ಬೈಂದೂರಲ್ಲಿ ಜ್ಯುವೆಲ್ಲರಿ ವರ್ಕ್ಸ್ ಬೀಗ ಮುರಿದು ಕಳ್ಳತನ!
– ಬೆಳ್ಳಿ ಸಾಮಾಗ್ರಿ ಸೇರಿ ನಗದು ಕಳವು
– ಮಲಗಿದ್ದಲ್ಲೇ ಹೃದಯಾಘಾತ: 28ರ ಹರೆಯದ ಯುವಕ ಮೃತ್ಯು!
– ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ!
NAMMUR EXPRESS NEWS
ಬೈಂದೂರು: ಜ್ಯುವೆಲ್ಲರಿ ವರ್ಕ್ಸ್ ಅಂಗಡಿಯ ಬೀಗ ಮುರಿದ ಕಳ್ಳರು ನಗ ನಗದು ಕಳವು ಮಾಡಿದ ಘಟನೆ ಶಿರೂರು ಗ್ರಾಮದ ಕೆಳಪೇಟೆ ಎಂಬಲ್ಲಿ ನಡೆದಿದೆ. ಜ್ಯುವೆಲ್ಲರಿ ವರ್ಕ್ಸ್ ಅಂಗಡಿಯ ಬೀಗ ಮುರಿದ ಕಳ್ಳರು ಹಳೇ ಬೆಳ್ಳಿ ಸಾಮಗ್ರಿ ಮತ್ತು ನಗದನ್ನು ಕಳವು ಮಾಡಿ ಪರಾರಿಯಾಗಿದ್ದು, ಮಂಗಳವಾರ ಬೆಳಗ್ಗೆ ಅಂಗಡಿಯ ಮಾಲಕರು ನೋಡಿದಾಗ ಕಳ್ಳತನ ನಡೆದಿರುವುದು ಕಂಡು ಬಂದಿದೆ. ಯಾರೋ ಕಳ್ಳರು ಶಟರ್ ಬಾಗಿಲನ್ನು ಮುರಿದು ಅಂಗಡಿಯ ಒಳ ಪ್ರವೇಶಿಸಿ ಕ್ಯಾಶ್ ಕೌಂಟರ್ ನಲ್ಲಿ ಇಟ್ಟಿದ್ದ 40 ಸಾವಿರ ರೂ. ನಗದು ಹಾಗೂ ಅಂಗಡಿಯಲ್ಲಿಟ್ಟಿದ್ದ ಹಳೆಯ ಬೆಳ್ಳಿ ಜ್ಯುವೆಲ್ಲರಿ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲಗಿದ್ದಲ್ಲೇ ಹೃದಯಾಘಾತ: 28ರ ಹರೆಯದ ಯುವಕ ಮೃತ್ಯು!
ಉಳ್ಳಾಲ: ಕೊಲ್ಯದ ಕನೀರುತೋಟ ನಿವಾಸಿ 28ರ ಹರೆಯದ ವಿವಾಹಿತರೊಬ್ಬರು ಮಲಗಿದ್ದಲ್ಲೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿರುವ ದಾರುಣ ಘಟನೆ ಏ.23ರಂದು ನಡೆದಿದೆ. ಕನೀರುತೋಟ ನಿವಾಸಿ ಜಿತೇಶ್ (28) ಮೃತ ಯುವಕ. ಜಿತೇಶ್ ರಾತ್ರಿ ಊಟ ಮುಗಿಸಿ ಮಲಗಿದ್ದರು. ಬೆಳಿಗ್ಗೆ ಎಚ್ಚರವಾಗ ಹಿನ್ನಲೆ ಮನೆಯವರು ಹೋಗಿ ಎಬ್ಬಿಸಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಕೆಟಿಎಂ ಷೋರೂಮಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿತೇಶ್, ಕೊರೊನಾ ಸಂದರ್ಭ ಪಂಡಿತ್ ಹೌಸ್ ನಿವಾಸಿ ಯುವತಿಯನ್ನು ವಿವಾಹವಾಗಿದ್ದರು. ಮೃತರು ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಉಳ್ಳಾಲದಲ್ಲಿ ಇತ್ತೀಚೆಗೆ ಇದೇ ರೀತಿಯ ಘಟನೆ ನಡೆದಿತ್ತು. ನರಿಂಗಾನ ಗ್ರಾಮದ ಆಳ್ವರಬೆಟ್ಟು ನಿವಾಸಿ 24 ವರ್ಷದ ಸ್ವಾತಿ ಶೆಟ್ಟಿ ಎಂಬ ಯುವ ದಂತ ವೈದ್ಯೆ ತಲೆನೋವು ಎಂದು ಮಲಗಿದ್ದು ಮಾರನೇ ದಿನ ಗಮನಿಸಿದಾಗ ನಿದ್ರಿಸುತ್ತಿದ್ದಲ್ಲೇ ಚಿರನಿದ್ರೆಗೆ ಜಾರಿದ್ದರು. ಈ ಘಟನೆ ಮರೆಯಾಗುವ ಮುನ್ನವೇ ಯುವಕನ ಸಾವು ಜನತೆಗೆ ಆಘಾತ ತಂದಿದೆ.
ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ!
– ಕುಂದಾಪುರದಲ್ಲಿ ನಡೆದ ಘಟನೆ
ಕುಂದಾಪುರ: ಹೈದರಾಬಾದಿನಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದ ಹಟ್ಟಿಯಂಗಡಿ ಗ್ರಾಮದ ಯುವಕ ಸಾವಿಗೆ ಶರಣಾದ ಘಟನೆ ನಡೆದಿದೆ. ಮೃತರನ್ನು ಜಯಂತ್(38) ಎಂದು ಗುರುತಿಸಲಾಗಿದೆ. ಮಾನಸಿಕವಾಗಿ ನೊಂದು ಏ.23ರಂದು ರಾತ್ರಿ ವೇಳೆ ಹಟ್ಟಿಯಂಗಡಿ ಗ್ರಾಮದ ಪಾರ್ತಿಕಟ್ಟೆ ಎಂಬಲ್ಲಿರುವ ರೈಲ್ವೆ ಹಳಿಯಲ್ಲಿ ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.