ಮನೆ ಹಂಚಿಕೆ ವಿಷಯದಲ್ಲಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರರವರ ತಾರತಮ್ಯ
* ಜ್ಞಾನೇಂದ್ರರವರ ಮಲತಾಯಿ ಧೋರಣೆ ಖಂಡಿಸಿ ಉಪವಾಸ ಸತ್ಯಾಗ್ರಹ
* ಹೊದಲ ಅರಳಾಪುರ ಗ್ರಾಮಕ್ಕೆ ಅನ್ಯಾಯ: ಗ್ರಾಮ ಪಂಚಾಯತಿ ಸದಸ್ಯ ವಿನಾಯಕ ತುಪ್ಪದಮನೆ
NAMMUR EXPRESS NEWS
ತೀರ್ಥಹಳ್ಳಿ: ಹೊದಲ ಅರಳಾಪುರ ಗ್ರಾಮ ಪಂಚಾಯಿತಿಗೆ ಮನೆಗಳ ಹಂಚಿಕೆ ವಿಚಾರದಲ್ಲಿ ಶಾಸಕ ಆರಗ ಜ್ಞಾನೇಂದ್ರರವರ ಮಲತಾಯಿ ಧೋರಣೆಯನ್ನು ಖಂಡಿಸಿ, ನ್ಯಾಯಕ್ಕಾಗಿ ಗ್ರಾಮ ಪಂಚಾಯತಿ ಸದಸ್ಯ ವಿನಾಯಕ ತುಪ್ಪದಮನೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತೀರ್ಥಹಳ್ಳಿ ತಾಲ್ಲೂಕಿನ ಸಾಮಾನ್ಯ ವರ್ಗದ ಬಡವರಿಗೆ, ಹಿಂದುಳಿದ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಕೇಂದ್ರ ಸರ್ಕಾರದಿಂದ ಮನೆಗಳು ಮಂಜೂರು ಆಗಿರುತ್ತದೆ. ಆದರೆ ಈ ಮನೆಗಳ ಹಂಚಿಕೆ ವಿಷಯದಲ್ಲಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರವರು ತಾರತಮ್ಯ ಮಾಡಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ರೀತಿಯಲ್ಲಿ ಅನ್ಯಾಯ ಮಾಡಿದ್ದಾರೆ. ತಾಲ್ಲೂಕಿನ ಕೆಲವು ಗ್ರಾಮ ಪಂಚಾಯತಿಗಳಿಗೆ 100 ಮನೆಗಳನ್ನು ಹಂಚಿಕೆ ಮಾಡಿ ಹೊದಲ ಅರಳಾಪುರ ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ಮಂಜೂರು ಆಗಿರುವ ಮನೆಗಳಲ್ಲಿ ಕೇವಲ ಒಂದೇ ಒಂದು ಮನೆಯನ್ನು ಹಂಚಿಕೆ ಮಾಡಿರುತ್ತಾರೆ. ಈಗಾಗಲೇ ಹೊದಲ ಅರಳಾಪುರ ಗ್ರಾಮ ಪಂಚಾಯತಿಗೆ ಮನೆಯ ಅವಶ್ಯಕತೆ ಇರುವಂತಹ ಬಡವರು ಮನೆಗಳಿಗಾಗಿ 150ಕ್ಕೂ ಹೆಚ್ಚು ಜನರು ಅಧಿಕೃತವಾಗಿ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಶಾಸಕರು ಈ ಭಾಗದ ಜನರ ಕನಸನ್ನು ಹುಸಿ ಮಾಡಿದ್ದಾರೆ. ಕೂಡಲೇ ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡಿ, ಅಗತ್ಯವಿರುವ ಮನೆಗಳನ್ನು ಮಂಜೂರು ಮಾಡಬೇಕೆಂದು ಶಾಸಕರಲ್ಲಿ ಕೇಳಿಕೊಳ್ಳುತ್ತೇನೆ.
ಇಲ್ಲವಾದರೆ ಹೊದಲ ಅರಳಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಡಜನರಿಗೆ ಶಾಸಕರು ಮಾಡಿರುವ ಅನ್ಯಾಯದ ವಿರುದ್ಧ ನಮ್ಮ ನಾಯಕರಾದ ಮಾಜಿ ಶಿಕ್ಷಣ ಸಚಿವರು ಶ್ರೀ ಕಿಮ್ಮನೆ ರತ್ನಾಕರ್ರವರು ಮತ್ತು ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಶ್ರೀ ಆರ್.ಎಂ. ಮಂಜುನಾಥಗೌಡರ ಸಲಹೆ ಪಡೆದು ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಕಛೇರಿಯ ಎದುರು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೊದಲ ಅರಳಾಪುರ ಗ್ರಾಮ ಪಂಚಾಯತಿ ಸದಸ್ಯ, ಕಾಂಗ್ರೇಸ್ ಪಕ್ಷದ ತಾಲ್ಲೂಕು ಕಾರ್ಮಿಕ ವಿಭಾಗ ಅದ್ಯಕ್ಷ ವಿನಾಯಕ ತುಪ್ಪದ ಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.