- ಮಧು, ಮಂಜುನಾಥ ಗೌಡ ಜಂಪ್
- ಕಾಂಗ್ರೆಸ್ ಬಲ: ಶ್ರೀಕಾಂತ್ ಯಾವ ಕಡೆ?
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ 3 ಮಂದಿ ಶಾಸಕರನ್ನು ಹೊಂದಿದ್ದ ಜೆಡಿಎಸ್ ಪಕ್ಷ ಇದೀಗ ಅನಾಥವಾಗುವ ಎಲ್ಲಾ ಸೂಚನೆಗಳಿವೆ.
ಈಗಾಗಲೇ ಶಿವಮೊಗ್ಗ ಜೆಡಿಎಸ್ ಪ್ರಮುಖ ನಾಯಕರು, ರಾಜ್ಯ ಜೆಡಿಎಸ್ ಕಾರ್ಯದರ್ಶಿಯಾಗಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಲು ದಿನಗಣನೆ ಆರಂಭವಾಗಿದೆ. ಇತ್ತ ಡಿಸಿಸಿ ಬ್ಯಾಂಕ್ ಹಗರಣದಲ್ಲಿ ಸಿಲುಕಿ ಗೊಂದಲದಲ್ಲಿರುವ ಹಾಲಿ ಜೆಡಿಎಸ್ ಜಿಲ್ಲಾಧ್ಯಕ್ಷ,ಸಹಕಾರಿ ನಾಯಕ ಡಾ.ಮಂಜುನಾಥ ಗೌಡ ಕೂಡ ಬಾಗಿಲು ತಟ್ಟಿದ್ದು ಬಹುತೇಕ ಮಧು ಬಂಗಾರಪ್ಪ ಅವರ ಜೊತೆಯೇ ಕಾಂಗ್ರೆಸ್ ಸೇರಲು ಸಿದ್ದರಾಗಿದ್ದಾರೆ. ಹೀಗಾಗಿ ನಾಯಕನಿಲ್ಲದ ಹಡಗು ಜೆಡಿಎಸ್ ಆಗುವ ಸಾಧ್ಯತೆ ಇದೆ. ಒಂದು ಕಾಲದಲ್ಲಿ ಸೊರಬ, ಭದ್ರಾವತಿ, ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್ ಶಾಸಕರಿದ್ದರು. ಎಲ್ಲಾ ಕ್ಷೇತ್ರದಲ್ಲಿ ಪಕ್ಷ ಪ್ರಬಲವಾಗಿತ್ತು. ಆದರೆ ಪಕ್ಷದ ನಾಯಕರ ಬೇಜವಾಬ್ದಾರಿ, ಪಕ್ಷ ಸಂಘಟನೆ ಇಲ್ಲದಿರುವುದು ಇಂದು ಪಕ್ಷಕ್ಕೆ ಒಬ್ಬ ಸಾರಥಿ ಇಲ್ಲದ ಸ್ಥಿತಿ ನಿರ್ಮಾಣ ಮಾಡಿದೆ. ಇಡೀ ಮಲೆನಾಡಿನಲ್ಲಿ ಓರ್ವ ಶಾಸಕ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಶಿವಮೊಗ್ಗ ಜಾತ್ಯತೀತ ಶಕ್ತಿಗಳ ತವರು. ಆದ್ರೆ ಇಲ್ಲಿಯೇ ಜೆಡಿಎಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ.