ಸೌಮ್ಯ ರೆಡ್ಡಿಗೆ ಕಾಂಗ್ರೆಸ್ ಮಹಿಳಾ ಅಧ್ಯಕ್ಷರ ಹುದ್ದೆ
– ಕೇವಲ 16 ಮತಗಳ ಅಂತರದಿಂದ ಸೋತಿದ್ದ ರೆಡ್ಡಿ
ಬಿಜೆಪಿ ಒಳಗೆ ಮುಸುಕಿನ ಗುದ್ದಾಟ!
– ಹೈಕಮಾಂಡ್ ಮೌನ: ಗುಪ್ತ ಗುಪ್ತ ಸಭೆ
ಜೆಡಿಎಸ್ ಬಲವರ್ಧನೆಗೆ ಕುಮಾರಣ್ಣ ಪ್ಲಾನ್
– ಜಿಲ್ಲಾವಾರು ಪಕ್ಷ ಸಂಘಟನೆಗೆ ಯೋಜನೆ
NAMMUR EXPRESS NEWS
ಬೆಂಗಳೂರು: ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ನೇಮಕವಾಗಿದ್ದಾರೆ. ಕರ್ನಾಟಕ ಸೇರಿ ಮೂರು ರಾಜ್ಯಗಳ ಮಹಿಳಾ ಕಾಂಗ್ರೆಸ್ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಮಹಿಳಾ ಕಾಂಗ್ರೆಸ್ಗೆ ಸೌಮ್ಯಾ ರೆಡ್ಡಿ, ಚಂಡೀಗಢಕ್ಕೆ ನಂದಿತಾ ಹೂಡ, ಅರುಣಾಚಲ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಚುಕು ನಾಚಿ ನೇಮಕವಾಗಿದ್ದಾರೆ.
ಸೌಮ್ಯಾ ರೆಡ್ಡಿ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. 2023ರ ಚುನಾವಣೆಯಲ್ಲಿ ಕೇವಲ 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಎದುರು ಸೋತಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕೈ ಅಭ್ಯರ್ಥಿ ಸೌಮ್ಯಾ ರೆಡ್ಡಿ ಸೋಲು ಕಂಡಿದ್ದರು.
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಎರಡು ತಂಡವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದ ತಂಡ ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿ ವರಿಷ್ಠರ ಅನುಮತಿ ಪಡೆಯಲು ಯೋಚಿಸಿದ್ದಾರೆ. ಮೈಸೂರು ಚಲೋ ಪಾದಯಾತ್ರೆಯಿಂದ ಅಂತರ ಕಾಯ್ದುಕೊಂಡವರು (ಪ್ರತಾಪಸಿಂಹ ಹೊರತುಪಡಿಸಿ) ಈ ನಿರ್ಧಾರ ತೆಗೆದು ಕೊಂಡ ತಂಡದಲ್ಲಿದ್ದು, ರಾಜ್ಯ ನಾಯಕತ್ವಕ್ಕೆ ಅದರಲ್ಲೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಸೆಡ್ಡು ಹೊಡೆಯುವ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪಕ್ಷ ಜೆಡಿಎಸ್ ಜತೆ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರಿನವರೆಗೆ ಯಶಸ್ವಿಯಾಗಿ ಪಾದಯಾತ್ರೆ ನಡೆಸಿದ್ದ ರಾಜ್ಯ ಬಿಜೆಪಿಯಲ್ಲೀಗ ಭಿನ್ನಮತದ ತಣ್ಣಗಿನ ಉರಿ ಹೊತ್ತಿ ಹೊಗೆಯಾಡಲಾರಂಭಿಸಿದೆ. ಇದೇ ಉರಿಯಲ್ಲಿ ಕೆಲವರು ವರಿಷ್ಠರ ಒಂದು ಗುಂಪಿನ ಬೆಂಬಲದಿಂದ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದರೂ ಹೈಕಮಾಂಡ್ ಇನ್ನು ಮೌನದಲ್ಲಿದೆ.
ಜೆಡಿಎಸ್ ಬಲವರ್ಧನೆಗೆ ಕುಮಾರಣ್ಣ ಪ್ಲಾನ್
ಜೆಡಿಎಸ್ ಪಕ್ಷದ ಜಿಲ್ಲಾವಾರು ಪಕ್ಷ ಸಂಘಟನೆಗೆ ಯೋಜನೆ ರೂಪಿಸುತ್ತಿದೆ. ಕೇಂದ್ರ ಸಚಿವ ಹಾಗೂ ಜೆಡಿಎಸ್ ವರಿಷ್ಟ ಕುಮಾರಸ್ವಾಮಿ ಈಗಾಗಲೇ ನಾಯಕರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಗುರಿಯಾಗಿರಿಸಿ ಹಾಗೂ ಪ್ರಜ್ವಲ್ ಕೇಸ್ ಕಾರಣ ಕಳೆಗುಂದಿದ ಜೆಡಿಎಸ್ ಇಮೇಜ್ ಬದಲಾವಣೆ ಮಾಡಲು ಈಗ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.