-ಹೂವು, ತರಕಾರಿ-ಸೊಪ್ಪುಗಳ ದರದಲ್ಲಿ ಕೊಂಚ ಇಳಿಕೆ
-ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು: ಹೂವು, ತರಕಾರಿ ಮತ್ತು ಸೊಪ್ಪುಗಳ ದರದಲ್ಲಿ ಕೊಂಚ ಇಳಿಕೆಯಾಗಿದೆ.
ತರಕಾರಿ ಸೊಪ್ಪುಗಳ ದರದಲ್ಲಿ ಕೊಂಚ ಇಳಿಕೆಯಾಗಿದ್ದು ಗ್ರಾಹಕರಲ್ಲಿ ಸಂತಸ ಮನೆಮಾಡಿದೆ. ಹೂವಿನ ಬೆಲೆಯಲ್ಲಿ ಕೂಡಾ ಭಾರೀ ಇಳಿಕೆಯಾಗಿದೆ. ಕ್ಯಾರಟ್, ಟೊಮೇಟೊ, ಗೋರಿಕಾಯಿ, ಬಜ್ಜಿ ಮೆಣಸಿನಕಾಯಿ, ಎಲೆಕೋಸು ಮತ್ತಿತರ ತರಕಾರಿಗಳ ದರದಲ್ಲಿ ಇಳಿಕೆಯಾಗಿದೆ.
ಯಾವುದೇ ಹಬ್ಬಗಳು ಇಲ್ಲದಿರುವುದರಿಂದ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ, ಹೂವಿನ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.
ಮದುವೆ, ಗೃಹಪ್ರವೇಶ ಮತ್ತಿತರ ಕಾರ್ಯಕ್ರಮಗಳಿಗೆ ಸ್ವಲ್ಪ ಮಟ್ಟಿಗೆ ಹೂವು ಬಳಕೆಯಾಗುತ್ತಿದ್ದು, ಕೊಂಚ ಬೇಡಿಕೆಯಿದೆ ಎನ್ನುತ್ತಾರೆ ಹೂವಿನ ಸಗಟು ವ್ಯಾಪಾರಿ ಕೆ.ಪಿ. ಶ್ರೀನಿವಾಸ್.
ಮತ್ತೊಂದೆಡೆ ಬೆಂಡೆಕಾಯಿ, ಬೀನ್ಸ್, ನುಗ್ಗೆಕಾಯಿ, ಮೂಲಂಗಿ, ಹೀರೇಕಾಯಿ ಮತ್ತಿತರ ಕೆಲವು ತರಕಾರಿಗಳ ದರದಲ್ಲಿ ಸ್ವಲ್ಪ ಏರಿಕೆಯಾಗಿದೆ. ಸೊಪ್ಪುಗಳ ದರವೂ ಸ್ವಲ್ಪ ಮಟ್ಟಿಗೆ ಗ್ರಾಹಕರ ಕೈಗೆಟುಕುವಂತಿವೆ. ಚಿಲ್ಲರೆ ಮಾರಾಟಗಾರರು ಗುಣಮಟ್ಟದ ಸೊಪ್ಪನ್ನು ಕಂತೆಗೆ 15-20 ರೂ.ನಂತೆ ಮಾರುತ್ತಿದ್ದಾರೆ.