-ರಾಜ್ಯದ 6 ಮಹಾನಗರ ಪಾಲಿಕೆಗಳಿಗೆ ಅನಾಥ ಸ್ಥಿತಿ
-ಶಾಸಕರು, ಸಚಿವರು ಹಾಗೂ ಅಧಿಕಾರಿಗಳದ್ದೇ ದರ್ಬಾರು
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಆರು ಮಹಾನಗರ ಪಾಲಿಕೆಗಳು ಅನಾಥ ಸ್ಥಿತಿ ಅನುಭವಿಸುತ್ತಿವೆ. ಸರಕಾರಗಳು ವಾರ್ಡ್ ಪುನರ್ ವಿಂಗಡಣೆ, ಮೀಸಲು ನಿಗದಿ ಸೇರಿ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳನ್ನೇ ನಡೆಸದೆ ಕಾಲಹರಣ ಮಾಡುತ್ತಿದ್ದು, ಚುನಾಯಿತ ಪ್ರತಿನಿಧಿಗಳಿಲ್ಲದೆ ಜನರೂ ಸಂಕಟಪಡುವಂತಾಗಿದೆ. ಕೆಲವು ಪಾಲಿಕೆಗಳಲ್ಲಿ 22 ತಿಂಗಳಿನಿಂದ ಚುನಾಯಿತ ಆಡಳಿತವಿಲ್ಲ.
ರಾಜ್ಯದ ಹತ್ತು ಪಾಲಿಕೆಗಳ ಪೈಕಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕಲಬುರಗಿ ಮಹಾನಗರ ಪಾಲಿಕೆಗಳಲ್ಲಿ ಆಡಳಿತಾಧಿಕಾರಿಗಳದೇ ದರ್ಬಾರ್ ನಡೆಯುತ್ತಿದೆ. ಅಧಿಕಾರಿಗಳ ಮೂಲಕ ಸ್ಥಳೀಯ ಶಾಸಕರು, ಸಚಿವರು ತಮ್ಮ ‘ಅಧಿಕಾರದ ದರ್ಪ’ ಮೆರೆಯುತ್ತಿದ್ದಾರೆ.
ಸಕಾಲಕ್ಕೆ ಚುನಾವಣೆ ನಡೆಸದೆ ಇರುವುದು ಸಂವಿಧಾನದ 74ನೇ ತಿದ್ದುಪಡಿಯಡಿ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಹಾಗೂ ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ವಿರುದ್ಧವಾಗಿದೆ.
ಪಾಲಿಕೆ, ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬಕ್ಕೆ ಎಲ್ಲ ಪಕ್ಷಗಳ ಪಾಲೂ ಇದೆ. ಆಡಳಿತ ನಡೆಸುವ ಪ್ರತಿಯೊಂದು ಪಕ್ಷವೂ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಚುನಾವಣೆ ಮುಂದೂಡುತ್ತಲೇ ಹೋಗುತ್ತವೆ.