ಕಾಡಾನೆಗಳ ಚಲನ-ವಲನ ವೀಕ್ಷಣೆಗೆ ಹೊಸ ಟೆಕ್ನಾಲಜಿ!
– ಹಾಸನದಲ್ಲೇ ಮೊದಲ ಬಾರಿಗೆ ವಿಭಿನ್ನ ವೆಬ್ಸೈಟ್ ಆರಂಭ
– ಆನೆ ಎಲ್ಲಿದೆ ಡಾಟ್ ಕಾಂ ಎಂಬ ವಿಭಿನ್ನ ವೆಬ್ಸೈಟ್!
NAMMUR EXPRESS NEWS
ಹಾಸನ: ಹಾಸನದಲ್ಲಿ ಕಾಡು ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ಕಳೆದ ಎರಡು ದಶಕಗಳಿಂದ ಹಾಸನ ಜಿಲ್ಲೆಯ ಕಾಡಂಚಿನ ಜನರ ನಿದ್ದೆಗೆಡಿಸಿರುವ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಮಾಡದ ಪ್ರಯತ್ನಗಳಿಲ್ಲ. ಆದರೆ ಏನೇ ಮಾಡಿದ್ರು ಸಮಸ್ಯೆ ಮಾತ್ರ ಬಗೆ ಹರಿಯುತ್ತಿಲ್ಲ. ಹೀಗಾಗಿ ಕಾಡಾನೆ ದಾಳಿ ತಡೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ಹಾಸನದಲ್ಲಿ ಹೊಸ ಯೋಜನೆ ರೂಪಿಸಲಾಗಿದೆ. ಕಾಡಾನೆಗಳ ಚಲನ-ವಲನ ವೀಕ್ಷಿಸಿ ಮಾಹಿತಿ ನೀಡಲು ಆನೆ ಎಲ್ಲಿದೆ ಡಾಟ್ ಕಾಂ ಹೆಸರಿನಲ್ಲಿ ಹೊಸ ವೆಬ್ ತಯಾರಿಸಲಾಗಿದೆ.
ಎಲ್ಲೆಂದರಲ್ಲಿ ದಾಳಿ ಮಾಡುವ ಆನೆಗಳು ಗದ್ದೆಗಳಿಗೆ ನುಗ್ಗಿ ಬೆಳೆ ಹಾಳುಮಾಡುತ್ತಿವೆ. ಇದಕ್ಕೆ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುತ್ತಿಲ್ಲ. ಹೀಗಾಗಿ ಕಾಡಾನೆಗಳ ಚಲನ-ವಲನ ವೀಕ್ಷಣೆಗೆ ಹೊಸ ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ರೇಡಿಯೋ ಕಾರ್, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಸಿಗುವ ಮಾಹಿತಿ ಆಧರಿಸಿ ಅಂತರ್ಜಾಲದಲ್ಲಿ ಸಿಗಲಿದೆ ಕಾಡಾನೆಯ ಮಾಹಿತಿ.
ರಾಜ್ಯದಲ್ಲಿ ಮೊದಲ ಪೈಲಟ್ ಪ್ರಾಜೆಕ್ಟ್ ಗೆ ಹಾಸನದಲ್ಲಿ ಚಾಲನೆ ಸಿಕ್ಕಿದೆ.
ಫಾರೆಸ್ಟ್ ಕಂಟ್ರೋಲ್ ರೂಂ ಮೂಲಕ ಕಾಡಾನೆ, ಹುಲಿ, ಚಿರತೆ, ಕರಡಿ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ತಡೆಗೆ ವಿಶಿಷ್ಟ ಯೋಜನೆ ರೂಪಿಸಲಾಗಿದೆ. ಹಾಸನ ಜಿಲ್ಲೆಯ ಜನರನ್ನು ಅಕ್ಷರಶಃ ಕಂಗೆಡಿಸಿರುವ ಕಾಡಾನೆ ಮಾನವ ಸಂಘರ್ಷ ಇಂದು ನೆನ್ನೆಯದಲ್ಲ ಬರೋಬ್ಬರಿ ಎರಡು ದಶಕಗಳಿಂದ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ಸೇರಿ ಅರಕಲಗೂಡು ಹಾಗು ಕೆಲವೆಡೆ ಆತಂಕ ಸೃಷ್ಟಿಸಿರುವ ಆನೆ ಹಾವಳಿ ತಡೆಗೆ ಆನೆ ಕಂದಕ, ಸೋಲಾರ್ ಬೇಲಿ, ರೈಲ್ವೆ ಬ್ಯಾರಿಕೇಡ್ ಸೇರಿ ಹಲವಾರು ಕ್ರಮ ಕೈಗೊಂಡರು ಆನೆಗಳು ಮಾತ್ರ ನಾಡಿನಿಂದ ಕಾಡಿಗೆ ಮರಳುತ್ತಿಲ್ಲ. ದೊಡ್ಡ ದೊಡ್ಡ ಗುಂಪುಗಳಾಗಿ ಓಡಾಡುತ್ತಾ ಜನರ ಜೀವ ಹಾನಿ ಜೊತೆಗೆ ಅಪಾರ ಬೆಳೆ ಹಾನಿಯನ್ನು ಮಾಡುತ್ತಿವೆ.
ಆನೆ ಎಲ್ಲಿದೆ ಡಾಟ್ ಕಾಂ ಎಂಬ ವಿಭಿನ್ನ ವೆಬ್ ಸೈಟ್
ಬೆಳೆ ಹಾನಿಗೆ ಪರಿಹಾರ ಕೊಡಬಹುದು, ಆದ್ರೆ ಜೀವನ ಹಾನಿಯಾದ್ರೆ ಆಗೋ ನಷ್ಟ ಭರಿಸೋಕೆ ಸಾದ್ಯವಿಲ್ಲ. ಹಾಗಾಗಿಯೇ ಈಗ ಮತ್ತೊಂದು ಹೊಸ ಯೋಜನೆ ಸಿದ್ದಗೊಂಡಿದೆ. ಕಾಡಾನೆಗಳಿಂದ ಮನುಷ್ಯರ ಮೇಲೆ ಆಗೋ ಹಾನಿ ತಡೆಯಲು ಆನೆ ಎಲ್ಲಿದೆ ಡಾಟ್ ಕಾಂ ಎಂಬ ವಿಭಿನ್ನ ವೆಬ್ ಸೈಟ್ ಆರಂಭಿಸಲಾಗಿದ್ದು ಕಾಡಾನೆಗಳು ಎಲ್ಲಿವೆ? ಗುಂಪಿನಲ್ಲಿ ಇವೆಯಾ ಅಥವಾ ಒಂಟಿಯಾಗಿ ಇವೆಯಾ? ಅವು ನಿಂತಿವೆಯಾ ಅಥವಾ ಚಲಿಸುತ್ತಿವೆಯಾ? ಗ್ರಾಮಗಳ ಸಮೀಪ ಇವೆಯೇ ಅಥವಾ ದೂರ ಇವೆಯಾ? ಹೀಗೆ ಎಲ್ಲಾ ಮಾಹಿತಿಯನ್ನ ಗೂಗಲ್ ಮ್ಯಾಪ್ ಮತ್ತು ಸ್ಯಾಟಲೈಟ್ ಮ್ಯಾಪ್ ಜೊತೆಗೆ ಮಾಹಿತಿ ಸಿಗಲಿದ್ದು ಇದನ್ನ ಗಮನಿಸುವ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಅನಾಹುತ ತಪ್ಪಿಸಲಿದ್ದಾರೆ. ಈ ಬಗ್ಗೆ ಪಿಪಿಟಿ ಮೂಲಕ ವಿವರಣೆ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಹೊಸ ಯೋಜನೆ ಉಪುಕ್ವಾಗವ ಭರವಸೆ ನೀಡಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಎಲಿಫೆಂಟ್ ಟಾಸ್ಕ್ ಫೋರ್ಟ್, ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಎಲ್ಲವೂ ಕೂಡ ಕಾಡಾನೆಗಳ ಚಲನ ವಲನ ವಿಕ್ಷಣೆ ಮಾಡುತ್ತಿದ್ದರು. ಅದು ಕೇಂದ್ರೀಕೃತ ವ್ಯವಸ್ಥೆ ಇಲ್ಲದೆ ಸಮಸ್ಯೆ ಆಗಿತ್ತು. ಇದೀಗ ಹಾಸನದ ಅರಣ್ಯ ಭವನದಲ್ಲಿ ಫಾರೆಸ್ಟ್ ಕಂಟ್ರೋಲ್ ರೂಂ ತೆರೆದು ಪೊಲೀಸ್ ಇಲಾಖೆಯ ಮಾದರಿಯಲ್ಲಿ ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಾಡಾನೆಗಳ ಬೆನ್ನಟ್ಟಲೆಂದೇ ಜಿಪಿಎಸ್ ಅಳವಡಿಕೆ ಮಾಡಿರೊ ಆರು ವಾಹನಗಳಿವೆ, ಆ ವಾಹನಗಳ ಚಲನ-ವಲನ ಕೂಡ ಈ ವೆಬ್ಸೈಟ್ ನಲ್ಲಿ ಸಿಗಲಿದೆ. ಹಾಗಾಗಿಯೇ ಆನೆ ಎಲ್ಲಿವೆ, ಆನೆಯನ್ನ ಹಿಂಬಾಲಿಸೊ ಟೀಂ ಎಲ್ಲಿದೆ ಎಲ್ಲವನ್ನು ಗಮನಿಸುವ ಅಧಿಕಾರಿಗಳು ತಕ್ಷಣ ಸ್ಪಂದಿಸಲಿದ್ದಾರೆ. ಇನ್ನು ಈ ವೆಬ್ಸೈಟ್ನಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆ ದಾಖಲಿಸಲು ಕೂಡ ಅವಕಾಶ ಇದ್ದು ಅದನ್ನ ಗಮನಿಸಿ ಅರಣ್ಯ ಇಲಾಖೆ ಸ್ಪಂದನೆ ನೀಡಲಿದೆ.
ಹಾಸನದಲ್ಲಿ ಈ ವಿಶೀಷ್ಟ ಯೋಜನೆಯನ್ನ ಪ್ರಾಯೋಗಿಕವಾಗಿ ಅರಂಭ ಮಾಡಲಾಗಿದ್ದು ಇದು ಯಶಸ್ವಿಯಾದರೆ ರಾಜ್ಯದ ಇತರೆ ಕಾಡಾನೆ ಹಾಗು ಕಾಡು ಪ್ರಾಣಿಗಳ ಹಾವಳಿ ಇರುವ ಪ್ರದೇಶಕ್ಕೂ ವಿಸ್ತರಣೆ ಮಾಡುವ ಚಿಂತನೆ ನಡೆದಿದೆ.
ಒಟ್ಟಿನಲ್ಲಿ ಪೊಲೀಸ್ ಇಲಾಖೆ ಮಾದರಿಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಮಾಡುವ ವಿಶಿಷ್ಟ ಕಂಟ್ರೋಲ್ ರೂಂ ಕಾರ್ಯಾರಂಭ ಮಾಡಿದ್ದು ಪೊಲೀಸ್ ಇಲಾಖೆಯಿಂದಲೇ ತರಬೇತುಗೊಂಡ ಸಿಬ್ಬಂದಿ ಕಾಡು ಪ್ರಾಣಿಗಳ ಹಾವಳಿಯಿಂದ ಜನರಿಗೆ ಆಗುವ ತೊಂದರೆ ತಡೆಗಟ್ಟಲು ಸಜ್ಜಾಗಿದ್ದಾರೆ. ಈ ಯೋಜನೆಯಾದ್ರು ಯಶಸ್ವಿಯಾಗಿ ಜನರ ಜೀವ ಹಾನಿಗೆ ಬ್ರೇಕ್ ಬೀಳುತ್ತಾ ಎನ್ನೋದಕ್ಕೆ ಕಾಲವೇ ಉತ್ತರ ಹೇಳಬೇಕಿದೆ.