ಕೊಪ್ಪ ಬ್ರೇಕಿಂಗ್ ನ್ಯೂಸ್
ಕೊಪ್ಪ ಮಹಿಳಾ ಪೇದೆ ಆತ್ಮಹತ್ಯೆಗೆ ಯತ್ನಕ್ಕೆ ಟ್ವಿಸ್ಟ್!
– ಪಿಎಸ್ಐಯಿಂದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ
– ಉನ್ನತ ಅಧಿಕಾರಿಗಳಿಂದ ತನಿಖೆ: ಏನಿದು ಕೇಸ್?
NAMMUR EXPRESS NEWS
ಕೊಪ್ಪ: ಕೊಪ್ಪ ಠಾಣೆಯ ಪಿಎಸ್ಐ ಒಬ್ಬರು ತಮ್ಮದೇ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಮತ್ತಷ್ಟು ಮಹಿಳಾ ಪೊಲೀಸರು ಇದೀಗ ತಮಗಾದ ಕಿರುಕುಳದ ಬಗ್ಗೆ ಮೇಲಾಧಿಕಾರಿಗಳ ಭೇಟಿಗೆ ಮುಂದಾಗಿದ್ದು, ಮತ್ತೆ ಮೂವರು ಮಹಿಳಾ ಪೊಲೀಸ್ ಸಿಬ್ಬಂದಿಗಳು ಕೊಪ್ಪ ಡಿವೈಎಸ್ಪಿಯವರ ಬಳಿ ತೆರಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಕೊಪ್ಪ ಡಿವೈಎಸ್ಪಿ ಕಚೇರಿಯಲ್ಲಿ ಸದ್ಯ ಮಹಿಳಾ ಪೇದೆಗಳಿಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಮೂವರು ಮಹಿಳಾ ಸಿಬ್ಬಂದಿಗಳಿಂದ ಡಿವೈಎಸ್ಪಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೊಪ್ಪ ಡಿವೈಎಸ್ಪಿ ಹಾಗೂ ಮಹಿಳಾ ಕೌನ್ಸೆಲಿಂಗ್ ತಜ್ಞರು ವಿಚಾರಣೆ ನಡೆಸುತ್ತಿದ್ದಾರೆ. ಪಿಎಸ್ಐ ಕಿರುಕುಳದಿಂದ ಬೇಸತ್ತಿರುವ ಮಹಿಳಾ ಸಿಬ್ಬಂದಿಗಳು ಮೇಲಧಿಕಾರಿಗಳ ಮೊರೆ ಹೋಗಿದ್ದಾರೆ. ಕಳೆದ 2 ದಿನಗಳ ಹಂದ ಮಹಿಳಾ ಪೇದೆ ಆತ್ಮಹತ್ಯೆಗೆ ಯತ್ನಿಸಿದ ನಂತರ ಇದೀಗ ಮತ್ತೆ ಕೆಲವರು ತಮ್ಮ ನೋವು ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ನಡುವೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸುವಾಗ ಸಿಬ್ಬಂದಿಗಳಿಂದ ರಕ್ಷಿಸಲ್ಪಟ್ಟ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಇಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸದ್ಯ ಎಲ್ಲರ ದೂರು ಕುರಿತು ಮಾಹಿತಿ ಕಲೆ ಹಾಕುತ್ತಿರುವ ಹಿರಿಯ ಅಧಿಕಾರಿಗಳು ಸಮಸ್ಯೆ ಆಲಿಸುತ್ತಿದ್ದಾರೆ. ಈ ನಡುವೆ ಮೇಲಧಿಕಾರಿಗಳ ಸೂಚನೆ ಮೇರೆಗೆ ಡೆತ್ ನೋಟ್ ನಾಶಪಡಿಸಿರುವ ಆರೋಪವೂ ಕೇಳಿಬಂದಿದ್ದು, ಪಿಎಸ್ಐ ಈ ಹಿಂದೆ ಕೆಲಸ ಮಾಡಿದ್ದ ಹಲವು ಠಾಣೆಗಳಲ್ಲೂ ಕೆಲ ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ ನೀಡಿರುವ ಆರೋಪವಿತ್ತು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳಾ ಕಾನ್ಸ್ಟೆಬಲ್ ಅವರನ್ನು ಸಂಪರ್ಕಿಸಿದಾಗ, “ಆ ರೀತಿ ಯಾವುದೇ ಘಟನೆ ನಡೆದಿಲ್ಲ, ಸುಳ್ಳುಸುದ್ದಿ ಹರಿದಾಡಿದೆ. ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗಳು ಇರುವುದರಿಂದ ಕೌನ್ಸೆಲಿಂಗ್ ಪ್ರೊಸೆಸ್ ನಡೆಯುತ್ತಿದೆ” ಎಂದು ಪ್ರತಿಕ್ರಿಯಿಸಿದ್ದಾರೆ, ಘಟನೆ ನಡೆದ ದಿನವೂ ನಾನು ಕರ್ತವ್ಯದಲ್ಲಿಯೇ ಇದ್ದೆ, ಇಂದೂ ಕೂಡಾ ಕರ್ತವ್ಯದಲ್ಲಿ ಇದ್ದೇನೆ. ನಿಮಗೇನಾದರೂ ಮಾಹಿತಿ ಬೇಕಿದ್ದರೆ, ಪಿಎಸ್ಐ ಅವರನ್ನೇ ಸಂಪರ್ಕಿಸಿ ಎಂದಿದ್ದಾರೆ ಈ ಉತ್ತರವು ಅನುಮಾನಕ್ಕೆ ಪುಷ್ಠಿ ನೀಡಿದಂತಾಗಿದೆ.
ಸುಳ್ಳುಸುದ್ದಿ ಹರಡಿದವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಾ..? ಎಂಬ ಪ್ರಶ್ನೆಗೆ, ʼನಮ್ಮ ಹೆಸರು ಬಂದಿಲ್ಲ, ಹಾಗಿದ್ದಲ್ಲಿ ನಾನೇಕೆ ಮಾತನಾಡಲಿʼ ಎಂದು ಹೇಳಿರುವುದು ಒಟ್ಟಾರೆಯಾಗಿ ಮಹಿಳಾ ಸಿಬ್ಬಂದಿಗಳ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದನ್ನು ಖಾತರಿಪಡಿಸುತ್ತಿದೆ.