ಸಂಭ್ರಮ ಕಸಿಯದಿರಲಿ ಪಟಾಕಿ..!!
– ದೀಪಾವಳಿಯಲ್ಲಿ ಪಟಾಕಿ ಹಚ್ಚುವ ಮುನ್ನ ಎಚ್ಚರ
– ಪುಟ್ಟ ಮಕ್ಕಳ ಮೇಲಿರಲಿ ವಿಶೇಷ ಕಾಳಜಿ
– ನಿಮ್ಮ ಸಂಭ್ರಮ ಬೇರೆಯವರಿಗೆ ತೊಂದರೆ ಆಗದಿರಲಿ
NAMMUR EXPRESS NEWS
ಬೆಳಕಿನ ಹಬ್ಬ ದೀಪಾವಳಿಯಲ್ಲಿ ನಿಮ್ಮ ಮನೆಯಲ್ಲಿ ಪಟಾಕಿಗಳನ್ನು ಹಚ್ಚುವುದು ಮಾಮೂಲಿ. ಆದರೆ ಪಟಾಕಿ ಹಚ್ಚುವ ಮುನ್ನ ಎಚ್ಚರಿಕೆ ಇರಲಿ. ನಿಮ್ಮ ಮನೆಯ ಸಂಭ್ರಮ ಬೇರೆಯವರಿಗೆ ತೊಂದರೆಯಾಗದಿರಲಿ. ಮಕ್ಕಳ ಬಗ್ಗೆ ಎಚ್ಚರ ಇರಲಿ. ಆದಷ್ಟು ಹಸಿರು ಪಟಾಕಿ ಸಿಡಿಸಿ. ನಿಮ್ಮ ಮನೆಯಲ್ಲಿರುವ ಪುಟ್ಟ ಮಕ್ಕಳ ಮೇಲೆ ವಿಶೇಷ ಕಾಳಜಿವಹಿಸಿ. ಪುಟ್ಟ ಮಕ್ಕಳಿಗೆ ಪಟಾಕಿ ಹಚ್ಚುವುದು ಎಂದರೆ ಬಹಳ ಇಷ್ಟ. ಆದರೆ ಹೆಚ್ಚಿನವು ದೊಡ್ಡವರಿಗೆ ಮಾತ್ರ ಸೀಮಿತವಾಗಿರುತ್ತವೆ.
ಮಕ್ಕಳೂ ಇದರಲ್ಲಿ ಬಹಳ ಎಚ್ಚರಿಕೆಯಿಂದ ಪಾಲ್ಗೊಂಡರೆ ಅಷ್ಟೇ ಒಳ್ಳೆಯದು. ದೀಪಾವಳಿಯಂದು ಪಟಾಕಿ ಹಚ್ಚುವಾಗ ದೊಡ್ಡವರು ಮಕ್ಕಳ ಜೊತೆಗಿರುವುದು ಅಷ್ಟೇ ಮುಖ್ಯ. ಎಲ್ಲಾ ವಯಸ್ಸಿನ ಮಕ್ಕಳಿಗೆ ಪಟಾಕಿಯನ್ನು ಹೇಗೆ ಎಚ್ಚರಿಕೆಯಿಂದ ಹಚ್ಚುವುದು ಎಂದು ಅರ್ಥಮಾಡಿಸಿ ಹೇಳಿಕೊಡುವುದು ಅತಿ ಅವಶ್ಯಕ. ಮಕ್ಕಳು ಪಟಾಕಿ ಹಚ್ಚುವಾಗ ದೊಡ್ಡವರು ಅವರೊಬ್ಬರನ್ನೇ ಬಿಟ್ಟು ಹೋಗುವುದು ಸರಿಯಲ್ಲ. ಕನಿಷ್ಠ ಒಬ್ಬರಾದರೂ ಮಕ್ಕಳು ಪಟಾಕಿ ಹಚ್ಚುವ ಜಾಗದಲ್ಲಿರಬೇಕು. ಜೊತೆಗೆ ಮಕ್ಕಳು ಮನೆಯ ಹೊರಗಡೆ ಮತ್ತು ವಿಶಾಲ ಜಾಗದಲ್ಲಿ ಪಟಾಕಿ ಹಚ್ಚುವಂತೆ ನೋಡಿಕೊಳ್ಳಬೇಕು. ಮನೆಯ ಒಳಗಡೆ ಅಥವಾ ಇಕ್ಕಟ್ಟಾದ ಜಾಗದಲ್ಲಿ ಅಪಾಯಗಳು ಸಂಭವಿಸಬಹುದು.
ಪಟಾಕಿ ಹಚ್ಚುವಾಗ ಕೆಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ. ಅದರಲ್ಲಿ ಬಹಳ ಪ್ರಮುಖವಾದದ್ದು ಎಂದರೆ ನೀರು ಮತ್ತು ಮರಳನ್ನು ಹತ್ತಿರದಲ್ಲಿ ಇಟ್ಟುಕೊಂಡಿರುವುದು. ಬಕೆಟ್ನಲ್ಲಿ ನೀರು ಮತ್ತು ಪಟಾಕಿಗಳನ್ನು ತುಂಬಿಸಿಟ್ಟುಕೊಳ್ಳಿ. ಬೆಂಕಿ ಹೊತ್ತುಕೊಂಡರೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಿ. ನಿಮ್ಮ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಪಟಾಕಿಗಳನ್ನು ಖರೀದಿಸುವುದು ಅವಶ್ಯಕವಾದದ್ದು ಮತ್ತು ಅದು ಎಚ್ಚರಿಕೆಯೂ ಹೌದು. ಬಿದುರಿನ ಕಡ್ಡಿಯಿಂದ ಮಾಡಿದ ಸ್ಟಾರ್ಕ್ಲ್ರಗಳು, ಪಿಸ್ತೂಲ್, ಗ್ಲೋ ವಾರ್ಮ್ ಮುಂತಾದವುಗಳು ಎಲ್ಲಾ ವಯಸ್ಸಿನ ಮಕ್ಕಳು ಬಳಸಬಹುದಾದ ಕೆಲವು ಜನಪ್ರಿಯ ಪಟಾಕಿಗಳ, ರಾಕೆಟ್, ಲಕ್ಷ್ಮೀ ಪಟಾಕಿ, ಪಟಾಕಿ ಸರ ಇವೆಲ್ಲ ಮಕ್ಕಳು ಹಚ್ಚುವಂತ ಪಟಾಕಿಗಳಲ್ಲ. ಅದು ಸುರಕ್ಷಿತವೂ ಅಲ್ಲ.
ನೆಲದಿಂದ ಬಿಡುವ ಅಂದರೆ ರಾಕೆಟ್ ಮುಂತಾದವುಗಳನ್ನು ಮಕ್ಕಳಿಗೆ ನೀಡದಂತೆ ಪೋಷಕರು ಎಚ್ಚರವಹಿಸಬೇಕು. ಅವುಗಳನ್ನು ಹದಿಹರೆಯದ ಮಕ್ಕಳು ಹಚ್ಚದಂತೆ ನೋಡಿಕೊಳ್ಳಬೇಕು. ಪಟಾಕಿ ಇರುವುದು ಆನಂದಿಸಲು, ನೀವು ಮತ್ತು ನಿಮ್ಮ ಮಕ್ಕಳು ಸುರಕ್ಷಿತವಾಗಿಬೇಕು. ಜವಾಬ್ದಾರಿಯುತವಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಈ ಬೆಳಕಿನ ಹಬ್ಬ ದೀಪಾವಳಿಯನ್ನು ಸಂತೋಷದಿಂದ ಆಚರಿಸಿ.