ದೀಪಾವಳಿಗೆ ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ…?
– ಪೆಟ್ರೋಲ್ ಡೀಸೆಲ್ ಬೆಲೆ ರೂ.10 ಇಳಿಕೆ ಸಾಧ್ಯತೆ
– ಹೊಸ ವಾಹನ ಖರೀದಿಗೆ ಭಾರಿ ಆಫರ್
NAMMUR EXPRESS NEWS
ದಿಪಾವಳಿ ಹಬ್ಬ ಸಮೀಪಿಸುತ್ತಿದ್ದು, ಕೇಂದ್ರ ಸರ್ಕಾರ ದೇಶದ ಜನರಿಗೆ ದೊಡ್ಡ ಸಿಹಿಸುದ್ದಿ ನೀಡಲು ಮುಂದಾಗಿದೆ. ಪೆಟ್ರೋಲ್, ಡೀಸೆಲ್ ದರವನ್ನು ಇಳಿಸಿ, ವಾಹನ ಸವಾರರ ಜೇಬಿನ ಹೊರೆಯನ್ನು ಒಂದಷ್ಟು ಕಡಿಮೆಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ, ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ತೈಲೋತ್ಪನ್ನ ಕಂಪನಿಗಳು ನಿರ್ಧರಿಸಲಿದ್ದು, ಪ್ರತಿದಿನವು ಬೆಲೆಯನ್ನು ಪರಿಷ್ಕರಿಸುವ ಅಧಿಕಾರವನ್ನು ಹೊಂದಿವೆ. ಆದರೆ, ಮೇ.22 2022 ರ ಬಳಿಕ ಅಂದರೆ ಬರೋಬ್ಬರಿ 1.4 ವರ್ಷಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸುವುದು ಅಥವಾ ಇಳಿಸುವುದು ಮಾಡಿಲ್ಲ.
ಇದೀಗ, ದೀಪಾವಳಿಗೂ ಮುನ್ನವೇ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಗೊಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತದೆ ಎಂದು ಹೇಳಲಾಗಿದೆ. ಪ್ರತಿ ಲೀಟರ್ ಗೆ ಸುಮಾರು 10 ರೂಪಾಯಿ ಕಡಿಮೆ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ಸಂಬಂಧ ತೈಲ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಅಧಿಕಾರಿಗಳು ತೈಲೋತ್ಪನ್ನ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
2021 ರಲ್ಲಿಯೂ ಕೇಂದ್ರ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂಪಾಯಿ ಹಾಗೂ ಡೀಸೆಲ್ ಮೇಲೆ 10 ರೂಪಾಯಿಯನ್ನು ಕಡಿಮೆ ಮಾಡಿತ್ತು. ಈ ಬಾರಿ ಪಂಚರಾಜ್ಯ ಚುನಾವಣೆ (ತೆಲಂಗಾಣ, ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಹಾಗೂ ಮಿಜೋರಾಂ) ಹಾಗೂ ಮುಂಬರುವ ಲೋಕಸಭಾ ಚುನಾವಣಾ ದೃಷ್ಟಿಯಿಂದ ಬಹುತೇಕ ಇಂಧನ ದರ ಇಳಿಸಬಹುದು ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಸದ್ಯ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.96.72, ಲೀಟರ್ ಡೀಸೆಲ್ ಬೆಲೆ ರೂ.89.62, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ ರೂ.106.31 ಮತ್ತು 1 ಲೀ. ಡೀಸೆಲ್ ಬೆಲೆ ರೂ.94.27, ಕೋಲ್ಕತ್ತಾದಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.106.03, ಲೀಟರ್ ಡೀಸೆಲ್ ಬೆಲೆ ರೂ. 92.76 38. ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರಗಳನ್ನು ನೋಡುವುದಾದರೆ, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.101.94, ಲೀಟರ್ ಡೀಸೆಲ್ ಬೆಲೆ ರೂ.87.89, ಮೈಸೂರಿನಲ್ಲಿ ಲೀಟರ್ ಪೆಟ್ರೋಲ್ ದರ ರೂ.101.50 ಮತ್ತು 1 ಲೀ. ಡೀಸೆಲ್ ಬೆಲೆ ರೂ.87.49, ಮಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.101.50, ಲೀಟರ್ ಡೀಸೆಲ್ ಬೆಲೆ ರೂ.87.49 ಇದೆ.
ಆಗೊಮ್ಮೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಇಳಿಕೆ ಮಾಡಿದರೆ, ಮಧ್ಯಮ ವರ್ಗದ ದುಡಿಯುವ ವರ್ಗದ ಜನರಿಗೆ ದೊಡ್ಡಮಟ್ಟದಲ್ಲಿ ಅನುಕೂಲವಾಗಲಿದೆ. ಅಲ್ಲದೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹೊಸ ವಾಹನ ಖರೀದಿಗೆ ಜನ ಪ್ಲಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ವಾಹನ ಕಂಪನಿಗಳು ಹೊಸ ಹೊಸ ಆಫರ್ ಘೋಷಣೆ ಮಾಡಿವೆ.