವೇಳೆ 5 ಕನ್ನಡ ಗೀತೆ ಕಡ್ಡಾಯ!
– ನ.1ಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ
– ಏನಿದು ಹೊಸ ಆದೇಶ… ಯಾವ ಯಾವ ಹಾಡು ಹಾಡಬೇಕು?
NAMMUR EXPRESS NEWS
ಬೆಂಗಳೂರು: ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣವಾಗಿ ನವೆಂಬರ್ 1ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಈ ರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಸೇರಿದಂತೆ ಐದು ಕನ್ನಡಗೀತೆಗಳನ್ನು ಕಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಕರ್ನಾಟಕ ಸಂಭ್ರಮ 50ರ ಹಿನ್ನೆಲೆಯಲ್ಲಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅರಿವು ಮೂಡಿಸುವ ಯೋಜನೆ ಹಮ್ಮಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ.
ನ.1 ರಂದು ರಾಜ್ಯದೆಲ್ಲೆಡೆ ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಭ್ರಮ 50 ಅಭಿಯಾನದ ಅಂಗವಾಗಿ ಆಯ್ಕೆ ಮಾಡಿರುವ ನಾಡಿನ ಹೆಸರಾಂತ ಕವಿಗಳ 5 ಕನ್ನಡ ಗೀತೆಗಳನ್ನು ಹಾಡುವ ಮೂಲಕ ಸಮಸ್ತ ಕನ್ನಡಿಗರು ಕನ್ನಡಾಂಬೆಗೆ ನುಡಿ ನಮನ ಸಲ್ಲಿಸಬೇಕು. ರಾಜ್ಯದ ಎಲ್ಲಾ ಜಿಲ್ಲಾಮಟ್ಟ ತಾಲೂಕುಮಟ್ಟ ಹಾಗೂ ಗ್ರಾಮಪಂಚಾಯಿತಿಗಳಲ್ಲಿ ನ.1ರಂದು ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿರುವಂತೆ ಧ್ವಜಾರೋಹಣ, ರಾಷ್ಟ್ರಗೀತೆ, ನಾಡಗೀತೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯಾದ ನಂತರ ಈ ಐದು ಗೀತೆ ಕಡ್ಡಾಯ ಮಾಡಲಾಗಿದೆ.
ಐದು ಗೀತೆಗಳು ಯಾವುದು..?
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು (ಹುಯಿಳಗೋಳ ನಾರಾಯಣರಾಯರು), ಎಲ್ಲಾದರೂ ಇರು ಎಂತಾದರು ಇರು (ಕುವೆಂಪು), ಒಂದೇ ಒಂದೇ ಕರ್ನಾಟಕ ಒಂದೇ (ದ. ರಾ. ಬೇಂದ್ರೆ), ಹೊತ್ತಿತೋ ಹೊತ್ತಿತು ಕನ್ನಡ ದೀಪ ( ಸಿದ್ದಯ್ಯ ಪುರಾಣಿಕ) ಮತ್ತು ಹೆಸರಾಯಿತು,ಕರ್ನಾಟಕ ಉಸಿರಾಗಲಿ ಕನ್ನಡ (ಚನ್ನವೀರ ಕಣವಿ )ಗೀತೆಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.