ಮಲೆನಾಡಲ್ಲಿ ತೀರ್ಥಹಳ್ಳಿಯಲ್ಲೇ ಹೆಚ್ಚು ಮಳೆ!
– ತೀರ್ಥಹಳ್ಳಿಯಲ್ಲಿ ಶೇ.24 ರಷ್ಟು ಅಧಿಕ ಮಳೆ..!
– ಮರ, ಮನೆ, ಶಾಲೆಯ ಗೋಡೆ ಕುಸಿದು ಅಲ್ಲಲ್ಲಿ ಹಾನಿ
– ಜುಲೈ 23ರ ವರೆಗೆ 1795.5 ಮಿ. ಮೀ ಮಳೆ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆಯ ಬಿರುಸು ಕಳೆದ ಎರಡು ದಿನಗಳಿಂದ ಇಳಿಮುಖವಾಗಿದೆಯಾದರೂ ಬೀಸುತ್ತಿರುವ ಗಾಳಿಯಿಂದಾಗಿ ಹಲವಾರು ಮನೆಗಳ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಜುಲೈ 23ರ ವರೆಗೆ 1795.5 ಮಿ. ಮೀ ಮಳೆಯಾಗಿದ್ದು, ವಾಡಿಕೆಯ ಶೇ.24 ಅಧಿಕ ಮಳೆ ಬಿದ್ದಿದೆ. ಆಗುಂಬೆ ಹೋಬಳಿ ಹೊನ್ನೆತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಟೂರಿನ ಡಾಕಮ್ಮ ಸಿದ್ದಪ್ಪಗೌಡರ ವಾಸದ ಮನೆಯ ಮಾಡು ಕುಸಿದು ಹಾನಿ ಸಂಭವಿಸಿದೆ. ಸುದೈವಶಾತ್ ಯಾವುದೇ ಅಪಾಯವಾಗಿಲ್ಲ. ಪಟ್ಟಣ ಸಮೀಪದ ಇಂದಿರಾ ನಗರದ ಮಂಜ ನಾಯ್ಕ್ ರವರ ಮನೆ ಗೋಡೆ ಕುಸಿದಿದ್ದು ಮನೆ ಬೀಳುವ ಸ್ಥಿತಿ ತಲುಪಿದೆ. ಮಂಡಗದ್ದೆ ಹೋಬಳಿ ಸಿಂಗನ ಬಿದಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳಗ ಗ್ರಾಮದ ದಾಸ ಎಂಬುವವರ ವಾಸದ ಮನೆಯ ಒಂದು ಭಾಗ ಮಳೆಯಿಂದ ಕುಸಿದು ನೆಲಸಮವಾಗಿದೆ. ಇದೇ ಹೋಬಳಿಯ ಕಣಗಲಕೊಪ್ಪದಲ್ಲಿ ಸಾಕಮ್ಮ ಎಂಬುವವರ ವಾಸದ ಮನೆ ಮೇಲೆ ಮರ ಬಿದ್ದು ಮಾಡು ಕುಸಿದಿದೆ. ಲಿಂಗಾಪುರದ ರತ್ನಮ್ಮ ಹಾಗೂ ದೀಕ್ಷಾ ಎಂಬುವವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಯಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಡುವಳ್ಳಿ ಚಂದ್ರಶೇಖರ್ ಮತ್ತು ಇದೇ ಗ್ರಾಮದ ವಾಸಿಗಳಾದ ಸವಿತಾ ಶಿವಪ್ಪ, ಹೊಸಳ್ಳಿ ಶಿವಪ್ಪ ಹಾಗೂ ಹೊಸಳ್ಳಿ ಚಂದ್ರು, ಮಾಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಗಿ ಅಕ್ಕಣಮ್ಮ, ದೇವಂಗಿ ಸಮೀಪದ ಜ್ಯೋತಿಸರ ಗ್ರಾಮದ ಸೂರಮ್ಮ, ಸಾಲ್ಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಯಾಣಿ ಸೇರಿದಂತೆ ಇನ್ನೂ ಹಲವರ ಮನೆಗಳಿಗೆ ಹಾನಿ ಸಂಭವಿಸಿದೆ.
ಎಲ್ಲೆಲ್ಲಿ ಎಷ್ಟು ಮಳೆ?
ಆಗುಂಬೆಯಲ್ಲಿ 50, ಮಾಳೂರು 33.2, ಆರಗದಲ್ಲಿ 56, ಮೇಗರವಳ್ಳಿ 75, ಅರಳಸುರುಳಿ 21.6, ತೀರ್ಥಹಳ್ಳಿ 36.6, ಹುಂಚದಕಟ್ಟೆ 47.2, ಮಂಡಗದ್ದೆಯಲ್ಲಿ 25 ಮಿ. ಮೀ ಮಳೆಯಾಗಿದೆ.