ಸಿದ್ದರಾಮಯ್ಯ ಒಂದು ವಾರ ನಿರಾಳ!?
– ಮುಂದಿನ ಹಂತದ ವಿಚಾರಣೆಯನ್ನು 29ಕ್ಕೆ ಮುಂದೂಡಿ ಆದೇಶ
– ಸಲ್ಲಿಕೆಯಾಗುತ್ತಿರುವ ದೂರು ಅರ್ಜಿಗಳಿಗೂ ಹೈಕೋರ್ಟ್ ತಡೆ?
NAMMUR EXPRESS NEWS
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟಿಗೆ 712 ಪುಟಗಳ ರಿಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಮುಂದಿನ ಹಂತದ ವಿಚಾರಣೆಯನ್ನು 29ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.
‘ಈಗಾಗಲೇ ರಾಜಪಾಲರ ಶೋಕಾಸ್ ನೋಟಿಸ್ ಗೆ ಸರ್ಕಾರದಿಂದ ಉತ್ತರ ನೀಡಲಾಗಿತ್ತು. ಅಷ್ಟಾದರೂ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದು ದುರುದ್ದೇಶಪೂರಿತ. ಶೋಕಾಸ್ ನೋಟಿಸ್ ಗೆ ಕ್ಯಾಬಿನೆಟ್ ಸಲಹೆ ಕೂಡ ಕೊಟ್ಟಿದೆ. 100 ಪುಟಗಳಲ್ಲಿ ಕೊಟ್ಟ ಕ್ಯಾಬಿನೆಟ್ ಸಲಹೆ ಪರಿಗಣಿಸದೆ, ಸಲಹೆಗೆ ಕೇವಲ ಎರಡು ಪುಟಗಳ ಉತ್ತರ ಕೊಟ್ಟಿದ್ದೇ ರಾಜ್ಯಪಾಲರ ದುರುದ್ದೇಶ ಹೊಂದಿರುವ ಬಗ್ಗೆ ಸ್ಪಷ್ಟವಾಗಿದೆ’ ಎಂದು ಮುಖ್ಯಮಂತ್ರಿ ಪರ ವಾದ ಮಂಡಿಸಿದ ಅಭಿಷೇಕ್ ಮುಸಿಂಗ್ವಿ ವಾದಿಸಿದರು.
ಸರ್ಕಾರವನ್ನು ಅಸ್ಥಿರಗೊಳಿಸಲು ಇಂತಹ ಕ್ರಮವಾಗುತ್ತಿದೆ. ರಾಜೀನಾಮೆ ಪಡೆಯಲು ಈಗ ರಾಷ್ಟ್ರಪತಿ ಆಳ್ವಿಕೆ ಅಗತ್ಯವಿಲ್ಲ. ಕೇವಲ ಇಂತಹ ದೂರುಗಳ ಮೂಲಕ ಉದ್ದೇಶ ಈಡೇರುತ್ತಿದೆ. ಸರ್ಕಾರಿ ಸೇವಕನಾಗಿ ಸಿಎಂ ಯಾವುದೇ ಶಿಫಾರಸ್ಸು ಮಾಡಿಲ್ಲ. ಮುಡಾ ಫೈಲ್ ಸಂಬಂಧ ಯಾವುದೇ ನಿರ್ಧಾರ ಸಿಎಂ ಮಾಡಿಲ್ಲ ಎಂದು ಅಭಿಷೇಕ್ ಮನುಸಿಂಗ್ವಿ ವಾದಿಸಿದರು.
ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಆರಂಭಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಪರವಾಗಿ ಅಭಿಷೇಕ್ ಮನುಸಿಂಗ್ವಿ ವಾದ ಮಂಡಿಸುತ್ತಿದ್ದು, ಇನ್ನೂ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಕೀಲ ತುಷಾರ ಮೆಹ್ರಾ ವಾದ ಮಂಡಿಸಿದರು.
ಹೈಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಮುಂದಿನ ಹಂತದ ವಿಚಾರಣೆಯನ್ನು 29ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ವಿಚಾರಣೆ ಆಗುವುದರೊಳಗೆ ಯಾವುದೇ ವಿಚಾರಣಾ ನ್ಯಾಯಾಲಯಗಳು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಚಾರಣೆ ನಡೆಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಆ ಮೂಲಕ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಿಂದ ಮೇಲೆ ಸಲ್ಲಿಕೆಯಾಗುತ್ತಿರುವ ದೂರು ಅರ್ಜಿಗಳಿಗೂ ಹೈಕೋರ್ಟ್ ತಡೆ ನೀಡಿದೆ.