ನಾನು ಕೋರ್ಟ್, ದೇವರನ್ನು ನಂಬುತ್ತೇವೆ, ಟೈಂ ಬರುತ್ತೆ!
– ಕೈ ಸರ್ಕಾರದ ವಿರುದ್ಧ ರೇವಣ್ಣ ಕಿಡಿ: ವರ್ಗಾವಣೆ ದಂಧೆ ಬಾಂಬ್!
– ಹಾಸನ ಜಿಲ್ಲೆ ರೈತರಿಗೆ ಪರಿಹಾರ ಇಲ್ಲ: ರಸ್ತೆ ಗುಂಡಿ ಮುಚ್ಚಲು ಹಣ ನೀಡುತ್ತಿಲ್ಲ
NAMMUR EXPRESS NEWS
ಹಾಸನ: ಮಳೆಯಿಂದ ಹಾನಿ ಅನುಭವಿಸಿರುವ ಜಿಲ್ಲೆಯ ಸಾವಿರಾರು ರೈತರಿಗೆ ಪರಿಹಾರ ಕೊಡಲು ರಾಜ್ಯ ಸರ್ಕಾರ ಸತಾಯಿಸುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತೀವ್ರವಾಗಿ ಖಂಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಸ್ತೆ, ಸೇತುವೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ, ಅಂಗನವಾಡಿ ಸೇರಿದಂತೆ ಆಸ್ತಿಪಾಸ್ತಿ ನಷ್ಟಕ್ಕೂ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ರೈತರು ಕಾಯುತ್ತಿದ್ದು, ಇನ್ನಾದರೂ ಹಾನಿಗೆ ಪರಿಹಾರ ಕೊಡಿ ಎಂದು ಆಗ್ರಹಿಸಿದರು. ಐದು ಗ್ಯಾರಂಟಿಗಳಿಗೆ ಹಣ ನೀಡುತ್ತಿರುವುದರಿಂದ ರೈತರಿಗೆ ಪರಿಹಾರ ಕೊಡಲು ಆಗದೇ ಇದ್ದರೆ ಅದನ್ನು ಜನರ ಮುಂದೆ ಹೇಳಿ ಬಿಡಲಿ ಎಂದರು.
ಮಳೆಹಾನಿಯಾಗಿ ಕಳೆದ ನಾಲ್ಕೈದು ತಿಂಗಳು ಕಳೆದರೂ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದೆ. ತೋಟಗಾರಿಕೆ ಇಲಾಖೆಯಲ್ಲಿ
೪೪೪ ಹೆಕ್ಟೇರ್, ಕೃಷಿ ಇಲಾಖೆಯಲ್ಲಿ ೮೬೧ ಹೆಕ್ಟೇರ್, ೯೯ ಕೆರೆ, ೬೪೬ ಕಿಮೀ ಲೋಕೋಪಯೋಗಿ ರಸ್ತೆ, ೩೮ ಸೇತುವೆ, ೬೫೦ ಶಾಲೆ, ೩೬೯ ಅಂಗನವಾಡಿ, ೧೨೨೭ ವಿದ್ಯುತ್ ಕಂಬ ಹಾಳಾಗಿದ್ದರೂ, ಸರ್ಕಾರ ಕಂಡೂ ಕಾಣದಂತೆ ಇದೆ. ರೈತರ ಬಗ್ಗೆ ಅಸಡ್ಡೆ ತೋರುತ್ತಿದೆ ಎಂದು ಕಿಡಿ ಕಾರಿದರು. ರೈತರ ದೃಷ್ಟಿಯಲ್ಲಿ ಅಂದಾಜಿಸುವುದಾದರೆ ೩-೪ ಸಾವಿರ ಕೋಟಿ ನಷ್ಟವಾಗಿದೆ. ಆದರೆ ಈ ಸರ್ಕಾರ ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರವೇ ಪರಿಹಾರ ಕೊಡಲು ಹಿಂದೇಟು ಹಾಕುತ್ತಿದೆ ಎಂದರು.
ವಿಪರ್ಯಾಸ ಎಂದರೆ ರಸ್ತೆ ಗುಂಡಿ ಮುಚ್ಚಲು ಈ ಸರ್ಕಾರ ಹಣ ನೀಡುತ್ತಿಲ್ಲ. ಗ್ರಾಮೀಣಾಭಿವೃದ್ಧಿಗೆ ೧ ರೂ. ನೀಡಿಲ್ಲ ಎಂದು ದೂರಿದರು.
ನಾನು ಅಭಿವೃದ್ಧಿ ಮಾಡುತ್ತಿದ್ದೇವೆ, ರೈತರ ಹಿತ ಕಾಯುತ್ತಿದ್ದೇವೆ ಎಂದೆಲ್ಲಾ ಹೇಳೋ ಸರ್ಕಾರ, ಪರಿಹಾರ ಕೊಡದೇ ಇರುವುದಕ್ಕೆ ಏನು ರೋಗ, ಕೇವಲ ಕೇಂದ್ರದತ್ತ ಬೊಟ್ಟು ಮಾಡಿ ಕೂರುವುದು ಸರಿಯೇ ಎಂದು ಕಿಡಿ ಕಾರಿದರು. ಇನ್ನೂ ಕೆಲ ದಿನ ಕಾಯುತ್ತೇವೆ. ನಂತರ ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದರು.
ನಿರಾಸೆ ಕಾದಿದೆ: ಕಾಂಗ್ರೆಸ್ನ ಕೆಲ ಸಚಿವರು ದೇವೇಗೌಡರ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಪೊಲೀಸರನ್ನು ಬಿಟ್ಟು ಅಥವಾ ಬೇರಾವುದೋ ಒತ್ತಡದಿಂದ ಗೌಡರ ಕುಟುಂಬ ಮುಗಿಸುತ್ತೇವೆ ಎಂದು ಹೊರಟವರಿಗೆ ನಿರಾಶೆ ಆಗಲಿದೆ, ಕಾಲ ಒಂದೇ ಸಮ ಇರಲ್ಲ ಎಂದು ಎಚ್ಚರಿಸಿದರು. ಇವರು ಏನೇ ಸಂಚು ಮಾಡಿದರೂ ನಮ್ಮ ಕುಟುಂಬ ಹೆದರಲ್ಲ ಎಂದು ತಿರುಗೇಟು ನೀಡಿದರು.
ಗೌಡರು ಕಣ್ಣೀರು ಹಾಕಿಸಿಲ್ಲ: ಇದೇ ವೇಳೆ ದೇವೇಗೌಡರು ಯಾರಿಗೂ ಕಣ್ಣೀರು ಹಾಕಿಸಲು ಹೋಗಿಲ್ಲ, ಅವರೇ ಅಗತ್ಯವಿದ್ದಾಗ ಗೌಡರ ಬಳಿ ಬಂದು ಕಣ್ಣೀರು ಹಾಕಿದ್ದಾರೆ. ಕೈ ಕಾಲು ಹಿಡಿದಿದ್ದಾರೆ ಎಂದು ಕೈ ಸಚಿವರಿಗೆ ಟಾಂಗ್ ನೀಡಿದರು.
ನಮ್ಮ ಕುಟುಂಬದ ಕೆಲವರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಾನು ಕೋರ್ಟ್, ದೇವರನ್ನು ನಂಬುತ್ತೇವೆ. ಆ ಬಗ್ಗೆ ಈಗ ಮಾತನಾಡಲ್ಲ. ಟೈಂ ಬಂದಾಗ ಎಲ್ಲಾ ಹೇಳುವೆ ಎಂದು ಪ್ರತಿಕ್ರಿಯಿಸಿದರು.
ಹಾಸನ ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ವರ್ಗಾವಣೆ ದಂಧೆ ಮಿತಿ ಮೀರಿದೆ. ಹಾಸ್ಟೆಲ್ ಅಡುಗೆಯವರು, ಅಟೆಂಡರ್ಗಳನ್ನು ವರ್ಗ ಮಾಡಲು ೫-೧೦ ಸಾವಿರಕ್ಕೆ ಮಧ್ಯವರ್ತಿಗಳನ್ನು ಬಿಟ್ಟು ಕೈಚಾಚಲಾಗುತ್ತಿದೆ ಎಂದು ಬಾಂಬ್ ಸಿಡಿಸಿದ ರೇವಣ್ಣ, ಸಾಕ್ಷ್ಯ ಬೇಕಿದ್ದರೆ ದಾಖಲೆ ಬಿಡುಗಡೆ ಮಾಡುವೆ ಎಂದು ಸವಾಲು ಹಾಕಿದರು. ಹಣ ಕೊಡದೇ ಹೋದರೆ ಹೆದರಿಸಲಾಗುತ್ತಿದೆ. ಇದಕ್ಕೆ ಅಧಿಕಾರಿಗಳು, ಸರ್ಕಾರ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು