ಹೊಸದುರ್ಗವನ್ನು ಅಭಿವೃದ್ಧಿಪಡಿಸಿ ಮಾದರಿಯಾಗಿಸುವ ಕನಸು!
– 50ನೇ ವರ್ಷದ ಸಂಭ್ರಮಾಚರಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್
– ರಾಜಕಾರಣಕ್ಕೆ ಬಂದು ಭ್ರಷ್ಟಾಚಾರ ಮಾಡಲ್ಲ, ಉದ್ಯೋಗ ಸೃಷ್ಟಿ ಪ್ಲಾನ್
NAMMUR EXPRESS NEWS
ಹೊಸದುರ್ಗ: ಹೊಸದುರ್ಗ ತಾಲ್ಲೂಕಿನಲ್ಲಿ ಕೈಗಾರಿಕಾ ಉದ್ದಿಮೆಗಳನ್ನ ಸ್ಥಾಪಿಸಿ ಯುವಕರಿಗೆ ಒಳ್ಳೆಯ ಉದ್ಯೋಗವಕಾಶ ಸಿಗುವಂತೆ ಮಾಡುವ ಕನಸು ನನ್ನದು ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದ್ದಾರೆ.
ಹೊಸ ದುರ್ಗ ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಅಭಿಮಾನಿಗಳು ಆಯೋಜಿಸಿದ್ದ 50ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ,
ನನ್ನ ತಂದೆಯ ಊರು ಪಕ್ಕದ ತಾಲೂಕಿನ ಎನ್.ಜಿ.ಹಳ್ಳಿ. ಆದರೆ, ನನ್ನೆಲ್ಲಾ ಆಸ್ತಿ ಜಮೀನು, ತೋಟ, ಮನೆ ಎಲ್ಲ ಇರುವುದು ಹೊಸದುರ್ಗ ತಾಲೂಕಿನಲ್ಲಿಯೇ. ನಾನು ಹೊಸದುರ್ಗ ತಾಲ್ಲೂಕಿನ ವ್ಯಕ್ತಿಯೇ, ಹೊಸದುರ್ಗ ತಾಲೂಕಿನ ಬಗ್ಗೆ ನನಗೆ ವಿಶೇಷವಾದ ಕನಸಿದ್ದು, ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ ಹಾಗೂ ಮಾರ್ಗದರ್ಶನದ ಮೂಲಕ ಅಭಿವೃದ್ಧಿಪಡಿಸುವ ಕೆಲಸ ಮಾಡುವೆ ಎಂದರು.
ನನ್ನ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರ ಎಂಬ ಪದ ನನ್ನ ಹತ್ತಿರ ಸುಳಿಯಬಾರದು ಎಂದು ಶುದ್ಧ ರಾಜಕಾರಣ ಮಾಡುತ್ತಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯರು ನನಗೆ ಬೆಂಬಲ ನೀಡಿ ವಿಧಾನ ಪರಿಷತ್ಗೆ ಆಯ್ಕೆ ಮಾಡಿ ಕಳಿಸಿದ್ದಾರೆ. ಬಿಜೆಪಿ ಪಕ್ಷಕ್ಕಾಗಿ ಹಗಲು ಇರುಳು ಶ್ರಮಿಸಿದ್ದೇನೆ.
ಗ್ರಾಮ ಪಂಚಾಯಿತಿ ಕಾರ್ಯಾಲಯದ ನಿರ್ಮಾಣದ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಮುನ್ನಡೆ ಬರೆಯಲು ಸಿದ್ಧನಿದ್ದೇನೆ. ಮುಂದಿನ ದಿನಗಳಲ್ಲಿ ಗಟ್ಟಿಯಾಗಿ ಹೊಸದುರ್ಗದಲ್ಲಿ ನಿಂತು ನಿಮ್ಮೆಲ್ಲರ ಪರವಾಗಿ ಕೆಲಸ ಮಾಡುತ್ತೇನೆ. ಇದನ್ನು ನನ್ನ ಕಾಯಕ ಕ್ಷೇತ್ರವನ್ನಾಗಿ ಮಾಡುವೆ. ಇನ್ನೂ ಮುಂದೆ ವಾರದ 3 ದಿನ ತಾಲೂಕಿನ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ, ಜನರ ಕಷ್ಟ ಸುಖಗಳನ್ನು ಆಲಿಸುವೆ. ಸದಾ ತಾಲೂಕಿನ ಜನರ ಜೊತೆ ಇರುತ್ತೇನೆ. ಯಾವುದೇ ಅಧಿಕಾರ ಅಪೇಕ್ಷೆ ಪಟ್ಟರೆ ಸಿಗುವುದಿಲ್ಲ. ಜನರ ಆಶೀರ್ವಾದ ಮತ್ತು ಸಹಕಾರ ಇದ್ದರೆ ಮಾತ್ರ ಸಾಧ್ಯ. ಮೊದಲು ಈ ತಾಲೂಕಿನ ಜನರ ಮನಸ್ಸನ್ನು ಗೆದ್ದು ಪ್ರೀತಿ ಪಡೆಯುವ ಕೆಲಸ ಮಾಡುವೆ. ನಾನು ಎಂದಿಗೂ ಅಧಿಕಾರದ ಬೆನ್ನ ಹಿಂದೆ ಬಿದ್ದವನಲ್ಲ, ಜನರ ಸೇವೆ ಮಾಡಲು ರಾಜಕಾರಣಕ್ಕೆ ಬಂದವನು ಎಂದು ಹೇಳಿದರು.
ಈ ವೇಳೆ ಬಿಜೆಪಿ ಪಕ್ಷದ ಮುಖಂಡರು, ನವೀನ್ ಅಭಿಮಾನಿಗಳ ಬಳಗದ ಸದಸ್ಯರು ಹಾಗೂ ನೂರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.