ಕರ್ನಾಟಕ ರಾಜಕಾರಣದ ಮಾಸ್ ಹೀರೋ ಬಂಗಾರಪ್ಪ!
– ಜನ್ಮ ದಿನದಂದು ಬಂಗಾರಪ್ಪ ನೆನಪು.. ಅಕ್ಷರ ನಮನ
– ರಾಜ್ಯದ ಹಲವೆಡೆ ಕಾರ್ಯಕ್ರಮ: ನುಡಿ ನಮನ
– ಬಂಗಾರಪ್ಪ ಅವರ ಜೀವನದ ಚಿತ್ರಣ ಇಲ್ಲಿದೆ…!
NAMMUR EXPRESS NEWS
ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ. ಬಡವರ ಬಂಧು, ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ನೇತಾರ, ಬಡಬಗ್ಗರ ಪಾಲಿನ ಆಶ್ರಯದಾತ ಹಾಗೂ ಹಲವು ಪಕ್ಷಗಳ ಸೃಷ್ಟಿಕರ್ತಎಸ್. ಬಂಗಾರಪ್ಪ ಅವರ ಜನ್ಮ ದಿನ ಇಂದು.
ಬಂಗಾರಪ್ಪ ಓರ್ವ ಹಿಂದುಳಿದ ವರ್ಗದ ನಾಯಕರಾಗಿ ರಾಜ್ಯ ಕಂಡ ಮಾಸ್ ನಾಯಕರಲ್ಲಿ ಒಬ್ಬರು. ಅವರ ಗರಡಿಯಲ್ಲಿ ಬೆಳೆದ ಹತ್ತಾರು ಮಂದಿ ರಾಜಕೀಯವಾಗಿ ರಾಜ್ಯವನ್ನು ಆಳುತ್ತಿದ್ದಾರೆ. 1933ರ ಅಕ್ಟೋಬರ್,26 ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕುಬಟೂರು ಗ್ರಾಮದಲ್ಲಿ ಜನಿಸಿದರು. ತಂದೆ ಕಲ್ಲಪ್ಪ ಹಾಗೂ ತಾಯಿ ಕಲ್ಲಮ್ಮ, ಬಂಗಾರಪ್ಪನವರು ಬಿ.ಎ, ಎಲ್.ಎಲ್.ಬಿ ಪದವೀಧರರಾಗಿದ್ದು ‘ಸಮಾಜ ವಿಜ್ಞಾನದಲ್ಲಿ ಡಿಪ್ಲೊಮ ಗಳಿಸಿದ್ದಾರೆ. ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಶಿಷ್ಯರಾಗಿ 1962ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಸಾಗರ-ಸೊರಬ ಜಂಟಿ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಆಯ್ಕೆಗೊಂಡರು. ವಕೀಲಿವೃತ್ತಿಯನ್ನು ನಡೆಸುತ್ತಿದ್ದರು.
ಹಠದ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಸಾರೇಕೊಪ್ಪ ಬಂಗಾರಪ್ಪ ರಾಜಕಾರಣದಲ್ಲಿ ಹಲವಾರು ಪ್ರಥಮಗಳನ್ನು ದಾಖಲಿಸಿದ್ದಾರೆ. ಅತಿ ಹೆಚ್ಚು ಪಕ್ಷ ಸ್ಥಾಪನೆಯಿಂದ ಹಿಡಿದು ಶಾಸಕರನ್ನು ಸೃಷ್ಟಿಸುವ ಕಾರ್ಖಾನೆ ಎಂಬ ಬಿರುದನ್ನು ಸಹ ಪಡೆದವರು. ವಕೀಲ ವೃತ್ತಿ ಪ್ರವೇಶಿಸಿದ್ದ ವೇಳೆ ಸಮಾಜವಾದಿ ಚಳವಳಿಯಲ್ಲಿ ಗುರುತಿಸಿಕೊಂಡ ಯುವಕ ಬಂಗಾರಪ್ಪ 1967ರಲ್ಲಿ ಮೊದಲ ಬಾರಿಗೆ ಸೊರಬದಲ್ಲಿ ಸೋಷಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿದರು. ಮತ್ತೆ ರಾಜಕೀಯವಾಗಿ ತಿರುಗಿ ನೋಡಲೇ ಇಲ್ಲ. ತಮ್ಮ ರಾಜಕೀಯ ಜೀವನದ ಕೊನೆಯವರೆಗೂ ಜನಪ್ರತಿನಿಧಿಯಾಗಿಯೇ ಇದ್ದರೂ ಅಧಿಕಾರ ಅನುಭವಿಸಿದ್ದು ಮಾತ್ರ ಕಡಿಮೆ. ಸಮಾಜವಾದಿ ಹವಾ ಕಡಿಮೆ ಆಗುತ್ತಿದ್ದಂತೆ ಕಾಂಗ್ರೆಸ್ನತ್ತ ಹೊರಳಿದ ಬಂಗಾರಪ್ಪ 1983ರಲ್ಲಿ ಕರ್ನಾಟಕ ಕ್ರಾಂತಿರಂಗದ ನಾಯಕತ್ವ ವಹಿಸಿದರು. ಜನತಾ ಪಕ್ಷದೊಡನೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡು ಜನತಾರಂಗದ ಹೆಸರಿನಲ್ಲಿ ಚುನಾವಣಾ ಪ್ರಚಾರದ ನಾಯಕತ್ವ ವಹಿಸಿದರು.
ಆ ಸಂದರ್ಭ ದಲ್ಲಿ ಸೊರಬದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ ಬಳಿಕ ಫಲಿತಾಂಶದ ಬಳಿಕವಷ್ಟೇ ಕ್ಷೇತ್ರಕ್ಕೆ ಮರಳಿ ಬರುವೆ. ಅಲ್ಲಿಯವರೆಗೆ ರಾಜ್ಯ ಪ್ರವಾಸ ಮಾಡುವೆ. ನನ್ನನ್ನು ಗೆಲ್ಲಿಸಿಕೊಡುವುದು ಸೊರಬದ ಜನತೆ ಕೆಲಸ ಎಂದು ಹೇಳಿ ಹೊರಟವರು ಕೊನೆಗೆ ಚುನಾವಣಾ ದಿನ ಮತ ಹಾಕಲು ಸೊರಬಕ್ಕೆ ಬಂದರು. ಆ ಚುನಾವಣೆ ಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದರು ಎಂಬುದು ಇತಿಹಾಸ.
ಆದರೆ ಗೆಲುವು ಸಾಧಿಸಿ ಅಧಿಕಾರ ಹಿಡಿದ ಜನತಾರಂಗದ ನಾಯಕತ್ವ ಇದ್ದಕ್ಕಿದ್ದಂತೆ ರಾಮ ಕೃಷ್ಣ ಹೆಗಡೆ ಪಾಲಾಗಿ ಅವರು ಮುಖ್ಯಮಂತ್ರಿ ಯಾಗುತ್ತಿದ್ದಂತೆ ಮತ್ತೆ ಸೆಡ್ಡು ಹೊಡೆದ ಬಂಗಾರಪ್ಪ ಜನತಾರಂಗ ತೊರೆದು ಕಾಂಗ್ರೆಸ್ಗೆ ಮರಳಿದರು. 1990ರಲ್ಲಿ ಮುಖ್ಯಮಂತ್ರಿಯಾದರು. 92ರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸೀತಾರಾಮ ಕೇಸರಿಯವರು ಬಂಗಾರಪ್ಪ ಅವರನ್ನು ಅಧಿಕಾರ ದಿಂದ ಇಳಿಸಿ ವೀರಪ್ಪ ಮೊಯ್ಲಿಯವರನ್ನು ಮುಖ್ಯಮಂತ್ರಿ ಯಾಗಿ ಮಾಡಿದರು.
ಆಗ ಮತ್ತೆ ಕಾಂಗ್ರೆಸ್ ತೊರೆದು ತಮ್ಮದೇ ಆದ ಕರ್ನಾಟಕ ಕಾಂಗ್ರೆಸ್ ಪಾರ್ಟಿ(ಕೆಸಿಪಿ) ಸ್ಥಾಪಿಸಿದರು. ಚುನಾ ವಣೆಯಲ್ಲಿ ಸ್ಪರ್ಧಿಸಿ ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದರೂ ಕಾಂಗ್ರೆಸ್ ಪಕ್ಷವನ್ನು ಅಧಿ ಕಾರದಿಂದ ದೂರಕ್ಕೆ ಸರಿಸಿದರು.
ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ ಬಂಗಾರಪ್ಪ, 1997ರಲ್ಲಿ ಪುನಃ ಕಾಂಗ್ರೆಸ್ ತೊರೆದು ಕರ್ನಾಟಕ ವಿಕಾಸ ಪಾರ್ಟಿ (ಕೆವಿಪಿ) ಎಂಬ ಇನ್ನೊಂದು ಪಕ್ಷ ಸ್ಥಾಪಿಸಿದರು.
ನಂತರ ಅದನ್ನು ಕಾಂಗ್ರೆಸ್ ಜೊತೆ ವಿಲೀನ ಗೊಳಿಸಿದರು. 2004ರಲ್ಲಿ ಕೇಂದ್ರದಲ್ಲಿ ಮಂತ್ರಿಯಾ ಗಬಹುದು ಎಂಬ ಆಕಾಂಕ್ಷೆಯಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಒಂದೇ ವರ್ಷದಲ್ಲಿ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದರು. 2010ರಲ್ಲಿ ಆ ಪಕ್ಷವನ್ನೂ ತೊರೆದು ಜೆಡಿಎಸ್ ಸೇರಿದರು. ಅದೇ ಅವರ ಕೊನೆ ಪಕ್ಷವಾಗಿತ್ತು. ಆದರೆ ಅವರು ಯಾವುದೇ ಪಕ್ಷ ಸೇರಿದರೂ ಸೊರಬದ ಜನ ಅವರನ್ನು ಬೆಂಬಲಿಸುತ್ತಿದ್ದರು.
ಅಲ್ಲದೆ ಯಾವುದೇ ಪಕ್ಷ ಸೇರಿದರೂ ಹಿಂದಿನ ಪಕ್ಷದಿಂದ ಗೆದ್ದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸದಾಗಿ ಸ್ಪರ್ಧೆ ಮಾಡುತ್ತಿದ್ದರು ಎಂಬುದು ವಿಶೇಷ. ಹಿಂದೆ ಮುಂದೆ ನೋಡದೆ ನಿರ್ಧಾರ ಕೈಗೊಳ್ಳುತ್ತಿದ್ದ ಅವರು ಹಠದಿಂದ ತಾವು ಅಂದು ಕೊಂಡಿದ್ದನ್ನು ಸಾಧಿಸುತ್ತಿದ್ದರು. ತಮ್ಮ ಸಿಟ್ಟಿಗೆ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಅವರನ್ನು ಕೂಡ ದೂರ ಸರಿಸಿದರು. ಕೊನೆಯವರೆಗೂ ಪುತ್ರನನ್ನು ಹತ್ತಿರ ಸೇರಿಸಲಿಲ್ಲ. ಇನ್ನೊಬ್ಬ ಪುತ್ರ ಮಧು ಬಂಗಾರಪ್ಪನವರನ್ನು ಶಾಸಕನಾಗಿ ನೋಡಬೇಕೆಂದು ಹಠ ತೊಟ್ಟರು. ಆದರೆ 2004ರಲ್ಲಿ ಸೊರಬದಲ್ಲಿ ಮಧು ಬಂಗಾರಪ್ಪ ಮತ್ತು 2008ರಲ್ಲಿ ತಮ್ಮ ಪುತ್ರರಿಬ್ಬರ ಸೋಲನ್ನು ನೋಡ ಬೇಕಾದ ದುರಂತ ಪರಿಸ್ಥಿತಿ ಅವರದ್ದಾಗಿತ್ತು. 2013ರಲ್ಲಿ ಮಧು ಬಂಗಾರಪ್ಪ ಶಾಸಕರಾಗುವ ವೇಳೆ ಬಂಗಾರಪ್ಪ ಇಹಲೋಕ ತೊರೆದಿದ್ದರು.
ಸೋಲಿಲ್ಲದ ಸರದಾರ ಎಂಬ ಅಭಿದಾನವನ್ನು ಪಡೆದ ಬಂಗಾರಪ್ಪ ಸೊರಬದಲ್ಲಿ ನಿರಂತರವಾಗಿ ಯಾವುದೇ ಪಕ್ಷದಲ್ಲಿ ನಿಂತರೂ ಗೆಲ್ಲುತ್ತಿದ್ದರು ಎಂಬುದು ನಿಜ. ಆದರೆ 1994ರಲ್ಲಿ ಸೊರಬದಲ್ಲಿ ಕೆಸಿಪಿ ಸ್ಥಾಪಿಸಿದ್ದ ವೇಳೆ ಸಾಗರ ದಲ್ಲೂ ಒಂದು ಕೈ ನೋಡಿಯೇ ಬಿಡುವ, ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸುತ್ತೇನೆ ಎಂಬ ಭ್ರಮೆಗೆ ಸಿಕ್ಕು ಸ್ಪರ್ಧಿಸಿದರು. ಆದರೆ ಅಲ್ಲಿ 3ನೇ ಸ್ಥಾನ ಪಡೆಯಬೇಕಾಯಿತು. ಬಳಿಕ ಅವರು ಸೋಲು ಕಂಡಿದ್ದು 2008ರಲ್ಲಿ. ಶಿಕಾರಿಪುರ ಕ್ಷೇತ್ರದಲ್ಲಿ ಸಮಾಜ ವಾದಿ ಪಕ್ಷದಿಂದ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ ಸುದ್ದಿ ಮಾಡಿದ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ ಪರೋಕ್ಷವಾಗಿ ಸಹಕರಿ ಸಿದ್ದವು. ಆದರೆ ಆಘಾತಕಾರಿ ಸೋಲು ಎದುರಾಗಿತ್ತು.
ಶ್ರೀ ಬಂಗಾರಪ್ಪ ನವರು ಸ್ವಲ್ಪದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು ಬೆಂಗಳೂರು ನಗರದ ಮಲ್ಯ ಆಸ್ಪತ್ರೆ ಗೆ ಡಿಸೆಂಬರ್ 8 ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗಲಿಲ್ಲ. 2011ರ, ರವಿವಾರ, ಡಿಸೆಂಬರ್, 25ರಂದು, ಮಧ್ಯರಾತ್ರಿ 12:45ಕ್ಕೆ ಕೊನೆಯುಸಿರೆಳೆದರು. ಬಂಗಾರಪ್ಪನವರು ಪತ್ನಿ,ಶಕುಂತಲಾ ಬಂಗಾರಪ್ಪ, ಹಾಗೂ ಇಬ್ಬರು ಗಂಡು ಮಕ್ಕಳು, ಕುಮಾರ ಬಂಗಾರಪ್ಪ,, ಮಧು ಬಂಗಾರಪ್ಪ, ಮೂರು ಜನ ಹೆಣ್ಣು ಮಕ್ಕಳು, ಸುಜಾತ, ಗೀತಾ, ಅನಿತ, ಸೇರಿದಂತೆ ಅಪಾರ ಬಂಧುವರ್ಗ ಮತ್ತು ಅಸಂಖ್ಯಾತ ಅಭಿಮಾನಿಗಳನ್ನು ಬಿಟ್ಟು ಅಗಲಿದರು.
ಅಕ್ಷಯ, ಅರಾಧನಾ,ವಸತಿ, ಉದ್ಯೋಗ, ಗ್ರಾಮೀಣ ಕೃಪಾಂಕ ಸೇರಿ ತಾವು ಆಡಳಿತದಲ್ಲಿದ್ದ ಕಡಿಮೆ ಅವಧಿಯಲ್ಲಿ ನೂರಾರು ಯೋಜನೆ ತಂದ ಬಂಗಾರಪ್ಪ ರಾಜ್ಯದಲ್ಲೇ ಅತೀ ಹೆಚ್ಚು ಜನಪ್ರಿಯತೆ ಹೊಂದಿದ್ದ ನಾಯಕ.
ಬಂಗಾರಪ್ಪ ಜನ್ಮ ದಿನದಂದು ಅವರ ಸೇವೆಯನ್ನು ನೆನೆಯೋಣ..