ವೈಭವದ ನವರಾತ್ರಿಗೆ ಇಂದು ತೆರೆ!
– 9 ದಿನವೂ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ
– ಮೈಸೂರು ಸೇರಿ ಇಂದು ಎಲ್ಲೆಡೆ ಜಂಬೂ ಸವಾರಿ
– ವಿಜಯದ ಸಂಕೇತ ವಿಜಯ ದಶಮಿ
NAMMUR EXPRESS NEWS
ನಾಡಿನಾದ್ಯಂತ ನವರಾತ್ರಿ ಹಬ್ಬದ ಸಂಭ್ರಮ ಈ ಬಾರಿ ಅದ್ದೂರಿಯಾಗಿ ಆಚರಣೆ ಆಗಿದ್ದು ಕೊನೆ ಹಂತಕ್ಕೆ ಬಂದಿದೆ.
ಅಕ್ಟೋಬರ್ 15ರಂದು ನವರಾತ್ರಿ ಶುರುವಾಗಿದ್ದು, ಕೆಟ್ಟದರ ವಿರುದ್ಧ ಒಳಿತಿನ ವಿಜಯದ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನವರಾತ್ರಿಯನ್ನು ವಿಶೇಷವಾಗಿ ಮೈಸೂರಿನಲ್ಲಿ ಆಚರಣೆ ಮಾಡಲಾಗುತ್ತಿದೆ. ಇಂದು ಜಂಬೂ ಸವಾರಿ ನಡೆಯಲಿದೆ. ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿ ಗುರುತಿಸಿಕೊಂಡಿರುವ ಶೃಂಗೇರಿ ಶಾರದಾಂಬ ದೇವಸ್ಥಾನ ಪ್ರತಿನಿತ್ಯ ಸಾವಿರಾರು ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಅದರಲ್ಲೂ ನವರಾತ್ರಿ ಸಮಯದಲ್ಲಂತೂ ಭಕ್ತರ ಪ್ರವಾಹವೇ ಹರಿದು ಬಂದಿದೆ.
ಎಲ್ಲಾ ದೇವಿ ದೇವಾಲಯಗಳಲ್ಲಿ ಪ್ರತಿ ದಿನ ಕ್ರಮವಾಗಿ ಹಂಸವಾಹನ ಅಲಂಕಾರ, ವೃಷಭವಾಹನ ಅಲಂಕಾರ, ಮಯೂರವಾಹನ ಅಲಂಕಾರ, ಗರುಡವಾಹನ ಅಲಂಕಾರ, ಇಂದ್ರಾಣಿ ಅಲಂಕಾರ, ವೀಣಾಶಾರದಾ ಅಲಂಕಾರ, ಮೋಹಿನಿ ಅಲಂಕಾರ, ರಾಜರಾಜೇಶ್ವರಿ ಅಲಂಕಾರ, ಸಿಂಹವಾಹನ ಅಲಂಕಾರ, ಗಜಲಕ್ಷ್ಮೀ ಅಲಂಕಾರಗಳನ್ನು ಮಾಡಲಾಗಿದೆ.
ಚಂಡಿಕಾ ಹೋಮ, ರಥೋತ್ಸವ, ವಿವಿಧ ಅಲಂಕಾರ, ಪೂಜೆ, ಮಹಾಭಿಷೇಕ, ಶತರುದ್ರಾಭಿಷೇಕ ನಡೆದಿದೆ.
ಮೈಸೂರು ದಸರಾವನ್ನು ನಾಡಹಬ್ಬ ಎಂದೂ ಕರೆಯಲಾಗುತ್ತದೆ. ವಿಜಯ ದಶಮಿಯಂದು ನಡೆಯುವ ಜಂಬೂ ಸವಾರಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ. ಮೆರವಣಿಗೆ ಜತೆ ಸಾಗುವ ಕಲಾತಂಡಗಳು, ಕವಾಯತು, ಅಶ್ವ ಪಡೆ, ಪೋಲಿಸ್ ವಾದ್ಯಗೋಷ್ಠಿ, ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಸಂಭ್ರಮವನ್ನು ಹೆಚ್ಚಿಸುತ್ತವೆ. ಅಂಬಾರಿಯಲ್ಲಿ ಚಾಮುಂಡಿ ದೇವರ ವಿಗ್ರಹವನ್ನು ಇಟ್ಟು ಪೂಜಿಸಲಾಗುತ್ತದೆ. ಎಲ್ಲೆಡೆ ವಿಜಯ ದಶಮಿಯಂದು ಹೊಸ ಉದ್ಯಮಗಳು ಶುರುವಾಗುತ್ತಿವೆ.