ಧರ್ಮಸ್ಥಳ ಸಂಘದ ಕಚೇರಿಯಿಂದ 1. 24 ಕೋಟಿ ದರೋಡೆ!
– ಧಾರವಾಡದ ರಾಯಪುರದಲ್ಲಿ ನಡೆದ ಘಟನೆ
– ಸಾಲು ಸಾಲು ರಜೆ ಹಿನ್ನೆಲೆ ಹಣ ಕಟ್ಟಿರಲಿಲ್ಲ
– ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಬಾಲಕಿಯನ್ನು ಹೊರಗೆಳೆದು ತುಳಿದ ಕಾಡಾನೆ!
NAMMUR EXPRESS NEWS
ಧಾರವಾಡ: ಧಾರವಾಡದ ರಾಯಪುರ ಬಡಾವಣೆಯಲ್ಲಿರೋ ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ ಕಚೇರಿಯ ಲಾಕರ್ ಅನ್ನೇ ಕಳ್ಳರು ಲೂಟಿ ಮಾಡಿ 1 ಕೋಟಿ 24 ಲಕ್ಷ ರೂ. ಹಣ ದರೋಡೆ ಮಾಡಿದ್ದಾರೆ. ಕಚೇರಿಯಲ್ಲಿದ್ದ ಒಟ್ಟು ನಾಲ್ಕೂ ಲಾಕರ್ ಗಳನ್ನು ಮುರಿದಿರುವ ಕಳ್ಳರು, ಅಲ್ಲಿದ್ದ ಒಂದು ಪೈಸೆಯನ್ನೂ ಬಿಡದೆ ಕದ್ದುಕೊಂಡು ಹೋಗಿದ್ದಾರೆ. ಸೆಕ್ಯೂರಿಟಿ ಗಾರ್ಡ್ಗಳು ಊಟಕ್ಕೆ ಹೋದ ಸಮಯದಲ್ಲಿ ಕಚೇರಿಯ ಶೌಚಾಲಯದ ಕಿಟಕಿ ಮುರಿದು ಒಳನುಗ್ಗಿದ ಕಳ್ಳರು ಕೃತ್ಯ ಎಸಗಿದ್ದಾರೆ. ಸಿಸಿ ಟಿವಿ ಕ್ಯಾಮೆರಾ ಇಲ್ಲದ ಭಾಗದಿಂದ ಬಂದು ಕಳ್ಳತನ ಮಾಡಿರೋದು ಹಲವು ಅನುಮಾನ ಮೂಡಿಸಿದೆ.
ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ ಅಡಿಯಲ್ಲಿ ಜಿಲ್ಲೆಯಾದ್ಯಂತ ನಿತ್ಯವೂ ಸಂಗ್ರಹವಾಗುತ್ತಿದ್ದ ಹಣ ಅದೇ ದಿನ ಬ್ಯಾಂಕ್ಗೆ ಡೆಪಾಸಿಟ್ ಆಗುತ್ತಿತ್ತು. ಆದರೆ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಮಂಗಳವಾರ ಹಣವನ್ನು ಕಟ್ಟಲಾಗಿರಲಿಲ್ಲ. ಹೀಗಾಗಿ ಕಚೇರಿಯಲ್ಲಿನ ಲಾಕರ್ ನಲ್ಲೇ ಇಟ್ಟು ಹೋಗಿದ್ದರು. ಇದೆಲ್ಲ ತಿಳಿದುಕೊಂಡವರೇ ಕೃತ್ಯ ಎಸಗಿರಬಹುದು ಅಂತ ಶಂಕೆ ವ್ಯಕ್ತವಾಗಿದೆ. ಸದ್ಯ ಕಚೇರಿಯ ಸಿಬ್ಬಂದಿ ಸೇರಿದಂತೆ ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಇಷ್ಟೊಂದು ಹಣ ಕಳ್ಳತವಾಗಿರೋದು, ಅದರಲ್ಲೂ ಖದೀಮರು ಯಾವುದೇ ಸುಳಿವು ಬಿಡದೇ ಇರೋದು ತನಿಖೆಗೆ ಸವಾಲಾಗಿದೆ. ಇದೇ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರೇ ಸ್ಥಳ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಕಾರ್ಯೋನ್ಮುಖವಾಗಿದ್ದಾರೆ.
ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಬಾಲಕಿಯನ್ನು ಹೊರಗೆಳೆದು ತುಳಿದ ಕಾಡಾನೆ!
ಹಾಸನ: ಚಲಿಸುತ್ತಿದ್ದ ಕಾರಿಗೆ ಕಾಡಾನೆಯೊಂದು ಏಕಾಏಕಿ ಅಡ್ಡ ಬಂದು ಕಾರಿನಲ್ಲಿದ್ದ ಬಾಲಕಿಯನ್ನು ಹೊರಗೆಳೆದು ತುಳಿದು ಗಾಯಗೊಳಿಸಿದ ಘಟನೆ ಸಕಲೇಶಪುರದ ಹೊಸಕೆರೆ ಬಳಿ ನಡೆದಿದೆ. ಹಳೆಬಾಗೆ ಗ್ರಾಮದ ದೀಕ್ಷಿತಾ (16) ಕಾಡಾನೆ ದಾಳಿಯಿಂದ ಗಾಯಗೊಂಡ ಬಾಲಕಿ. ಚಿಕ್ಕಮಗಳೂರಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿ, ರಜೆ ಇದ್ದ ಕಾರಣ ತನ್ನ ಊರಾದ ಹಳೆಬಾಗೆ ಗ್ರಾಮಕ್ಕೆ ಬಂದಿದ್ದಳು. ಅಲ್ಲಿಂದ ಪೋಷಕರ ಜೊತೆ ಮಾರುತಿ 800 ಕಾರಿನಲ್ಲಿ ಹೊಸಕೆರೆ ಗ್ರಾಮದ ಅಜ್ಜಿ ಮನೆಗೆ ಹೋಗಿ ವಾಪಾಸ್ ಆಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಏಕಾಏಕಿ ಕಾಡಾನೆ ಕಾರಿಗೆ ಅಡ್ಡ ಬಂದಿದೆ. ಕಾಡಾನೆ ಕಂಡು ದೀಕ್ಷಿತಾ ಪೋಷಕರಾದ ವಿನೋದ ಹಾಗೂ ಗಿರೀಶ್ ಕಾರು ನಿಲ್ಲಿಸಿ ಕೆಳಗಿಳಿದು ಓಡಿ ಹೋಗಿದ್ದಾರೆ.
ದೀಕ್ಷಿತಾ ಕಾಡಾನೆ ಕಂಡು ಗಾಬರಿಯಿಂದ ಕಾರಿನಿಂದ ಇಳಿದು ಓಡಲಾಗದೆ ಕಾರಿನಲ್ಲೇ ಕುಳಿತಿದ್ದಳು. ಕಾಡಾನೆ ದೀಕ್ಷಿತಾಳನ್ನು ಸೊಂಡಿಲಿನಿಂದ ಎಳೆದುಕೊಂಡು ತುಳಿದು ಗಾಯಗೊಳಿಸಿದೆ. ಪೋಷಕರು ಕಿರುಚುತ್ತಿದ್ದಂತೆ ಕಾಡಾನೆ ಕಾಫಿ ತೋಟದೊಳಗೆ ಓಡಿ ಹೋಗಿದೆ. ಗಾಯಗೊಂಡ ಬಾಲಕಿಗೆ ಸಕಲೇಶಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.