ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟ ಮಹಿಳೆ ಅಂದರ್!
– ಮಂಗಳೂರು ಉಪ ಕೃಷಿ ನಿರ್ದೇಶಕಿ ಲೋಕಾಯುಕ್ತ ಬಲೆಗೆ
– ಸಸಿ ನೆಡುವ ಯೋಜನೆಯಲ್ಲಿ ಭಾರೀ ಗೋಲ್ಮಾಲ್?!
NAMMUR EXPRESS NEWS
ಮಂಗಳೂರು: ಒಂದು ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟ ಮಂಗಳೂರು ಉಪ ಕೃಷಿ ನಿರ್ದೇಶಕಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತೋಟಗಾರಿಕಾ ಸಸಿಗಳ ಸರಬರಾಜು, ನಾಟಿಗೆ ಸಂಬಂಧಿಸಿದ 50 ಲಕ್ಷ ರೂ. ಮೊತ್ತದ ಬಿಲ್ ಪಾವತಿಸಲು ಒಂದು ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಮಂಗಳೂರಿನ ಉಪ ಕೃಷಿ ನಿರ್ದೇಶಕಿ ಭಾರತಮ್ಮ ಅವರು ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಏನಿದು ಯೋಜನೆ…?
ಕೃಷಿ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿಯಾಗಿದ್ದ ಪರಮೇಶ್ ಎನ್ .ಪಿ. ಅವರು 2022-23 ಮತ್ತು 2023-24ನೇ ಸಾಲಿನಲ್ಲಿ ಕೃಷಿ ಇಲಾಖೆಯ ಅಧೀನದಲ್ಲಿ ಬರುವ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಡಬ್ಲ್ಯೂಡಿಸಿ 2.0 ಯೋಜನೆಯಡಿ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ ಸರಕಾರದ ವತಿಯಿಂದ 50 ಲಕ್ಷ ರೂ. ಮೌಲ್ಯದ ವಿವಿಧ ಜಾತಿಯ ಸಸಿಗಳನ್ನು ಉಚಿತವಾಗಿ ಸರಬರಾಜು ಮಾಡಿ ನಾಟಿ ಕಾಮಗಾರಿ ಮಾಡಿಸಿದ್ದರು. ನರ್ಸರಿ ಗಿಡಗಳಿಗೆ ನೀಡಬೇಕಾದ 18 ಲಕ್ಷ ರೂ. ಹಾಗೂ ಅರಣ್ಯ ಗುತ್ತಿಗೆದಾರರಿಂದ ನಾಟಿ ಮಾಡಿಸಿದ ಮೊತ್ತ 32 ಲಕ್ಷರೂ. ಬಾಕಿ ಇರಿಸಿ, ಸಸಿಗಳನ್ನು ಮುಂಗಡವಾಗಿ ಪಡೆದು ನಾಟಿ ಮಾಡಿಸಿದ್ದರು. ಬಳಿಕ ಕಳೆದ ಆಗಸ್ಟ್ನಲ್ಲಿ ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದರು. ಈ ನಡುವೆ ಬಿಲ್ ಪಾವತಿಸಲು ಅರಣ್ಯ ಗುತ್ತಿಗೆದಾರರು ಪರಮೇಶ್ ಅವರಿಗೆ ಒತ್ತಡ ಹಾಕುತ್ತಿದ್ದರು.
ಹೀಗಾಗಿ ಪರಮೇಶ್ ಬಿಲ್ ಮೊತ್ತ ಪಾವತಿ ಮಾಡುವ ಅಧಿಕಾರಿ ಮಂಗಳೂರು ಉಪ ಕೃಷಿ ನಿರ್ದೇಶಕಿ ಭಾರತಮ್ಮ ಅವರನ್ನು ಅ. 4ರಂದು ಭೇಟಿಯಾಗಿ ಕೇಳಿಕೊಂಡಾಗ ಬಿಲ್ ಮೊತ್ತದ ಶೇ.15ರಷ್ಟು ಲಂಚದ ರೂಪದಲ್ಲಿ ನೀಡಬೇಕು ಇಲ್ಲವಾದಲ್ಲಿ ಬಿಲ್ ಪಾವತಿ ಮಾಡುವುದಿಲ್ಲ ಎಂದಿದ್ದರು. ಮತ್ತೊಮ್ಮೆ ಭೇಟಿ ಮಾಡಿದಾಗ 1 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪರಮೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅ. 21ರಂದು ಭಾರತಮ್ಮ ತಮ್ಮ ಕಚೇರಿಯಲ್ಲಿ ಒಂದು ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಯನ್ನು ವಶಕ್ಕೆ ಪಡೆದ ಪೊಲೀಸರು, ಲಂಚದ ಹಣವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.