ಮಳೆ ಅಬ್ಬರಕ್ಕೆ ನಲುಗಿದ ತೀರ್ಥಹಳ್ಳಿ!
– ಅಲ್ಮನೆ, ಶಿರುಪತಿ ಸೇರಿ ಹಲವೆಡೆ ಮರ ಬಿದ್ದು, ಸಂಚಾರ ಅಸ್ತವ್ಯಸ್ತ
– ಭಾರೀ ಮಳೆಗೆ ಎಲ್ಲೆಡೆ ಅನಾಹುತ: ವಿದ್ಯುತ್, ನೆಟ್ವರ್ಕ್ ಇಲ್ಲ
– ಶಾಲಾ, ಕಾಲೇಜುಗಳಿಗೆ ವಾರದಿಂದ ರಜೆ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನಲ್ಲಿ ಮಳೆ ಹೆಚ್ಚಾಗಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಕತ್ತಲಲ್ಲಿರುವ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಮೇಲೆ ಅಲ್ಲಲ್ಲಿ ಮರಗಳು ವಿದ್ಯುತ್ ಕಂಬಗಳು ಬೀಳುತ್ತಿದ್ದು ಇದರಿಂದ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದಲ್ಲದೆ ಸಂಚಾರಕ್ಕೂ ಕೂಡ ಅಡ್ಡಿಯಾಗಿದೆ.
ತೀರ್ಥಹಳ್ಳಿ ಸೇರಿ ಮಲೆನಾಡು ಭಾಗದಲ್ಲಿ ಕಳೆದ 15 ದಿನಗಳಿಂದಲೂ ಕೂಡ ಧಾರಾಕಾರ ಮಳೆ ಹಾಗೂ ಭಾರಿ ಗಾಳಿ ಬೀಸುತ್ತಿದೆ. 3-4 ದಿನಗಳಿಂದ ಮಲೆನಾಡು ಭಾಗದಲ್ಲಿ ಒಂದಷ್ಟು ಬಿಡುವು ನೀಡಿದ್ದ ವರುಣದೇವ ಕಳೆದ ರಾತ್ರಿಯಿಂದ ಮತ್ತೆ ಅಬ್ಬರಿಸಿದ್ದಾನೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡು ಭಾಗದಲ್ಲಿ ಭಾರೀ ಗಾಳಿಗೆ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ. ಹಾಗಾಗಿ, ಮಲೆನಾಡ ಕೆಲ ಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ. ತುಂಗಾ ನದಿ ಸೇರಿ ಎಲ್ಲಾ ನದಿ, ಹಳ್ಳಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.
ಅಲ್ಮನೆ ಬಳಿ ಮರ ಬಿದ್ದು, ಸಂಚಾರ ಅಸ್ತವ್ಯಸ್ತ!
ತೀರ್ಥಹಳ್ಳಿ ತಾಲೂಕಿನ ಅಲ್ಮನೆಯಲ್ಲಿ ಮರ ಒಂದು ಬಿದ್ದಿದ್ದು, ಬೆಳಗ್ಗೆ ಶಾಲಾ ಕಾಲೇಜಿಗೆ ಹಾಗೂ ಕಚೇರಿ ಕೆಲಸಕ್ಕೆ ಹೊರಟಿದ್ದ ಪ್ರಯಾಣಿಕರಿಗೆ, ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಬೆಳಗ್ಗೆಯೇ ಮರ ಬಿದ್ದಿದ್ದು ಮರವನ್ನು ತೆಗೆಸಿ ನಂತರ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ತಮ್ಮ ಕೆಲಸಕ್ಕೆ ತಲುಪಲು ಆಗದೆ ತೊಂದರೆಯಾಗಿದೆ.
ಶಿರುಪತಿಯಲ್ಲಿ ಮರ ಬಿದ್ದರೂ ಕ್ಯಾರೆ ಎನ್ನದ ಗ್ರಾ.ಪಂ ಆಡಳಿತ!
ಇನ್ನು ಶಿರುಪತಿಯಲ್ಲಿ ಶಿರುಪತಿಯಿಂದ ಖುಷ್ಕಿ ರೋಡಿನಲ್ಲಿ ಮರ ಬಿದ್ದಿದ್ದು ಕೆಇಬಿ ಅವರಿಗೆ ಕರೆ ಮಾಡಿದರು ಕೂಡ ಯಾವುದೇ ಉತ್ತರ ಸಿಗುತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದ್ದು ನೆರಟೂರು ಗ್ರಾಮ ಪಂಚಾಯತ್ ಅವರಿಗೂ ಕೂಡ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ.
ದಿನೇ ದಿನೇ ಮಳೆ ಹೆಚ್ಚಳ: ಜನ್ರಲ್ಲಿ ಆತಂಕ
ತೀರ್ಥಹಳ್ಳಿ ತಾಲೂಕು ಸೇರಿ ಮಲೆನಾಡಲ್ಲಿ ದಿನದಿಂದ ದಿನಕ್ಕೆ ಮಳೆ ಹೆಚ್ಚಾಗುತ್ತಿದೆ. ಇದರಿಂದ ಜನ ಮನೆ ಬಿಟ್ಟು ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕೃಷಿಕರಲ್ಲಿ ಆತಂಕ ಶುರುವಾಗಿದೆ.