-ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿರೋ ಅನೈತಿಕ ದಂಧೆ
-ಅಕ್ರಮಕ್ಕೆ ಕಡಿವಾಣ ಹಾಕುವಂತೆ ಮಲೆನಾಡಿಗರ ಆಗ್ರಹ
ತೀರ್ಥಹಳ್ಳಿ: ತಾಲ್ಲೂಕಿನ ಬೆಜ್ಜವಳ್ಳಿ, ಕನ್ನಂಗಿ, ಹಣಗೆರೆ, ಕೋಣಂದೂರು, ಕಟ್ಟೆಹಕ್ಕಲು ಭಾಗದಲ್ಲಿ ಓಸಿ ದಂಧೆ ಜೀವ ಪಡೆಯುತ್ತಿದೆ. ಪೊಲೀಸರ ನೆರಳಿನಲ್ಲಿ ದಂಧೆ ನಡೆಯುತ್ತಿದೆ ಎನ್ನಲಾಗಿದ್ದು, ದಂಧೆಗೆ ಕಡಿವಾಣ ಹಾಕದಿದ್ದರೆ ಬಡವರ ದುಡಿಮೆ ಹಣ ಜೂಜು ಅಡ್ಡೆಯ ಪಾಲಾಗುವ ಆತಂಕ ಎದುರಾಗಿದೆ.
ನಕಲಿ ನೋಟು ಚಲಾವಣೆ, ಓಸಿ ದಂಧೆ, ಅಕ್ರಮ ಮದ್ಯ ಮಾರಾಟ ಮಲೆನಾಡಿನಲ್ಲಿ ಹೆಚ್ಚಾಗುತ್ತಿದ್ದು, ಓಸಿ ಚೀಟಿ ಬರೆಯುವವರ ಜಾಲ ಹಳ್ಳಿ ಹಳ್ಳಿಗೂ ವಿಸ್ತರಿಸುತ್ತಿದೆ.
ಅಂತರ್ಜಾಲ ಸಂಪರ್ಕದಿಂದ ಓಸಿ ದಂಧೆ ತೀವ್ರಗೊಳ್ಳುತ್ತಿದೆ. ವಾಟ್ಸ್ಆಪ್, ಮೆಸೇಜ್ಗಳಲ್ಲಿ ಗುಪ್ತ ಸಂಖ್ಯೆಗಳನ್ನು ಕೋಡ್ವರ್ಡ್ ಮೂಲಕ ರವಾನೆ ಮಾಡಲಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಸಣ್ಣ ಪುಟ್ಟ ಹಳ್ಳಿಗಳಲ್ಲಿ, ಹೋಬಳಿ ಕೇಂದ್ರಗಳಲ್ಲಿ ಓಸಿ ಆಡುವವರಿಂದ ಹಣ ಸಂಗ್ರಹಿಸಲಾಗುತ್ತದೆ. ಪೊಲೀಸರಿಗೆ ಓಸಿ ಚಟುವಟಿಕೆಯ ಮಾಹಿತಿ ಇದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಅಚ್ಚರಿ ಮೂಡಿಸಿದೆ.
ಇತ್ತೀಚೆಗಷ್ಟೆ ತೀರ್ಥಹಳ್ಳಿ ಪಟ್ಟಣದಲ್ಲಿ ₹ 200ರ ನಕಲಿ ನೋಟು ಪತ್ತೆಯಾಗಿದ್ದು, ಅಸಲಿ ನೋಟಿಗೂ ನಕಲಿ ನೋಟಿಗೂ ವ್ಯತ್ಯಾಸ ತಿಳಿಯದ ಸ್ಥಿತಿ ಕಂಡುಬಂದಿದೆ. ಸಾರ್ವಜನಿಕರು ದೂರು ನೀಡಲು ಹಿಂದೇಟು ಹಾಕುವ ಸನ್ನಿವೇಶ ಉದ್ಭವಿಸಿದೆ. ಅನೇಕರು ಹಣಕಾಸು ಸಂಸ್ಥೆ ಹೆಸರಿನಲ್ಲಿ ಮನೆಬಾಗಿಲಿಗೆ ತೆರಳಿ ಸಾಲದ ಹಣದಲ್ಲಿ ನಕಲಿ ನೋಟು ನೀಡುತ್ತಿರುವ ಅನುಮಾನ ಮೂಡಿದ್ದು, ಇಂತಹ ಚಟುವಟಿಕೆ ವಿರುದ್ಧ ಬಿಗಿ ಕಾನೂನು ಕ್ರಮ ತೆಗೆದುಕೊಳ್ಳುವ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.