ತೀರ್ಥಹಳ್ಳಿಯಲ್ಲಿ ವರ ಮಹಾಲಕ್ಷ್ಮಿ ಹಬ್ಬದ ರಂಗು!
– ದೇಗುಲಗಳಲ್ಲಿ ಜನವೋ ಜನ: ಮಹಿಳೆಯರ ವಿಶೇಷ ಪೂಜೆ
– ಮಾರಿಕಾಂಬೆ, ಇಂದಾವರ ಮಹಾಲಕ್ಷ್ಮಿ ದೇಗುಲಕ್ಕೆ ಸಾವಿರಾರು ಜನ
– ಮನೆ ಮನೆಯಲ್ಲೂ ಪೂಜೆ: ಕಚೇರಿಗಳಲ್ಲಿ ಆಚರಣೆ
NAMMUR EXPRESS NEWS
ತೀರ್ಥಹಳ್ಳಿ: ವರ ಮಹಾಲಕ್ಷ್ಮಿ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದು, ತೀರ್ಥಹಳ್ಳಿ ತಾಲ್ಲೂಕಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಯಿತು.
ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವರ ಸನ್ನಿದಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಾಡಿನ ಸಮಸ್ತ ಭಕ್ತ ಜನರ ಶ್ರೇಯೋಭಿವೃದ್ಧಿಗಾಗಿ ಶ್ರೀಯುತ ಜಕ್ಕಣ್ಣಗೌಡರ್ ತಹಶೀಲ್ದಾರ್ ತೀರ್ಥಹಳ್ಳಿ, ಹಾಗು ನಿತ್ಯ ಅನ್ನಸಂತರ್ಪಣಾ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರ ಸಮ್ಮುಖದಲ್ಲಿ ಅಮ್ಮನವರಿಗೆ ಉಡಿ ತುಂಬಿ, ಮುತ್ತೈದೆಯರಿಗೆ ಬಾಗಿನ ಸಮರ್ಪಿಸಲಾಯಿತು. ಇಂದಿನ ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಸುಮಾರು 700 ಕ್ಕೂ ಹೆಚ್ಚು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿ, ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಇಂದಾವರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಾವಿರಾರು ಜನ
ತೀರ್ಥಹಳ್ಳಿ: ತಾಲೂಕಿನ ಇಂದಾವರದಲ್ಲಿ ನೆಲೆಸಿರುವ ಶ್ರೀ ಮಹಾ ಲಕ್ಷ್ಮೀ ದೇವಸ್ಥಾನದಲ್ಲಿ ವರಮಹಾ ಲಕ್ಷ್ಮೀ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ವರ ಮಹಾಲಕ್ಷ್ಮೀ ವ್ರತಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ನಿರಂತರ ಪೂಜೆ ಹಾಗೂ ವಿಶೇಷವಾಗಿ ದೇವಿಗೆ ಅಭಿಷೇಕ, ದೇವಿಯ ಸ್ತುತಿ ಅರ್ಚನೆ ಹಾಗೂ ಬೆಳಿಗ್ಗೆ 10 ಗಂಟೆಗೆ “ಶ್ರೀ ಸೂಕ್ತ ಹೋಮ ಮತ್ತು ಬಾಗಿನ ಪೂಜೆ” ಹಾಗೂ ಮಧ್ಯಾಹ್ನ ಮಹಾ ಪೂಜೆಯ ನಂತರ ಅನ್ನಸಂತರ್ಪಣೆ ಸಂಜೆ 5 ಗಂಟೆಯಿಂದ ಲಕ್ಷ್ಮೀ ಹೃದಯ ಪಾರಾಯಣ ನಡೆಯಿತು. ಸಾವಿರಾರು ಭಕ್ತರು ದೇವಿಯ ಕೃಪೆಗೆ ಭಾಗಿಯಾಗಿ ಅನ್ನ ಪ್ರಸಾದ ಸ್ವೀಕರಿಸಿದರು.
ಮಾರಿಕಾಂಬೆ ದೇಗುಲಕ್ಕೆ ಜನವೋ ಜನ!
ತೀರ್ಥಹಳ್ಳಿ ಹೃದಯ ಭಾಗದಲ್ಲಿರುವ ಮಾರಿಕಾಂಬೆ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಸಾವಿರಾರು ಜನ ಭಕ್ತರು ಕ್ಯೂ ನಿಂತು ದೇವಿಯ ದರ್ಶನ ಪಡೆದರು. ಮಹಿಳೆಯರು ಹೆಚ್ಚಾಗಿ ಭಾಗವಹಿಸಿದ್ದರು.
ತೀರ್ಥಹಳ್ಳಿ ವೆಂಕಟರಮಣ ದೇವಾಲಯ ಸೇರಿದಂತೆ ತಾಲೂಕಿನ ಹಲವೆಡೆ ಪೂಜೆ ನಡೆಯಿತು.
ಮನೆ ಮನೆಯಲ್ಲೂ ಪೂಜೆ: ಕಚೇರಿಗಳಲ್ಲಿ ಆಚರಣೆ
ಮನೆ ಮನೆ, ಕಚೇರಿಗಳಲ್ಲೂ ವರ ಮಹಾಲಕ್ಷ್ಮಿ ಪೂಜೆ ನಡೆಯಿತು. ಮಹಿಳೆಯರು ಮನೆ ಮಂದಿಯೆಲ್ಲಾ ಸೇರಿ ಆಚರಣೆ ಮಾಡಿದರು. ಬಟ್ಟೆ, ಬಂಗಾರದ ಅಂಗಡಿಗಳು ಜನರಿಂದ ತುಂಬಿದ್ದವು.