ಬಂತು ಟವೆಲ್ ಸ್ಕರ್ಟ್..ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
– ಲಿಂಗ ಬೇಧವಿಲ್ಲದೆ ಧರಿಸಬಹುದು ಈ ವಸ್ತ್ರ
– ಸೋಷಿಯಲ್ ಮೀಡಿಯಾದಲ್ಲಿ ಈ ಬಟ್ಟೆ ಭಾರಿ ವೈರಲ್!
NAMMUR EXPRESS NEWS
ಬೆಂಗಳೂರು: ಬಾತ್ ಟವೆಲ್ ಮಾದರಿಯ ಸ್ಕರ್ಟ್ ಅನ್ನು ಪ್ರಮುಖ ಫ್ಯಾಷನ್ ಬ್ಯಾಂಡ್ ಬಲೆನ್ಸಿಯಾಗಾ ಹೊರ ತರಲು ಸಜ್ಜಾಗಿದೆ. ಲಿಂಗ ಬೇಧವಿಲ್ಲದೆ ಈ ಉಡುಪನ್ನು ಎಲ್ಲರೂ ಧರಿಸಬಹುದು. ಆದರೆ ಇದರ ಬೆಲೆ ಕೇಳಿದರೆ ನೀವು ಹೌಹಾರುವುದು ಖಚಿತ. ಸದ್ಯ ಈ ಟವೆಲ್ ಸ್ಕರ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಟವೆಲ್ ಸ್ಕರ್ಟ್ನ ಬೆಲೆ ಬರೋಬ್ಬರಿ 925 ಡಾಲರ್ ಅಂದರೆ ಬರೋಬ್ಬರಿ 77,000 ರೂ.! ಬ್ಯಾಂಡ್ನ ಸೃಜನಶೀಲ ಪ್ರತಿಭೆ ಡೆಮ್ಮಾ ಗ್ವಾಸಲಿಯಾ ಈ ವಿಶೇಷ ಉಡುಪನ್ನು ವಿನ್ಯಾಸಗೊಳಿಸಿದ್ದಾರೆ. ಈ ಸ್ಕರ್ಟ್ ಧರಿಸಿದರೆ ಬಾತ್ ಟವೆಲ್ ಅನ್ನು ಸೊಂಟದ ಸುತ್ತಲೂ ಸುತ್ತಿದಂತೆ ಕಾಣುತ್ತದೆ. ಇತ್ತೀಚೆಗೆ ಪ್ಯಾರಿಸ್ನಲ್ಲಿ ನಡೆದ ಸ್ಪಿಂಗ್ 2024 ಪ್ರದರ್ಶನದಲ್ಲಿ ಅನಾವರಣಗೊಂಡ ಈ ಅಸಾಮಾನ್ಯ ಉಡುಪು ಅತಿಯಾದ ಬೆಲೆಯಿಂದಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಉಡುಪು ಮೊಣಕಾಲಿನವರೆಗೆ ಬರುವ ಉದ್ದದ ವಿನ್ಯಾಸವನ್ನು ಹೊಂದಿದೆ. ಟೆರ್ರಿ-ಕಾಟನ್ ಬಟ್ಟೆಯಿಂದ ಈ ಟವೆಲ್ ಅನ್ನು ನಿರ್ಮಿಸಲಾಗಿದೆ. ಅದರ ಮುಂಭಾಗದಲ್ಲಿ ಬಲೆನ್ಸಿಯಾಗಾ ಲಾಂಛನವನ್ನು ಕಸೂತಿ ಮಾಡಲಾಗಿದೆ. ಇದು ಯುನಿಸೆಕ್ಸ್ ಆಯ್ಕೆ ಮತ್ತು ಕಸ್ಟಮೈಸ್ ಮಾಡಬಹುದಾದ ಅವಕಾಶವನ್ನು ಹೊಂದಿದೆ. ಇದು ಮೂಲತಃ ದೈನಂದಿನ ಟವೆಲ್ನಂತೆ ಕಂಡು ಬರುತ್ತಿದೆ ಮತ್ತು ಫ್ಯಾಷನ್ ಆವಿಷ್ಕಾರವಲ್ಲ ಎಂದು ಅನೇಕರು ಹೇಳಿದ್ದಾರೆ. ಟವೆಲ್ ಸ್ಕರ್ಟ್ಗೆ 920 ಡಾಲರ್ಗೆ ಎನ್ನುವುದು ಹುಚ್ಚುತನದ ಪರಮಾವಧಿ. ಯಾಕೆಂದರೆ 5 ಡಾಲರ್ನ ಟವೆಲ್ ಧರಿಸಿದರೆ ನಾನು ಇದೇ ನೋಟವನ್ನು ಸಾಧಿಸಬಹುದು ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ.