ಮಲೆನಾಡಲ್ಲಿ ಹೆಚ್ಚುತ್ತಿದೆ ಎಲೆ ಚುಕ್ಕಿ ರೋಗ!
– ಲಕ್ಷಣಗಳು ಮತ್ತು ಹತೋಟಿ ಕ್ರಮ ಹೇಗೆ?
– ಮಳೆ ಹೆಚ್ಚಾಗಿದ್ದರಿಂದ ಎಲೆ ಚುಕ್ಕಿ ಹೆಚ್ಚಳ
NAMMUR EXPRESS NEWS
ಎಲೆ ಚುಕ್ಕೆ ರೋಗ ಬಾಧಿತ ಮರಗಳ ಕೆಳಗಿನ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ಈ ಚುಕ್ಕೆಗಳು ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಹೆಡೆಗಳನ್ನು ಆವರಿಸುತ್ತದೆ. ನಂತರ ಹೆಡೆಗಳು ಒಣಗಲಾರಂಭಿಸುತ್ತವೆ. ಇಂತಹ ಒಣಗಿದ ಎಲ್ಲಾ ಹೆಡೆಗಳು ಜೋತು ಬಿದ್ದು ಮರ ಶಕ್ತಿಕಳೆದುಕೊಂಡು ಇಳುವರಿ ಕುಂಠಿತವಾಗುತ್ತದೆ.
ಎಲೆ ಚುಕ್ಕಿ ರೋಗದ ಕಾರಣಗಳು
ಎಲೆಚುಕ್ಕೆ ರೋಗವು ಕೊಲ್ಲೆಟೋಟ್ರೈಕಮ್ ಗ್ಲೀಯೋಸ್ಪೊರೈಡ್ಸ್ ಮತ್ತು ಫಿಲ್ಲೊಸ್ಟಿಕ್ಟ ಅರಕೆ ಎಂಬ ಎರಡು ಶಿಲೀಂದ್ರಗಳಿಂದ ಉಂಟಾಗುತ್ತದೆ. ಶಿಲೀಂದ್ರವು ಬಿದ್ದ ಗರಿಗಳಲ್ಲಿ ವಾಸಿಸುತ್ತದೆ. ಮಳೆಹನಿಗಳು ಚಿಮ್ಮುವುವಿಕೆಯಿಂದ ಶಿಲೀಂದ್ರದ ಕಣಗಳು ಗಾಳಿಯಲ್ಲಿ ಸೇರಿ ಗರಿಗಳನ್ನು ತಲುಪುತ್ತವೆ. ಹಾಗೆಯೇ ತೇವಭರಿತ ಬಿಸಿಲಿನ ವಾತಾವರಣ, ಕಡಿಮೆ ಉಷ್ಣಂ (180 ರಿದ 240 ಸೆ) ಮತ್ತು ಹೆಚ್ಚಿನ ಆದ್ರತೆ (80 ರಿಂದ 90%) ಈ ರೋಗದ ತೀವ್ರತೆ ಮತ್ತು ಹರಡುವಿಕೆಗೆ ಪೂರಕವಾದ ಅಂಶಗಳಾಗಿವೆ. ಈ ರೋಗ ವರ್ಷ ಪೂರ್ತಿ ಕಂಡುಬಂದರೂ ಮಾರ್ಚ್ನಿಂದ ಸೆಪ್ಟಂಬರ್ ತಿಂಗಳ ತನಕ ಹೆಚ್ಚಾಗಿ ಬಾಧೆ ಉಂಟುಮಾಡುತ್ತದೆ.
ಅಡಕೆ ಎಲೆ ಚುಕ್ಕಿ ರೋಗ ನಿಯಂತ್ರಣ ಹೇಗೆ?
ರೋಗಬಾಧೆ ಕಾಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮುಂಗಾರು ಮಳೆ ಆರಂಭವಾಗುವ ಮುನ್ನ ಬೋರ್ಡೋ ಸಿಂಪಡಣೆ ಮಾಡುವುದು ಸೂಕ್ತ. ರೋಗಬಾಧಿತ ಸೋಗೆಯನ್ನು ತೆಗೆದು ನಾಶ ಪಡಿಸಬೇಕು. ತೋಟದಲ್ಲಿ ಬಿಸಿಲು ಬೀಳುವಂತೆ ಮಾಡಲು ಕಾಡು ಮರವಿದ್ದರೆ ಅವುಗಳ ರೆಂಬೆ ಕತ್ತರಿಸಿ, ಗಾಳಿ, ಬೆಳಕು ಚೆನ್ನಾಗಿರುವಂತೆ ಮಾಡಬೇಕು.
ಅಡಕೆ ಮರ ಆರೋಗ್ಯವಂತವಾಗಿರಲು ಸಾವಯವ ಗೊಬ್ಬರ ನೀಡಬೇಕು. ಶಿಫಾರಸು ಮಾಡಿದ ಸಾರಜನಕ, ರಂಜಕ, ಪ್ರೋಟಾನ್ ಗೊಬ್ಬರ ನೀಡಬೇಕು. ರೋಗ ಆರಂಭವಾದ ಲಕ್ಷಣ ಕಂಡು ಬಂದರೆ ಶಿಲೀಂದ್ರ ನಾಶಕ ಸಿಂಪಡಿಸಬೇಕು. ಜತೆಗೆ ಅಂತರ ಬೆಳೆಯಾದ ಕಾಳುಮೆಣಸಿಗೂ ಸಿಂಪಡಣೆ ಮಾಡಬೇಕು
ಮುಂಜಾಗ್ರತವಾಗಿ ಶಿಲೀಂಧ್ರನಾಶಕಗಳಾದ ಮ್ಯಾಂಕೋಜೆಬ್ (2.5 ಗ್ರಾಂ) ಅಥವಾ ಸಾಫ್ (ಮ್ಯಾಂಕೋಜೆಂಬ್ 63%+ ಕಾರ್ಬೆನ್ಡೈಜೀಮ್ 12%) 2 ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಹೆಕ್ಸಕೊನಜೋಲ್ ಶೇ 5 ಎಸ್. ಸಿ ಅಥವಾ ಪ್ರೊಪಿಕೊನಜೋಲ್ ಶೇ 25 ಇ. ಸಿ ಅಂತರವ್ಯಾಪಿ ಶಿಲೀಂಧ್ರನಾಶಕಗಳನ್ನು 1 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಅಂಟು ದ್ರಾವಣದ (1 ಮಿ.ಲೀ) ಜೊತೆಗೆ ಸಿಂಪಡಿಸಬೇಕು ಎಂದು ಕೃಷಿ ತಜ್ಞರು ಮಾಹಿತಿ ನೀಡಿದ್ದಾರೆ.